*ಚಿನ್ನದ ಅಂಬಾರಿ ನಮ್ಮ ಖಾಸಗಿ ಆಸ್ತಿ, ಬೇಕಾದರೆ ಕೋರ್ಟ್ಗೆ ಹೋಗ್ತೀವಿ*: *ರಾಜಮಾತೆ ವಾರ್ನಿಂಗ್ ಕೊಟ್ಟಿದ್ಯಾಕೆ?*

ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ಆಚರಣೆಯ ವಿಚಾರವಾಗಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಲ್ಕು ಪುಟಗಳ ಸುದೀರ್ಘ ಪತ್ರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿ, ಪೊಲೀಸ್ ಇಲಾಖೆಯ ನಡೆ ಹಾಗೂ ಗಜಪಡೆ ಆಯ್ಕೆಯಲ್ಲಿನ ಗೌಪ್ಯತೆಯನ್ನು ಪ್ರಶ್ನಿಸಿದ್ದಾರೆ. ರಾಜಮನೆತನದ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸಿದರೆ ಉಚ್ಚ ನ್ಯಾಯಾಲಯದ ಮೊರೆ ಹೋಗಲು ನಾವು ಸ್ವತಂತ್ರರು ಎಂದು ಎಚ್ಚರಿಕೆ ನೀಡಿದ್ದಾರೆ.
ವಜ್ರಮುಷ್ಠಿ ಕಾಳಗದ ಸಂದರ್ಭದಲ್ಲಿ ಪೊಲೀಸರ ನಡೆ ಬಗ್ಗೆಯೂ ಪ್ರಮೋದಾದೇವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದಾಗಿಲ್ಲ. 1970, 1980 ಮತ್ತು 2020ರಲ್ಲಿಯೂ ಕಾಳಗ ನಿಂತಿತ್ತು ಎಂದು ತಿಳಿಸಿದ್ದಾರೆ. ವಜ್ರಮುಷ್ಠಿ ಕಾಳಗಕ್ಕೆ ಯಾವುದೇ ಪ್ರತ್ಯೇಕ ಧಾರ್ಮಿಕ ಮಹತ್ವವಿಲ್ಲ. ವಿಜಯಯಾತ್ರೆ ನಿಗದಿತ ಮುಹೂರ್ತದಂತೆ ನಡೆದಿದೆ. ಜಟ್ಟಿ ಸಮುದಾಯ ಮತ್ತು ಪೊಲೀಸರ ನಡುವಿನ ಸಮನ್ವಯದ ಕೊರತೆಯಿಂದ ಸಮಸ್ಯೆ ಉಂಟಾಗಿದೆ ಎಂದು ಹೇಳಿದ್ದು, ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಚಿನ್ನದ ಅಂಬಾರಿಯ ಭದ್ರತೆ ವಿಚಾರದಲ್ಲಿಯೂ ಪೊಲೀಸ್ ಇಲಾಖೆಯ ವಿರುದ್ಧ ಪ್ರಮೋದಾದೇವಿ ಅಸಮಾಧಾನ ಹೊರಹಾಕಿದ್ದಾರೆ. ಪೊಲೀಸ್ ಆಯುಕ್ತರು ನೀಡಿದ ಭರವಸೆಯ ಮೇರೆಗೆ ಅಂಬಾರಿ ನೀಡಿದ್ದೆ. ಆದರೆ, ಆ ಭರವಸೆಯನ್ನು ಉಳಿಸಿಕೊಳ್ಳಲಾಗಿಲ್ಲ ಎಂದು ಆರೋಪಿಸಿದ್ದಾರೆ. ಅಂಬಾರಿ ಸುತ್ತ ಅನಧಿಕೃತ ವ್ಯಕ್ತಿಗಳು ಓಡಾಡಿದ್ದು, ಪೊಲೀಸ್ ಸಿಬ್ಬಂದಿ ಮತ್ತು ಕುಟುಂಬದವರು ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಅಂಬಾರಿ ಬಳಿ ಬಂದಿದ್ದರು. ಇದು ಅಂಬಾರಿಯ ಭದ್ರತೆಗೆ ಧಕ್ಕೆ ಉಂಟುಮಾಡಿದೆ ಎಂದು ದೂರಿದ್ದಾರೆ. ಅಂಬಾರಿ ರಾಜಮನೆತನದ ಖಾಸಗಿ ಆಸ್ತಿಯೇ ಹೊರತು ಸರ್ಕಾರದ ಆಸ್ತಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅರಮನೆಯ ಅತಿಥಿಗಳಿಗಾಗಿ ಮೀಸಲಿಟ್ಟಿದ್ದ ಖಾಸಗಿ ಸ್ಥಳವನ್ನು ಅತಿಕ್ರಮಿಸಲಾಗಿದೆ ಮತ್ತು ಅನಧಿಕೃತ ತಡೆಬೇಲಿ ಹಾಕಿ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಪಡಿಸಲಾಗಿದೆ ಎಂದು ಪ್ರಮೋದಾದೇವಿ ಆರೋಪಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ವಿರುದ್ಧವೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನವರಾತ್ರಿ ಆಚರಣೆಯ ಸಂದರ್ಭದಲ್ಲಿ ರಾಜಮನೆತನದ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಯಾಗಿರುವುದು ಬೇಸರ ಮೂಡಿಸಿದೆ ಎಂದು ತಿಳಿಸಿದ್ದಾರೆ.
ರಾಜಮನೆತನದ ಆಚರಣೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಸ್ಪಷ್ಟ ಆದೇಶವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಪ್ರಮೋದಾದೇವಿ, ಮೊದಲ ದಿನದಿಂದ ಏಳನೇ ದಿನದವರೆಗೆ ಸರ್ಕಾರ ತನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬಹುದು. ಆದರೆ, ಆಯುಧ ಪೂಜೆ ಮತ್ತು ವಿಜಯದಶಮಿ ದಿನಗಳಲ್ಲಿ ರಾಜಮನೆತನದ ಆಚರಣೆಗಳಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಗತ್ಯವಿದ್ದರೆ ಈ ವಿಚಾರವಾಗಿ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಗಜಪಡೆಯ ಕ್ಯಾಪ್ಟನ್ ಮತ್ತು ಅಂಬಾರಿ ಹೊರುವ ಆನೆಯ ಆಯ್ಕೆ ವಿಚಾರವನ್ನೂ ಪ್ರಮೋದಾದೇವಿ ಪ್ರಶ್ನಿಸಿದ್ದಾರೆ. ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಂಬಾರಿ ಆನೆಯ ಆಯ್ಕೆ ಬಗ್ಗೆ ಮಾಹಿತಿ ಗೌಪ್ಯವಾಗಿಡಲಾಗಿದೆ. ಕಾರ್ಯಕ್ರಮಕ್ಕೆ ಕೇವಲ ಐದು ದಿನ ಬಾಕಿಯಿರುವಾಗ ಮಾಹಿತಿ ನೀಡಲಾಯಿತು. ಯಾವ ಆನೆ ಅಂಬಾರಿ ಹೊರುತ್ತದೆ ಎಂದು ತಾವೇ ಡಿಸಿಎಫ್ ಅವರನ್ನು ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ತೀವ್ರ ಬೇಸರ ತಂದಿದೆ ಎಂದು ತಿಳಿಸಿದ್ದಾರೆ.
ಪ್ರತಿ ವರ್ಷವೂ ದಸರಾ ಆಚರಣೆಗೆ ರಾಜಮನೆತನ ಸಹಕಾರ ನೀಡುತ್ತಾ ಬಂದಿದೆ. ಆದರೆ, ಈ ಸಹಕಾರವನ್ನು ಸಾಮಾನ್ಯ ಸಂಗತಿಯೆಂದು ಪರಿಗಣಿಸಿ ನಿರ್ಲಕ್ಷಿಸಲಾಗುತ್ತಿದೆ ಎಂದು ಪ್ರಮೋದಾದೇವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ತಮ್ಮ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ, ರಾಜಮನೆತನದ ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಗಳಿಗೆ ಸೂಕ್ತ ಗೌರವ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




