Kannada NewsKarnataka NewsLatest

ಹಾರುವ ಹುಲಿಯ ಬಳಿಕ ಈಗ ನರ್ತಿಸುವ ನವಿಲು: ಮೈಸೂರು ದಸರಾಗೆ ಮತ್ತೊಂದು ವಿಶ್ವದಾಖಲೆ

ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ಮೈಸೂರು ದಸರಾ ಮತ್ತೊಂದು ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ಅದ್ಧೂರಿ ಡ್ರೋನ್ ಪ್ರದರ್ಶನದಲ್ಲಿ 3,473 ಡ್ರೋನ್‌ಗಳನ್ನು ಬಳಸಿ ಬೃಹತ್ ನರ್ತಿಸುವ ನವಿಲಿನ ಆಕೃತಿ ಮೂಡಿಸಲಾಗಿದೆ. ಈ ಮೂಲಕ ಆಕಾಶದಲ್ಲಿ ಡ್ರೋನ್‌ಗಳಿಂದ ಅತಿ ದೊಡ್ಡ ಪಕ್ಷಿಯ ಆಕೃತಿ ರಚಿಸಿದ ಗಿನ್ನೆಸ್ ವಿಶ್ವ ದಾಖಲೆಗೆ ಮೈಸೂರು ಪಾತ್ರವಾಗಿದೆ.

ಅಕ್ಟೋಬರ್ 18ರಂದು ನಡೆದ ಈ ವರ್ಣರಂಜಿತ ಪ್ರದರ್ಶನದಲ್ಲಿ ಸಾವಿರಾರು ಬಣ್ಣಬಣ್ಣದ ಡ್ರೋನ್‌ಗಳು ಏಕಕಾಲದಲ್ಲಿ ಹಾರಾಟ ನಡೆಸಿ ಭಾರತದ ರಾಷ್ಟ್ರೀಯ ಪಕ್ಷಿ ನವಿಲು ಗರಿಗಳನ್ನು ಬಿಚ್ಚಿ ನರ್ತಿಸುವ ದೃಶ್ಯವನ್ನು ಆಕಾಶದಲ್ಲಿ ಮರುಸೃಷ್ಟಿಸಿದವು. ನಿಖರವಾದ ಸಂಯೋಜನೆಯೊಂದಿಗೆ ಮೂಡಿಬಂದ ಈ ದೃಶ್ಯವನ್ನು ಕಂಡ ಪ್ರೇಕ್ಷಕರು ಮಂತ್ರಮುಗ್ಧರಾದರು.

ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆಯ ಅಧಿಕೃತ ತೀರ್ಪುಗಾರರು ಸ್ಥಳದಲ್ಲಿ ಪ್ರದರ್ಶನವನ್ನು ಪರಿಶೀಲಿಸಿ, ಒಂದೇ ಬಾರಿಗೆ ಅತಿ ಹೆಚ್ಚು ಡ್ರೋನ್‌ಗಳನ್ನು ಬಳಸಿ ಆಕಾಶದಲ್ಲಿ ಮೂಡಿಸಿದ ಅತಿ ದೊಡ್ಡ ಪಕ್ಷಿಯ ಆಕೃತಿ ಎಂಬ ದಾಖಲೆಗೆ ಪ್ರಮಾಣಪತ್ರ ನೀಡಿದ್ದಾರೆ. ಈ ಸಾಧನೆಯಿಂದ ಮೈಸೂರು ದಸರಾದ ಕೀರ್ತಿ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಹೆಚ್ಚಿದೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಮತ್ತು ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೆಹಲಿ ಮೂಲದ ‘ಬೋಟ್‌ಲ್ಯಾಬ್ ಡೈನಾಮಿಕ್ಸ್’ ಸಂಸ್ಥೆ ಡ್ರೋನ್ ಪ್ರದರ್ಶನವನ್ನು ನಿರ್ವಹಿಸಿದೆ.

2025ರ ದಸರಾ ಸಂದರ್ಭದಲ್ಲಿಯೂ ಇದೇ ತಂಡ 2,983 ಡ್ರೋನ್‌ಗಳನ್ನು ಬಳಸಿ ಆಕಾಶದಲ್ಲಿ ಹಾರುವ ಹುಲಿಯ ಆಕೃತಿ ಸೇರಿದಂತೆ ವಿಭಿನ್ನ ದೃಶ್ಯಗಳನ್ನು ಮೂಡಿಸಿ ದಾಖಲೆ ನಿರ್ಮಿಸಿತ್ತು. ಈ ಬಾರಿ 3,473 ಡ್ರೋನ್‌ಗಳ ಮೂಲಕ ನವಿಲಿನ ಆಕೃತಿ ಸೃಷ್ಟಿಸುವ ಮೂಲಕ ಮತ್ತೊಂದು ಸಾಧನೆ ಮಾಡಿದೆ.

ಈ ಬಾರಿಯ ಪ್ರದರ್ಶನದಲ್ಲಿ ನವಿಲಿನ ಜೊತೆಗೆ ಸಿಂಹ, ಚಿಟ್ಟೆ, ತ್ರಿವರ್ಣ ಧ್ವಜ ಹಿಡಿದ ಯೋಧ ಮತ್ತು ಚಾಮುಂಡೇಶ್ವರಿ ದೇವಿಯ ಆಕೃತಿಗಳೂ ಆಕಾಶದಲ್ಲಿ ಮೂಡಿಬಂದವು. ಸಾಂಪ್ರದಾಯಿಕ ವೈಭವಕ್ಕೆ ಹೆಸರಾದ ಮೈಸೂರು ದಸರಾಕ್ಕೆ ಆಧುನಿಕ ತಂತ್ರಜ್ಞಾನದ ಮೆರುಗು ನೀಡಿದ ಈ ಪ್ರದರ್ಶನ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಯಿತು.

ಸಾವಿರಾರು ಡ್ರೋನ್‌ಗಳು ಒಂದೇ ಸಮಯದಲ್ಲಿ ನಿಗದಿತ ಆಕೃತಿಗಳನ್ನು ರೂಪಿಸಲು ವಿಶೇಷ ಸಾಫ್ಟ್‌ವೇರ್ ಬಳಸಲಾಗುತ್ತದೆ. ಪ್ರತಿಯೊಂದು ಡ್ರೋನ್‌ಗೂ ಪ್ರತ್ಯೇಕ ಹಾರಾಟದ ಹಾದಿ ಮತ್ತು ಸ್ಥಾನ ನಿಗದಿಪಡಿಸಲಾಗುತ್ತದೆ. ಡ್ರೋನ್‌ಗಳಲ್ಲಿರುವ ಬಣ್ಣ ಬದಲಾಯಿಸುವ ಎಲ್‌ಇಡಿ ದೀಪಗಳನ್ನು ಸಮನ್ವಯಗೊಳಿಸುವ ಮೂಲಕ ಆಕಾಶದಲ್ಲಿ ವಿವಿಧ ಆಕೃತಿಗಳು ಮತ್ತು ವರ್ಣರಂಜಿತ ದೃಶ್ಯಗಳನ್ನು ಸೃಷ್ಟಿಸಲಾಗುತ್ತದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button