Kannada NewsLatestNational

*ಏರ್ ಇಂಡಿಯಾ ವಿಮಾನ ದುರಂತದ ದೃಶ್ಯ ಸೆರೆಹಿಡಿದ ಹುಡುಗನಿಗೆ ಕಾಡುತ್ತಿದೆ ಆತಂಕ*

ಪ್ರಗತಿವಾಹಿನಿ ಸುದ್ದಿ: ಗುಜರಾತ್ ನ ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡು, 274 ಜನರು ಸಾವನ್ನಪ್ಪಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಏರ್ ಇಂಡಿಯಾ ವಿಮಾನ ಹಾರಾಟ ನಡೆಸುತ್ತ ಪತನಗೊಂಡು, ಬೆಂಕಿ ಹೊತ್ತಿ ಉರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಅಂದು ವಿಮಾನ ಪತನಗೊಂಡಿದ್ದ ವಿಡಿಯೋವನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದ ಹುಡುಗನಿಗೆ ಇದೀಗ ಹಲವಾರು ಆತಂಕ ಎದುರಾಗಿದೆ.

ಆರ್ಯನ್ ಎಂಬ ಹುಡುಗ ಈ ವಿಡಿಯೋವನ್ನು ತನ್ನ ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದ. ತನ್ನ ಮನೆಯ ಮೇಲೆಯೇ ವಿಮಾನವೊಂದು ಬಹಳ ಕೆಳಗಿನಿಂದ ಹಾರಿ ಹೋಗುತ್ತಿರುವುದು ಅಲ್ಲದೇ ನೋಡ ನೋಡುತ್ತಿದ್ದಂತೆ ಅದು ಬೆಂಕಿಯಲ್ಲಿ ಹೊತ್ತಿ ಉರಿದು ಪತನಗೊಂಡಿದೆ. ರಣಭೀಕರ ದೃಶ್ಯ ವನ್ನು ಕಂಡು ಆರ್ಯನ್ ಕಂಗಾಲಾಗಿದ್ದಾನೆ. ಆತ ಮಾತ್ರವಲ್ಲ ವಿಮಾನ ದುರಂತಕ್ಕೀಡಾಗಿದ್ದ ಮೆಘಾನಿ ಪ್ರದೇಶದ ಪ್ರತಿ ಕುಟುಂಬವೂ ಭಯದಲ್ಲೇ ಕಾಲ ಕಳೆಯುತ್ತಿದೆ.

ಇನ್ನು ಈ ದೃಶ್ಯವನ್ನು ಕಣ್ಣಾರೆ ಕಂಡು ತನ್ನದೇ ಮೊಬೈಲ್ ನಲ್ಲಿ ಸೆರೆ ಹಿಡಿದಿರುವ ಹುಡುಗ ಆರ್ಯನ್ ಸ್ಥಿತಿ ಹೇಗಿರಬೇಡ ಹೇಳಿ. ಘಟನೆ ನಡೆದ ದಿನದಿಂದ ಆರ್ಯನ್ ನಿದ್ದೆಯನ್ನೇ ಮಾಡಿಲ್ಲವಂತೆ. ಆತ ಹೇಳುವ ಪ್ರಕಾರ ಅಂದು ವಿಮಾನ ಆಕಾಶದಲ್ಲಿ ಭಾರಿ ಶಬ್ಧದೊಂದಿಗೆ ತುಂಬಾ ಕೆಳಗಿನಿಂದ ಹೋಗುತ್ತಿತ್ತು. ಇದನ್ನು ಕಂಡು ನನ್ನ ಸ್ನೇಹಿತರಿಗೆ ತೋರಿಸಲೆಂದು ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದೆ. ಸ್ವಲ್ಪದೂರದಲ್ಲಿ ಹೋಗುತ್ತಿದ್ದಂತೆ ವಿಮಾನ ವಿಚಿತ್ರಶಬ್ಧದೊಂದಿಗೆ ಸ್ಫೋಟಗೊಂಡು ಬೆಂಕಿಯಲ್ಲಿ ಹೊತ್ತಿ ಉರಿದಿದೆ. ಇದನ್ನು ನೋಡಿ ಭಯಗೊಂಡೆ. ನಾನು ವಿಡಿಯೋದಲ್ಲಿ ಸೆರೆಹಿಡಿಯುತ್ತಿರುವ ವಿಮಾನ ಮುಂದೆ ಪತನಗೊಂಡು ಬೆಂಕಿಯಲ್ಲಿ ಹೊತ್ತಿ ಉರಿಯುತ್ತದೆ ಎಂಬುದನ್ನು ಊಹಿಸಿಯೂ ಇರಲಿಲ್ಲ. ಇಷ್ಟೊಂದು ಜನರು ಅದೇ ವಿಮಾನ ದುರಂತದಲ್ಲಿ ಸಾವನ್ನಪ್ಪುತ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾನೆ.

ಆರ್ಯನ್ ಕುಟುಂಬ, ವಿಮಾನ ದುರಂತ ನಡೆದ ಸ್ಥಳದ ಸಮೀಪವೇ ಇರುವ ನಕ್ಷ್ಮೀನಗರದಲ್ಲಿ ವಾಸಿಸುತ್ತಿದೆ. ಆರ್ಯನ್ ತನ್ನ ಮನೆಯ ಮೇಲ್ಭಾಗವೇ ಅಂದು ಹಾರಾಟ ನಡೆಸಿದ್ದ ಏರ್ ಇಂಡಿಯಾ ವಿಮಾನ ಹಾಗೂ ಅದು ಕೆಲವೇ ದೂರದಲ್ಲಿ ಪತನಗೊಳ್ಳುತ್ತಿರುವ ವಿಡಿಯೋವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾನೆ. ಈ ವಿಡಿಯೋ ತನಿಖೆಗೂ ಸಹಾಯವಾಗುವ ಸಾಧ್ಯತೆ ಇದೆ. ಇನ್ನು ಆರ್ಯನ್ ನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಪ್ರತಿದಿನ ವಿವಿಧ ಮಾಧ್ಯಮಗಳಿಂದಲೂ ಆರ್ಯನ್ ಗೆ ಕರೆ ಬರುತ್ತಿದ್ದು, ತೊಂದರೆಯಾಗುತ್ತಿದೆಯಂತೆ. ಆತ ನಿದ್ದೆಯನ್ನೂ ಮಾಡುತ್ತಿಲ್ಲ ಎಂದು ಆರ್ಯನ್ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆರ್ಯನ್ ಈ ವಿಮಾನ ದುರಂತ ಕಂಡು ನಾನು ಇನ್ಯಾವತ್ತೂ ವಿಮಾನವನ್ನೇ ಏರಲ್ಲ ಎಂದು ಹೇಳುತ್ತಿದ್ದಾನೆ. ವಿಮಾನ ಪತನಗೊಂಡ ದೃಶ್ಯಕಂಡು ಅಷ್ಟೊಂದು ಭಯಭೀತನಾಗಿದ್ದಾನೆ ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button