
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಎಐಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಒತ್ತಡಗಳು ಕೆಳಿಬಂದಿವೆ. 23 ಕಾಂಗ್ರೆಸ್ ಹಿರಿಯ ನಾಯಕರು ಪಕ್ಷದಲ್ಲಿ ಬದಲಾವಣೆ ತರುವಂತೆ ಒತ್ತಾಯಗಳನ್ನೂ ಮಾಡುತ್ತಿದ್ದಾರೆ. ಈ ನಡುವೆ ಗಾಂಧಿ ಕುಟುಂಬದ ಹೊರತಾದ ವ್ಯಕ್ತಿ ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಗಾಂಧಿ ಕುಟುಂಬದವರೇ ಕಾಂಗ್ರೆಸ್ ಅಧ್ಯಕ್ಷಾರಬೇಕು ಎಂದು ರಾಜ್ಯ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಗಾಂಧಿ ಕುಟುಂಬದವರನ್ನೇ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ದೇಶದ ಹಿತದೃಷ್ಟಿಯಿಂದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ರಾಹುಲ್ ಗಾಂಧಿ ಅವರ ನಾಯಕತ್ವದಿಂದ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ, ಕಾರ್ಯಕರ್ತರಲ್ಲಿ ಹುರುಪು ಮತ್ತು ದೇಶದ ಜನತೆಯಲ್ಲಿ ಭರವಸೆ ಮೂಡಲಿದೆ ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ ಮತ್ತು ಹಿರಿಯ ನಾಯಕರ ಅನುಭವಪೂರ್ಣ ಮಾರ್ಗದರ್ಶನದಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪಕ್ಷವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತಾರೆ ಎಂಬ ಸಂಪೂರ್ಣ ಭರವಸೆ ನನಗಿದೆ. ಇದು ಪಕ್ಷದ ಕೋಟ್ಯಂತರ ಕಾರ್ಯಕರ್ತರ ಆಶಯವೂ ಹೌದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರ ಘನ ಮಾರ್ಗದರ್ಶನದಲ್ಲಿ ರಾಹುಲ್ ಗಾಂಧಿ ಅವರೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪಕ್ಷ ಮುನ್ನಡೆಸಬೇಕು ಎಂಬುದು ನನ್ನ ಮತ್ತು ಕೋಟ್ಯಂತರ ಕಾರ್ಯಕರ್ತರ ಅಭಿಲಾಷೆಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕೂಡ ತಿಳಿಸಿದ್ದಾರೆ.