Kannada NewsKarnataka NewsLatest

*ಕೇಂದ್ರ ರಕ್ಷಣಾ ಸಚಿವರನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿ: ಬೆಳಗಾವಿ ವಿಷಯ ಪ್ರಸ್ತಾಪಿಸಿದ್ದೇಕೆ?*

ಕೇಂದ್ರ ರಕ್ಷಣಾ ಸಚಿವರನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ,  ನವದೆಹಲಿ :
  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ರಾಜ್ಯ ಸರ್ಕಾರಕ್ಕೆ ಸೇರಿದ ಬೆಳಗಾವಿಯ  732.24 ಎಕರೆ ಪ್ರದೇಶವು ರಕ್ಷಣಾ ಪ್ರಾಧಿಕಾರದ ವಶದಲ್ಲಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ಈ ಭೂ ಪ್ರದೇಶವನ್ನು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲು ರಕ್ಷಣಾ ಪ್ರಾಧಿಕಾರಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೇಂದ್ರ ರಕ್ಷಣಾ ಸಚಿವರನ್ನು ಕೋರಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಜಲಸಂಪನ್ಮೂಲ ಮತ್ತು ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್  ಉಪಸ್ಥಿತರಿದ್ದರು.

 

 ಕೇಂದ್ರ ಸಚಿವ ಪಿಯೂಶ್ ಗೋಯಲ್ ಭೇಟಿ

*ಮಿತ್ರಾ ಯೋಜನೆಯಡಿ ರಾಜ್ಯದ 3 ಜಿಲ್ಲೆಗಳಲ್ಲಿ ಮೆಗಾ ಜವಳಿ ಪಾರ್ಕ್ ಸ್ಥಾಪನೆಗೆ ಅನುದಾನ  ಒದಗಿಸಲು  ಮನವಿ*
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕೇಂದ್ರ  ಸಚಿವ ಪಿಯೂಶ್ ಗೋಯಲ್ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಕರ್ನಾಟಕದ ಕಲಬುರಗಿ, ತುಮಕೂರು, ವಿಜಯಪುರ ಜಿಲ್ಲೆಗಳಲ್ಲಿ  ಮಿತ್ರಾ ಯೋಜನೆಯಡಿ ಸಹಾಯಾನುದಾನ ಪಡೆದು ವಿಶ್ವಮಟ್ಟದ ಮೆಗಾ ಜವಳಿ ಪಾರ್ಕ್ ಸ್ಥಾಪನೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ.  ಈ ಮೂರು ಜಿಲ್ಲೆಗಳು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಿಗೆ ಸಮೀಪದಲ್ಲಿದ್ದು, ಎಲ್ಲಾ ಪ್ರಮುಖ ನಗರಗಳಿಗೆ  ಹಾಗೂ ಬಂದರುಗಳಿಗೆ ಕೂಡ ಸಂಪರ್ಕವಿದೆ. ಈ ಜಿಲ್ಲೆಗಳಲ್ಲಿ ಮೆಗಾ ಜವಳಿ ಪಾರ್ಕ್ ಸ್ಥಾಪನೆಯಿಂದಾಗಿ  ಜವಳಿ ಕೇಂದ್ರವಾಗಿ  ಜಿಲ್ಲೆಗಳನ್ನು ಪರಿವರ್ತಿಸಲು ಸಾಧ್ಯವಾಗಲಿದೆ.  ಪ್ರಧಾನಮಂತ್ರಿಗಳ ಕನಸಿನಂತೆ ಜವಳಿ ಕೇತ್ರದಲ್ಲಿ ದೇಶ ಆತ್ಮನಿರ್ಭರ್ ಆಗಲು ಕೂಡ ಸಹಕಾರಿಯಾಗಲಿದೆ.
ಇದಲ್ಲದೆ ವಿಜಯಪುರ, ತುಮಕೂರು ಹಾಗೂ ಕಲಬುರಗಿ ಜಿಲ್ಲೆಗಳು ಶೈಕ್ಷಣಿಕ ಹಾಗೂ ತಾಂತ್ರಿಕ ಸಂಸ್ಥೆಗಳನ್ನು ಹೊಂದಿದ್ದು,  ಕೌಶಲ್ಯವುಳ್ಳ ಮಾನವ ಸಂಪನ್ಮೂಲಗಳನ್ನು ಜವಳಿ ಉದ್ಯಮಕ್ಕೆ ಒದಗಿಸಲು ಶಕ್ತವಾಗಿರುವುದರಿಂದ ಕೇಂದ್ರ ಸರ್ಕಾರದ ಮಿತ್ರಾ ಯೋಜನೆಯಡಿ  ಈ ಮೂರು ಜಿಲ್ಲೆಗಳನ್ನು  ಸೇರ್ಪಡೆಗೊಳಿಸುವಂತೆ ಮುಖ್ಯಮಂತ್ರಿಗಳು ಕೇಂದ್ರ ಜವಳಿ ಖಾತೆ ಸಚಿವರೂ ಆದ ಪಿಯೂಶ್ ಗೋಯಲ್ ಅವರಿಗೆ  ಮನವಿ ಮಾಡಿದರು.
*ರಾಜ್ಯಕ್ಕೆ 2 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬಿಡುಗಡೆಗೆ ಸಿಎಂ  ಮನವಿ*
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ರಾಜ್ಯಕ್ಕೆ ಹತ್ತು ಸಾವಿರ ಮೆಟ್ರಿಕ್ ಟನ್ ಗಳ ಅಕ್ಕಿ ಸರಬರಾಜನ್ನು ಸೀಮಿತಗೊಳಿಸಿರುವ ನೀತಿಯನ್ನು  ಮರು ಪರಿಶೀಲಿಸುವಂತೆ ಮನವಿ ಸಲ್ಲಿಸಿದರು.
ಭಾರತೀಯ  ಆಹಾರ  ನಿಗಮದ ವತಿಯಿಂದ ಮಾರ್ಚ್ 23 ರವರೆಗೆ ತೆರೆದ ಮಾರುಕಟ್ಟೆ ಮಾರಾಟ ಯೋಜನೆಯಡಿ  2 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಬಿಡುಗಡೆ ಮಾಡುವಂತೆ ಹಾಗೂ ತಕ್ಷಣವೇ 50 ಸಾವಿರ ಮೆಟ್ರಿಕ್ ಟನ್  ಅಕ್ಕಿಯನ್ನು ಬಿಡುಗಡೆ ಮಾಡುವಂತೆಯೂ ಮುಖ್ಯಮಂತ್ರಿಗಳು  ಕೋರಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಬೃಹತ್ ಮತ್ತು ಮಧ್ಯಮ ನೀರಾವರಿ, ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಹಾಗೂ ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಉಪಸ್ಥಿತರಿದ್ದರು.

 ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿದ ಸಿಎಂ ಬೊಮ್ಮಾಯಿ

*ಕರಡಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಮನವಿ*
 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕೇಂದ್ರ ಅರಣ್ಯ ಸಚಿವ ಶ್ರೀ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಗುಡೆಕೋಟೆ  ಸ್ಲಾತ್ ಕರಡಿಧಾಮ ಹಾಗೂ ಭೀಮಾಗಡ್  ಅಭಯಾರಣ್ಯಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವಂತೆ ಮನವಿ ಮಾಡಿದರು. ಈಗಾಗಲೇ ಕರಡು ಅಧಿಸೂಚನೆಯನ್ನು ರಾಜ್ಯ ಸಚಿವ ಸಂಪುಟ ಸಭೆ ಅನುಮೋದಿಸಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಶಿಫಾರಸ್ಸು ಮಾಡಿ ಸಲ್ಲಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.
https://pragati.taskdun.com/cm-basavaraj-bommaireactioncongresss-tweet/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button