*‘ಮೋದಿ ಅಪ್ಪನೂ ಅಧಿಕಾರದಿಂದ ಇಳಿಯುತ್ತಾರೆ’ ಎಂಬ ಖರ್ಗೆ ಹೇಳಿಕೆಗೆ ಆಕ್ರೋಶ*: *ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ!*

ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಂದೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ ರಾಷ್ಟ್ರ ರಾಜಕಾರಣದಲ್ಲಿ ವಿವಾದಕ್ಕೆ ಕಾರಣವಾಗಿದೆ. ಬಿಹಾರದ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖರ್ಗೆ ನೀಡಿದ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ರಾಜಕೀಯ ಭಾಷೆಯ ಮಿತಿಗಳನ್ನು ಮೀರಿದೆ ಎಂದು ಟೀಕಿಸಿದೆ. ಇದೇ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.
ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಖರ್ಗೆ ಮಾತನಾಡುತ್ತಿದ್ದಾಗ ಸಭಿಕರಲ್ಲಿದ್ದ ವ್ಯಕ್ತಿಯೊಬ್ಬರು, “ಪ್ರಧಾನಿ ಮೋದಿ ಎಲ್ಲೂ ಹೋಗುವುದಿಲ್ಲ” ಎಂದು ಕೂಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, “ಮೋದಿ ಮಾತ್ರವಲ್ಲ, ಅವರ ಅಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ” ಎಂದು ಹೇಳಿದ್ದರು. ಈ ಹೇಳಿಕೆ ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಬಿಜೆಪಿ ಪತ್ರಿಕಾ ಪ್ರಕಟಣೆಯಲ್ಲಿ ಖರ್ಗೆ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ. ಹಿಂದೆ ಗೂಂಡಾಗಳು ಮತ್ತು ರೌಡಿಗಳು ಬಳಸುತ್ತಿದ್ದ ಭಾಷೆಯನ್ನು ಈಗ ಕಾಂಗ್ರೆಸ್ ಅಧ್ಯಕ್ಷರು ಬಳಸುತ್ತಿದ್ದಾರೆ ಎಂದು ಟೀಕಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿರುವ ಬಿಜೆಪಿ, ರಾಜಕೀಯ ಹತಾಶೆಯಿಂದ ಕಾಂಗ್ರೆಸ್ ನಾಯಕರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹತ್ತು ವರ್ಷಗಳ ಕಾಲ ಅಧಿಕಾರ ಪಡೆಯಲು ಪ್ರಯತ್ನಿಸಿದರೂ ಯಶಸ್ಸು ಸಿಗಲಿಲ್ಲ ಎಂದು ಬಿಜೆಪಿ ಟೀಕಿಸಿದೆ. ಈಗ ರಾಹುಲ್ ಗಾಂಧಿ ಕೂಡ ಅದೇ ಕನಸನ್ನು ಕಾಣುತ್ತಿದ್ದಾರೆ. ಆದರೆ, ದೇಶದ ಜನರು ಆ ಕನಸು ನನಸಾಗಲು ಬಿಡುವುದಿಲ್ಲ ಎಂದು ಬಿಜೆಪಿ ಹೇಳಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಖರ್ಗೆ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರು ರಾಜಕೀಯ ಶಿಸ್ತಿನ ಮಿತಿಗಳನ್ನು ಮೀರಿದ್ದಾರೆ ಎಂದು ಟೀಕಿಸಿದ್ದಾರೆ. ಪ್ರಧಾನಿ ಮೋದಿ ಅವರ ದಿವಂಗತ ತಾಯಿಯನ್ನು ನಿಂದಿಸುವುದು, ಅವರನ್ನು ‘ಸಾವಿನ ವ್ಯಾಪಾರಿ’ ಎಂದು ಕರೆಯುವುದು ಹಾಗೂ ‘ಚಾಯ್‌ವಾಲಾ’ ಎಂದು ಹೀಯಾಳಿಸುವುದು ಕಾಂಗ್ರೆಸ್‌ನ ರಾಜಕೀಯ ಶೈಲಿಯಾಗಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ನಾಯಕ ನಿತಿನ್ ನವೀನ್ ಕೂಡ ಪ್ರತಿಕ್ರಿಯಿಸಿದ್ದು, ರಾಜಕೀಯ ವಿರೋಧಕ್ಕೂ ಘನತೆ ಇರಬೇಕು ಎಂದು ಹೇಳಿದ್ದಾರೆ. ದಿವಂಗತ ಕುಟುಂಬಸ್ಥರನ್ನು ಸಾರ್ವಜನಿಕ ಭಾಷಣಗಳಿಗೆ ಎಳೆದು ತರುವುದು ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷಗಳ ರಾಜಕೀಯ ಸಂಸ್ಕೃತಿಯಾಗಿದೆ ಎಂದು ಟೀಕಿಸಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಖರ್ಗೆ, ಪ್ರಧಾನಿ ಮೋದಿ 100 ದಿನಗಳಲ್ಲಿ ಕಪ್ಪು ಹಣವನ್ನು ಮರಳಿ ತರುವುದಾಗಿ ಹೇಳಿ ಮಾತು ತಪ್ಪಿದ್ದಾರೆ ಎಂದು ಆರೋಪಿಸಿದ್ದರು. ಆರ್‌ಎಸ್‌ಎಸ್‌ನ ಕೋಮುವಾದಿ ಚಿಂತನೆಗಳು ಕೊನೆಗೊಳ್ಳುವವರೆಗೆ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದೂ ವಾಗ್ದಾಳಿ ನಡೆಸಿದ್ದರು.
ಇತ್ತ ಕಾಂಗ್ರೆಸ್ ನಾಯಕ ಹುಸೇನ್ ದಳವಾಯಿ ಖರ್ಗೆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮುಂಬೈನಲ್ಲಿ ಮಾತನಾಡಿದ ದಳವಾಯಿ, ಕಳೆದ 12ರಿಂದ 13 ವರ್ಷಗಳಲ್ಲಿ ಸರ್ಕಾರ ಮಾಡಿದ ತಪ್ಪುಗಳು, ಅಕ್ರಮಗಳು ಮತ್ತು ವಿದೇಶಾಂಗ ನೀತಿಯ ಲೋಪಗಳ ಕುರಿತು ಖರ್ಗೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. 2029ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಎಲ್ಲ ವಿಚಾರಗಳಿಗೂ ಲೆಕ್ಕ ಕೇಳಲಾಗುವುದು ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




