Kannada NewsKarnataka NewsLatest

*ನಾಳೆಯಿಂದ ಮೂರು ತಿಂಗಳ ಕಾಲ ಜಲಸಾಹಸ ಕ್ರೀಡೆಗಳಿಗೆ ಸಂಪೂರ್ಣ ನಿಷೇಧ: ಡಿಸಿ ಆದೇಶ*

ಪ್ರಗತಿವಾಹಿನಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಜೂನ್ 1ರಿಂದ ಅನ್ವಯವಾಗುವಂತೆ ಮುಂದಿನ ಮೂರು ತಿಂಗಳ ಕಾಲ ಎಲ್ಲಾ ರೀತಿಯ ಜಲಸಾಹಸ ಕ್ರೀಡೆಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

Home add -Advt

ಪ್ರತಿ ವರ್ಷದಂತೆ ಈ ವರ್ಷವೂ ಮಳೆಗಾಲದಲ್ಲಿ ಪ್ರವಾಸಿಗರ ಹಾಗೂ ಸಾರ್ವಜನಿಕರ ಪ್ರಾಣ ರಕ್ಷಣೆಯ ದೃಷ್ಟಿಯಿಂದ ಈ ನಿಯಮವನ್ನು ಜಾರಿಗೊಳಿಸಲಾಗಿದೆ. ಮಳೆಗಾಲದ ಆರಂಭ ಹಾಗೂ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜೂನ್ 1 ರಿಂದ ಆಗಸ್ಟ್ 31 ರ ವರೆಗೆ ಜಿಲ್ಲೆಯ ಯಾವುದೇ ಭಾಗದಲ್ಲಿ ಜಲಸಾಹಸ ಕ್ರೀಡೆಗಳನ್ನು ನಡೆಸುವಂತಿಲ್ಲ ಎಂದು ತಿಳಿಸಿದ್ದಾಅರೆ.

ಅರಬ್ಬಿ ಸಮುದ್ರ ಸೇರಿದಂತೆ ಜಿಲ್ಲೆಯ ಪ್ರಮುಖ ನದಿಗಳು ಹಾಗೂ ಇತರೆ ನೀರಿನ ಆಕರಗಳಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಿಗೂ ಈ ನಿಷೇಧ ಅನ್ವಯಿಸಲಿದೆ. ಪ್ರವಾಸಿ ಆಕರ್ಷಣೆಗಳಾದ ಅರಬ್ಬಿ ಸಮುದ್ರದಲ್ಲಿನ ಪ್ರಸಿದ್ಧ ಸ್ಕೂಬಾ ಡೈವಿಂಗ್ , ಶರಾವತಿ ನದಿಯಲ್ಲಿನ ಬೋಟಿಂಗ್ ಹಾಗೂ ದಾಂಡೇಲಿ ಭಾಗದ ಕಾಳಿ ನದಿಯಲ್ಲಿ ನಡೆಯುವ ಸಾಹಸಮಯ ವೈಟ್‌ವಾಟರ್ ರ್ಯಾಫ್ಟಿಂಗ್ ಸೇರಿದಂತೆ ಎಲ್ಲಾ ಬಗೆಯ ಕಮರ್ಷಿಯಲ್ ಜಲಸಾಹಸ ಕ್ರೀಡೆಗಳನ್ನು ಕಡ್ಡಾಯವಾಗಿ ಸ್ಥಗಿತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ನಾಳೆಯಿಂದ ಜಿಲ್ಲೆಯ ಯಾವುದೇ ಕಡಲತೀರ ಅಥವಾ ನದಿ ತೀರಗಳಲ್ಲಿ ನಿಯಮ ಮೀರಿ ಜಲಸಾಹಸ ಕ್ರೀಡೆಗಳನ್ನು ಆಯೋಜಿಸುವುದು ಕಂಡುಬಂದರೆ, ಅಂತಹ ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.


Related Articles

Back to top button