ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬೋರ್ಡಿಂಗ್ ಪಾಸ್ ಹೊಂದಿದ್ದರೂ ತಮ್ಮ ನಾಯಿಯನ್ನು ಏರ್ ಇಂಡಿಯಾ ಪೈಲಟ್ ವಿಮಾನದಲ್ಲಿ ಬಿಡಲಿಲ್ಲ ಎಂದು ಕುಟುಂಬವೊಂದು ಆರೋಪಿಸಿದೆ.
ಇದರ ಬೆನ್ನಿಗೇ ಏರ್ ಇಂಡಿಯಾ ಕೂಡ ನಾಯಿಯನ್ನು ಒಳಗೇಕೆ ಬಿಡಲಿಲ್ಲ ಎಂಬ ಬಗ್ಗೆ ಸ್ಪಷ್ಟನೆ ನೀಡಿದೆ.
ಬೆಂಗಳುರು ಮೂಲದ ಸಚಿನ್ ಶೆಣೈ, ಬೆಂಗಳೂರಿನಿಂದ ದೆಹಲಿಗೆ ಮತ್ತು ನಂತರ ಅಮೃತಸರಕ್ಕೆ ತಮ್ಮ ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಲು ನಿರ್ಧರಿಸಿದ್ದರು. ಅವರು ತಮ್ಮ ಪತ್ನಿ ಮತ್ತು ಮಗಳೊಂದಿಗೆ ಪಂಜಾಬ್ ಮತ್ತು ಹಿಮಾಚಲ ಪ್ರದೇಶಕ್ಕೆ 12 ದಿನಗಳ ಪ್ರವಾಸಕ್ಕೆ ಹೋಗಲಿದ್ದು, AI 503 ವಿಮಾನದ ಪ್ರಯಾಣಕ್ಕೆ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದ್ದರು.
ವಿಮಾನಯಾನ ಸಂಸ್ಥೆಗಳು ನಿಗದಿಪಡಿಸಿದ ನಿಯಮಗಳು ಮತ್ತು ಕಾರ್ಯವಿಧಾನಗಳ ಪ್ರಕಾರ ಅವರ ಸಾಕು ನಾಯಿ ಫ್ಲಫಿಯನ್ನು ಕೂಡ ವಿಮಾನದಲ್ಲಿ ಕೊಂಡೊಯ್ಯುವ ಬಗ್ಗೆ ಏರ್ ಇಂಡಿಯಾದೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.
ಆದರೆ ಏರ್ ಇಂಡಿಯಾ ಪೈಲಟ್ ಬೋರ್ಡಿಂಗ್ ಪಾಸ್ ಹೊಂದಿದ್ದರೂ ತಮ್ಮ ಸಾಕು ನಾಯಿಯನ್ನು ವಿಮಾನದೊಳಗೆ ಬಿಡಲಿಲ್ಲ ಎಂದು ಸಚಿನ್ ಶೆಣೈ ವಿಡಿಯೊದಲ್ಲಿ ಆರೋಪಿಸಿದ್ದರು. ಈ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ವೀಡಿಯೊಗೆ ಪ್ರತಿಕ್ರಿಯಿಸಿದ ಏರ್‌ಲೈನ್, “ನಾಯಿಯನ್ನು ಪಂಜರದಲ್ಲಿ ಇರಿಸಿರಲಿಲ್ಲ. ಮತ್ತು ಅದರ ಮೂತಿ ಬಿಗಿಯದಿರುವುದರಿಂದ ತಪಾಸಣೆ ವೇಳೆಗೆ ಕಮಾಂಡರ್ ಗೆ ತೃಪ್ತಿಯಾಗಿರಲಿಲ್ಲ. ಹೀಗಾಗಿಯೇ ನಾಯಿಯನ್ನು ಒಳಗೆ ಬಿಡಲಿಲ್ಲ” ಎಂದು ಹೇಳಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ