ಮತ್ತೆ ದೇವೇಗೌಡ -ಸಿದ್ದರಾಮಯ್ಯ ಮಧ್ಯೆ ವಾಗ್ದಾಳಿ ಶುರು
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯೆ ಮತ್ತೆ ಆರೋಪ- ಪ್ರತ್ಯಾರೋಪ ಶುರುವಾಗಿದೆ
ಸಮ್ಮಶ್ರ ಸರಕಾರದ ಅವಧಿಯಲ್ಲಿ ಮಧ್ಯಂತರ ಬಿಡುವು ಪಡೆದಿದ್ದ ಗುರು-ಶಿಷ್ಯರ ಜಗಳ ಮತ್ತೆ ವಿಕೋಪಕ್ಕೆ ಹೋಗುತ್ತಿದೆ.
ಸಮ್ಮಿಶ್ರ ಸರಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂದು ದೇವೇಗೌಡ ಆರೋಪಿಸಿದ್ದರು. ವಿರೋಧಪಕ್ಷದ ನಾಯಕನಾಗಲು ಸಿದ್ದರಾಮಯ್ಯ ಸರಕಾರವನ್ನೇ ಪತನ ಮಾಡಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಸಿದ್ದರಾಮಯ್ಯಗೆ ಇಷ್ಟವಿರಲಿಲ್ಲ ಎಂದು ದೇವೇಗೌಡ ಹೇಳಿದ್ದರು.
ಇದಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ನಾನು ಸುಮ್ಮನಿದ್ದರೆ ಜನರಿಗೆ ಬೇರೆ ಅರ್ಥ ಹೋಗುತ್ತದೆ ಎನ್ನುವ ಕಾರಣದಿಂದ ಮಾತನಾಡುತ್ತಿದ್ದೇನೆ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.
ವಿರೋಧ ಪಕ್ಷ ನಾಯಕನಾಗಲು ಸರಕಾರ ಕೆಡವುತ್ತಾರೆ ಎನ್ನುವುದನ್ನು ಮೊದಲ ಬಾರಿಗೆ ಕೇಳುತ್ತಿದ್ದೇನೆ. ಸರಕಾರ ಕೆಡವುವುದ ದೇವೇಗೌಡರ ಹುಟ್ಟು ಚಾಳಿ ಎಂದು ಅವರು ತಿರುಗೇಟು ನೀಡಿದ್ದಾರೆ.
ಕೋಮುವಾದಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದನ್ನು ತಡಿಯುವುದಕ್ಕಾಗಿ ನಾವು ಜೆಡಿಎಸ್ ಗೆ ಬೆಂಬಲ ನೀಡಿದ್ದೆವು. ಯಾವುದೇ ಹಸ್ತಕ್ಷೇಪ ಮಾಡದೆ 14 ತಿಂಗಳು ಅವರಿಗೆ ಅಧಿಕಾರ ನಡೆಸಲು ಬಿಟ್ಟಿದ್ದೆವು. ಈ ಹಿಂದೆ ಬೊಮ್ಮಾಯಿ ಸರಕಾರ ಕೆಡವಿದವರು ದೇವೇಗೌಡರು. ಬಿಜೆಪಿಗೆ ಬೆಂಬಲ ನೀಡಿ ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಟ್ಟವರು ಅವರು. ನನ್ನ ಮೇಲೆ ಆರೋಪ ಮಾಡಲು ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ದೇವೇಗೌಡರು ಎಂದೂ ಸ್ವಜಾತಿಯವರನ್ನು ಬೆಳೆಸಿಲ್ಲ. ಅವರು ಜೀವನದಲ್ಲಿ ಮಾಡಿದ್ದು ಸ್ವಾರ್ಥ ರಾಜಕಾರಣ ಎಂದೂ ಹೇಳಿದರು.
ದೇವೌಗೌಡ ಮತ್ತು ಸಿದ್ದರಾಮಯ್ಯ ಮಧ್ಯೆ ವಾಗ್ದಾಳಿ ಹೊಸದೇನಲ್ಲ. ಕಳೆದ ವಿಧಾನಸಬೆ ಚುನಾವಣೆಗೂ ಮುನ್ನ ಬಾಯಿಗೆ ಬಂದಂತೆ ಮಾತಾಡಿಕೊಂಡಿದ್ದರು. ಆದರೆ ಚುನಾವಣೆ ಬಳಿಕ ಕಾಂಗ್ರೆಸ್, ಜೆಡಿಸ್ ಗೆ ಸರಕಾರ ರಚಿಸಲು ಬೆಂಬಲ ನೀಡುವ ಮೂಲಕ ಒಂದಾಗಿದ್ದರು. ಸಮ್ಮಿಶ್ರ ಸರಕಾರದ 14 ತಿಂಗಳ ಅವಧಿ ಅವರು ತಮ್ಮ ಜಗಳಕ್ಕೆ ಮಧ್ಯಂತರ ಬಿಡುವು ನೀಡಿದ್ದರು.
ಈಗ ಮತ್ತೆ ವಾಗ್ದಾಳಿ ಶುರು ಮಾಡಿಕೊಂಡಿದ್ದಾರೆ. ತನ್ಮೂಲಕ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಖತಂ ಆಗಿದೆ ಎನ್ನುವುದನ್ನು ಇಬ್ಬರು ನಾಯಕರೂ ಸಾರಿ ಹೇಳಿದಂತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ