Kannada NewsKarnataka NewsNationalPolitics

*ಮುಂದಿನ ಪೀಳಿಗೆಯ ನಾಯಕಿಯರನ್ನು ತಯಾರಿ ಮಾಡಲು ಹಿರಿಯರಿಂದ ಸಲಹೆ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಮುಂದಿನ ಪೀಳಿಗೆಯ ನಾಯಕಿಯರನ್ನು ತಯಾರಿ ಮಾಡುವುದು, ಗ್ಯಾರಂಟಿ ಯೋಜನೆಗಳ ಬಗ್ಗೆ ಮಹಿಳೆಯರ ಅಭಿಪ್ರಾಯ ಸಂಗ್ರಹ ಹಾಗೂ ಕಾಂಗ್ರೆಸ್ ಪಕ್ಷದತ್ತ ಮಹಿಳೆಯರನ್ನು ಸೆಳೆಯುವ ವಿಚಾರವಾಗಿ ಪಕ್ಷದ ಹಿರಿಯ ನಾಯಕಿಯರ ಅಭಿಪ್ರಾಯ ಸಂಗ್ರಹಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ಮಹಿಳಾ ಕಾಂಗ್ರೆಸ್ ಹಿರಿಯ ಮುಖಂಡರ ಸಭೆ ಬಳಿಕ ಶಿವಕುಮಾರ್ ಅವರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;

“ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರ ಭಾವನೆ ಏನಿದೆ,  ನಾವು ಇಷ್ಟು ಉತ್ತಮ ಯೋಜನೆ ಕೊಟ್ಟಿದ್ದರೂ ಜನರ ನಿರೀಕ್ಷೆ ಏನು? ನಮಗೆ ಚುನಾವಣೆಯಲ್ಲಿ ಇನ್ನಷ್ಟು ಕ್ಷೇತ್ರ ಗೆಲ್ಲುವ ನಿರೀಕ್ಷೆ ಇತ್ತು. ಮುಂದಿನ ದಿನಗಳಲ್ಲಿ ಮಹಿಳೆಯರನ್ನು ರಾಜಕೀಯವಾಗಿ ಯಾವ ರೀತಿ ತಯಾರು ಮಾಡುವುದು, ಹಿರಿಯ ಮಹಿಳಾ ನಾಯಕಿಯರ ಜವಾಬ್ದಾರಿ ಕುರಿತು ಚರ್ಚೆ ಮಾಡಲು ಇಂದು ಪಕ್ಷದ ಹಿರಿಯ ನಾಯಕಿಯರ ಸಭೆ ಕರೆಯಲಾಗಿತ್ತು. 

ಸುಮಾರು 40 ಮಂದಿ ಹಿರಿಯ ನಾಯಕಿಯರು ತಮ್ಮ ಅನುಭವಗಳನ್ನು ಆಧರಿಸಿ ಸಲಹೆ ನೀಡಿದ್ದಾರೆ. ಪಕ್ಷದ ಎಲ್ಲಾ ಮಟ್ಟದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಬೇಕು. ನಮ್ಮ ಪಕ್ಷ ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮೀಸಲಾತಿ ನೀಡಿದ್ದು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿ ತರಲು ಹೋರಾಟ ಮಾಡುತ್ತಿದ್ದೇವೆ. 

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆ ಚುನಾವಣೆಯಲ್ಲಿ 11 ಹಾಗೂ ಲೋಕಸಭೆ ಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ಹಂಚಿಕೆ ಮಾಡಲಾಗಿತ್ತು. ಕುಟುಂಬದವರ ಜತೆಗೆ ಕಾರ್ಯಕರ್ತರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಅವರನ್ನು ಯಾವ ರೀತಿ ನಾಯಕರಾಗಿ ತಯಾರು ಮಾಡಲು ಸಾಧ್ಯ ಎಂಬುದರ ಬಗ್ಗೆ ಚರ್ಚೆ ಮಾಡಲಾಯಿತು. ನಮ್ಮ ಹಿರಿಯ ನಾಯಕಿಯರು ತಮ್ಮ ಸಲಹೆ, ಅಭಿಪ್ರಾಯ ನೀಡಿದ್ದು, ಅವರಿಗೆ ಪಕ್ಷದ ಪರವಾಗಿ ಧನ್ಯವಾದಗಳು.

ರಾಜಕೀಯ ನಾಯಕತ್ವ, ಚುನಾವಣಾ ರಾಜಕಾರಣಕ್ಕೆ ಅವರನ್ನು ತಯಾರು ಮಾಡುವ ನಿಟ್ಟಿನಲ್ಲಿ ಚರ್ಚೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಂದ 50 ಸಾವಿರ ಕೋಟಿ ಹಣ ವಿನಿಯೋಗ ಮಾಡುತ್ತಿದ್ದು, ಮಹಿಳೆಯರಿಗೆ ಯಾವ ರೀತಿ ಉಪಯೋಗವಾಗುತ್ತಿದೆ ಎಂದು ಪರಿಶೀಲನೆ ಮಾಡಲಾಗುವುದು. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪಕ್ಷದ ಸಂಘಟನೆಯಲ್ಲಿ ಪ್ರಾತಿನಿಧ್ಯ ನೀಡಲಾಗುವುದು. ಮಹಿಳೆಯರನ್ನು ವಿಶ್ವಾಸಕ್ಕೆ ಪಡೆದು ಅವರನ್ನು ಪಕ್ಷದ ಭದ್ರ ಅಡಿಪಾಯವಾಗಿ ಮಾಡಿಕೊಳ್ಳಲಾಗುವುದು.

ವೃದ್ಧಾಪ್ಯ ವೇತನ ಯೋಜನೆ ತಂದಿದ್ದು ಇಂದಿರಾ ಗಾಂಧಿ ಅವರು. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಕಾರ್ಯಕ್ರಮ ತಂದಿದ್ದು ಕಾಂಗ್ರೆಸ್ ಸರ್ಕಾರ. ಗ್ರಾಮೀಣ ಪ್ರದೇಶದಲ್ಲಿ ಮನೆ ಹಾಗೂ ನಿವೇಶನ ನೀಡುವಾಗ ಮಹಿಳೆ ಹೆಸರಲ್ಲಿ ನೊಂದಣಿಯಾಗಬೇಕು ಎಂದು ಕಾನೂನು ಮಾಡಿದ್ದೇವೆ. ಆಮೂಲಕ ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಕವಾಗಿ ಶಕ್ತಿ ತುಂಬುವುದರ ಜತೆಗೆ ರಾಜಕೀಯವಾಗಿ ಬೆಳೆಸುವುದರ ಆಲೋಚನೆ ಮಾಡಲಾಗುತ್ತಿದೆ. ಪ್ರತಿ ತಾಲೂಕಿನಲ್ಲೂ ಮಹಿಳೆಯರ ಜತೆ ಸಭೆ ಮಾಡಬೇಕು ಎಂದು ಮಹಿಳಾ ಅಧ್ಯಕ್ಷರು ಹಾಗೂ ಪಕ್ಷದ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.”

ಐವರು ಹಿರಿಯ ನಾಯಕಿಯರಿಗೆ ಸನ್ಮಾನ

ಇದೇ ಸಂದರ್ಭದಲ್ಲಿ ಹಿರಿಯ ನಾಯಕಿಯರಾದ ಬಿಂಬಾ ರಾಯ್ಕರ್, ಸುಶೀಲ ಕೃಷ್ಣಮೂರ್ತಿ, ಪಂಕಜಾಕ್ಷಿ, ಮನೋರಮ ಹಾಗೂ ಪ್ಯಾರೆಜಾನ್ ಅವರನ್ನು ಡಿಸಿಎಂ ಶಿವಕುಮಾರ್ ಅವರು ಸನ್ಮಾನ ಮಾಡಿದರು.

ಪ್ರಶ್ನೋತ್ತರ

ಪಕ್ಷದ ಟಿಕೆಟ್ ಹಂಚಿಕೆ ಸಮಯದಲ್ಲಿ ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ಒಂದೇ ಬಾರಿಗೆ ಎಲ್ಲಾ ಬದಲಾವಣೆ ತರಲು ಸಾಧ್ಯವಿಲ್ಲ. ಮಹಿಳೆಯರನ್ನು ಸಬಲೀಕರಣ ಮಾಡುವ ಉದ್ದೇಶವಿದೆ. ಪ್ರತಿ ಸಮಿತಿಯಲ್ಲೂ ಮಹಿಳೆಯರಿಗೆ ಸ್ಥಾನ ನೀಡಲು ಸೂಚಿಸಲಾಗಿದೆ” ಎಂದು ತಿಳಿಸಿದರು.

ಭದ್ರಾ ಆಣೆಕಟ್ಟು ಗೇಟ್ ತಾಂತ್ರಿಕ ತೊಂದರೆಯಿಂದ ನೀರು ಪೋಲಾಗುತ್ತಿರುವ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ರೈತರು ಇಂದು ನನ್ನನ್ನು ಭೇಟಿ ಮಾಡಿದ್ದು ತಾಂತ್ರಿಕ ಸಮಿತಿ ಕಳುಹಿಸಿಕೊಟ್ಟಿದ್ದೇನೆ. ಇದನ್ನು ಹೇಗೆ ತಡೆಯಬೇಕು ಎಂದು ಪರಿಶೀಲನೆ ಮಾಡಲಾಗುವುದು” ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರದ ಮಾಜಿ ಸಂಸದರು ಜನಸ್ಪಂದನಾ ಕಾರ್ಯಕ್ರಮ ಮಾಡಿದಾಗ ಅಧಿಕಾರಿಗಳು ಹೋಗಿದ್ದರು ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ನಾನು ಜನಸಂಪರ್ಕ ಸಭೆ ಮಾಡಿದ್ದೇನೆ ಹೊರತು, ಬೇರೆಯವರು ಸಭೆ ಮಾಡಿಲ್ಲ. ಅಧಿಕಾರಿಗಳ ಕಾರ್ಯಕ್ಕೆ ಬೆಂಬಲವಾಗಿ ಹೋಗಿ ಧನ್ಯವಾದ ತಿಳಿಸಿರಬಹುದು. ಆದರೆ ಮಾಜಿ ಸಂಸದರು ಯಾವುದೇ ಕಾರ್ಯಕ್ರಮ ಮಾಡಿಲ್ಲ” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button