Latest

*2 ದೊಡ್ಡ ಕಾರ್ಯಕ್ರಮಗಳಿಗೆ ಕೊರೊನಾ ಕರಿನೆರಳು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶದಲ್ಲಿ ಕೊರೊನಾ ಒಮಿಕ್ರಾನ್ ರೂಪಾಂತರಿ ವೈರಸ್ BF.7 ಎಂಬ ಹೊಸ ತಳಿ ಹರಡುವ ಭೀತಿ ಶುರುವಾಗಿದ್ದು, ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಚೀನಾ, ಜಪಾನ್ ಸೇರಿದಂತೆ ವಿದೇಶದ ಕೆಲ ರಾಷ್ಟ್ರಗಳಲ್ಲಿ ಕೋವಿಡ್ ರೂಪಾಂತರಿ ವೈರಸ್ ನಿಂದಾಗಿ ಜನ ಕಂಗೆಟ್ಟಿದ್ದು, ಆರೋಗ್ಯ ತುರ್ತು ಪರಿಸ್ಥಿತಿಯುಂಟಾಗಿದೆ. ಇನ್ನು ಎರಡು ಮೂರು ತಿಂಗಳಲ್ಲಿ ಭಾರತಕ್ಕೂ ರೂಪಾಂತರಿ ವೈರಸ್ ಎಂಟ್ರಿಕೊಡಬಹುದು…ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂಬ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಮುನ್ಸೂಚನೆ ರಾಜ್ಯದ ಜನರಲ್ಲಿ ದಿಗಿಲು ಹುಟ್ಟಿಸಿದೆ.

ಅದರಲ್ಲೂ ಜನವರಿಯಲ್ಲಿ ರಾಜ್ಯದಲ್ಲಿ ನಡೆಯಲಿರುವ ಎರಡು ಪ್ರಮುಖ ಕಾರ್ಯಕ್ರಮಗಳ ಮೇಲೆ ಕೊರೊನಾ ಕರಿನೆರಳು ಬೀಳಲಿದೆಯೇ ಎಂಬ ಆತಂಕ ಎದುರಾಗಿದೆ.

ಜನವರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ರಾಷ್ಟ್ರೀಯ ಯುವಜನೋತ್ಸವ ನಡೆಯಲಿದ್ದು, ಕೊರೊನಾ ಹೊಸ ರೂಪಾಂತರಿ ಭಯದ ನಡುವೆಯೇ ಈ ಎರಡೂ ಕಾರ್ಯಕ್ರಮಗಳು ನಡೆಯುತ್ತಿರುವುದು ರಾಜ್ಯದ ಜನರಲ್ಲಿ ಒಂದುರೀತಿಯ ಕಳವಳವನ್ನುಂಟು ಮಾಡುತ್ತಿದೆ.

ಜನವರಿ 6ರಿಂದ 8ರವರೆಗೆ ಹಾವೇರಿಯ ಅಜ್ಜಯ್ಯ ದೇವಸ್ಥಾನದ ಎದುರು ಕನ್ನಡಿಗರ ಹಬ್ಬ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿ ನಡೆಯಲಿರುವ ಕನ್ನಡ ಹಬ್ಬ ಅದ್ಧೂರಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಅಧಿಕೃತ ಆಮಂತ್ರಣ ಪತ್ರಿಕೆ ಕೂಡ ಬಿಡುಗಡೆಗೊಳಿಸಲಾಗಿದೆ.

ಮೂರು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಕನ್ನಡಿಗರು ಆಗಮಿಸಲಿದ್ದಾರೆ. ಲಕ್ಷಾಂತರ ಜನರು ಸಮ್ಮೇಳನಕ್ಕೆ ಸಾಕ್ಷಿಯಾಗಲಿದ್ದಾರೆ. ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ತಯಾರಿ ಒಂದೆಡೆ ನಡೆಯುತ್ತಿರುವಾಗಲೇ ಕೊರೊನಾ ಹೊಸ ರೂಪಾಂತರಿ ವೈರಸ್ ಭೀತಿ ಆರಂಭವಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಮಾಸ್ಕ್, ಬೂಸ್ಟರ್ ಡೋಸ್ ಪಡೆದುಕೊಳ್ಳುವಂತೆ ಸಲಹೆ ನೀಡಿದೆ.

ಇನ್ನೊಂದೆಡೆ ಹುಬ್ಬಳ್ಳಿ-ಧಾರವಾಡದಲ್ಲಿ ಜನವರಿ 12ರಿಂದ ನಡೆಯಲಿರುವ ರಾಷ್ಟ್ರೀಯ ಯುವಜನ ಮೇಳಕ್ಕೂ ಕೊರೊನಾತಂಕ ಎದುರಾಗಿದೆ. ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದ ಅಂಗವಾಗಿ ಹುಬ್ಬಳ್ಳಿ-ಧಾರವಾಡದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವ ನಡೆಯಲಿದ್ದು, ಜನವರಿ 12ರಂದು ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಜನವರಿ 12ರಿಂದ ಯುವಜನೋತ್ಸವ ನಡೆಯಲಿದೆ. ಉತ್ತರ ಕರ್ನಾಟಕದಲ್ಲಿ ಮೊಟ್ಟ ಮೊದಲಬಾರಿಗೆ ನಡೆಯುತ್ತಿರುವ ರಾಷ್ಟ್ರೀಯ ಯುವಜನರ ಹಬ್ಬ ಇದಾಗಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಯುವಜನೋತ್ಸವಕ್ಕೆ ಎಲ್ಲಾ ರಾಜ್ಯಗಳಿಂದಲೂ ಸುಮಾರು 7500 ಪ್ರತಿನಿಧಿಗಳು ಆಗಮಿಸಲಿದ್ದಾರೆ. ದೇಶದ ಮೂಲೆ ಮೂಲೆಗಳಿಂದಲೂ ಹುಬ್ಬಳ್ಳಿ-ಧಾರವಾಡ ಅವಳಿನಗರಕ್ಕೆ ಜನರು ಹರಿದು ಬರಲಿದ್ದಾರೆ.

ಯುವಜನೋತ್ಸವಕ್ಕಾಗಿ ಈಗಾಗಲೇ ಹುಬ್ಬಳ್ಳಿ-ಧಾರವಾಡ ನಗರ ಸಜ್ಜುಗೊಂಡಿದ್ದು, ಸಡಗರದ ತಯಾರಿ ನಡೆಯುತ್ತಿದೆ. ಹೀಗಿರುವಾಗಲೇ ಮತ್ತೆ ಕೊರೊನಾ ಹೊಸ ಅವತಾರದ ಭಯ ಯುವಜನರ ಉತ್ಸಾಹಕ್ಕೆ ಎಲ್ಲಿ ತಣ್ಣೀರೆಚುವುದೋ ಎಂಬ ಸಣ್ಣ ಅಳುಕುಂಟಾಗಿದೆ.

ಒಂದೆಡೆ ಚಳಿಗಾಲ, ಇನ್ನೊಂದೆಡೆ ಕ್ರಿಸ್ ಮಸ್, ಹೊಸ ವರ್ಷಾಚರಣೆ, ಸಾಹಿತ್ಯ ಸಮ್ಮೇಳನ, ರಾಷ್ಟ್ರೀಯ ಯುವಜನೋತ್ಸವ, ಸಂಕ್ರಾಂತಿ…ಇಂತಹ ಹೊತ್ತಲ್ಲೇ ಕೊರೊನಾ ಸ್ಫೋಟಗೊಳ್ಳುವ ಆತಂಕ ರಾಜ್ಯದ ಜನರ ನಿದ್ದೆಗೆಡಿಸುತ್ತಿದೆ.

*BF.7 ವೈರಸ್ ಭೀತಿ: ಬೆಚ್ಚಿ ಬೀಳಿಸುವ ಸುಳಿವು ನೀಡಿದ ಆರೋಗ್ಯ ಸಚಿವ ಸುಧಾಕರ್*

https://pragati.taskdun.com/corona-virusbf-7covid-meetingdr-sudhakarbelagavi/

*ಹುಬ್ಬಳ್ಳಿ-ಧಾರವಾಡದಲ್ಲಿ ರಾಷ್ಟ್ರೀಯ ಯುವಜನೋತ್ಸವ: ಪ್ರಧಾನಿ ಮೋದಿಯಿಂದ ಉದ್ಘಾಟನೆ*

https://pragati.taskdun.com/hubli-dharwadyuvajanotsavapm-narendra-modicm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button