*ಅಕ್ಕಾ ಪಡೆ ಚಾಲನೆಗೆ ಡೇಟ್ ಫಿಕ್ಸ್: ಕರ್ನಾಟಕ ಸರ್ಕಾರದ ಮಾಡೆಲ್ ಇಡೀ ದೇಶಕ್ಕೆ ಮಾದರಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಿರುವ ಕರ್ನಾಟಕ ಸರ್ಕಾರದ ಮಾಡೆಲ್ (ಮಾದರಿ) ಅನ್ನು ಕೇಂದ್ರ ಸರ್ಕಾರವೂ ಅನುಸರಿಸುತ್ತಿದ್ದು, ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆಲಸಗಳ ಕುರಿತು ಕೇಂದ್ರ ಸರ್ಕಾರ ಶ್ಲಾಘನೆ ವ್ಯಕ್ತಪಡಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಸುವರ್ಣ ಸೌಧದಲ್ಲಿ ಬೆಳಗಾವಿ ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇಲಾಖೆ ಸುಧಾರಣೆ ಬಗ್ಗೆ ಚರ್ಚೆ ನಡೆಸಲಾಯಿತು. ನಮ್ಮದು ಜೀವನಮಟ್ಟ ಸುಧಾರಣೆ ಮಾಡುವ ಇಲಾಖೆಯಾಗಿದೆ ಎಂದರು.
ಮಕ್ಕಳ ವಿದ್ಯಾಭ್ಯಾಸ, ಪೌಷ್ಠಿಕಾಂಶ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ವಿವಿಧ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಜೊತೆಗೆ ನಮ್ಮ ಸರ್ಕಾರ ಮಹಾತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯೂ ಫಲಾನುಭವಿಗಳಿಗೆ ತಲುಪುತ್ತಿರುವ ಬಗ್ಗೆ, ಸಾಮಾಜಿಕ ಪೀಡುಗಾಗಿರುವ ಬಾಲ್ಯ ವಿವಾಹ ನಿರ್ಮೂಲನೆ, ಪೋಕ್ಸೋ ಪ್ರಕರಣಗಳು ಸೇರಿದಂತೆ ವಿಕಲಚೇತನರಿಗೆ ಸಂಬಂಧಪಟ್ಟ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಸಚಿವರು ವಿವರಿಸಿದರು.
ನವೆಂಬರ್ 19ಕ್ಕೆ ಅಕ್ಕಾ ಪಡೆಗೆ ಚಾಲನೆ

ಕರ್ನಾಟಕದಲ್ಲಿ ಅಂಗನವಾಡಿ ಕೇಂದ್ರಗಳು ಆರಂಭಗೊಂಡು ಮುಂದಿನ ತಿಂಗಳಿಗೆ 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನವೆಂಬರ್ 19ರಂದು ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ನವೆಂಬರ್ 19ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಂದೇ ಅಂಗನವಾಡಿ ಸುವರ್ಣ ಮಹೋತ್ಸವ ಸಮಾರಂಭ ನಡೆಸಲು ಉದ್ದೇಶಿಸಿದ್ದು, ಅಂದೇ ಅಕ್ಕಾ ಪಡೆಗೆ ಚಾಲನೆ ನೀಡಲಾಗುವುದು. ಪ್ರಾಯೋಗಿಕವಾಗಿ ಮೈಸೂರು, ಉಡುಪಿ, ಬೆಳಗಾವಿಯಲ್ಲಿ ಅಕ್ಕಾಪಡೆ ಜಾರಿಗೆ ಬರಲಿದೆ ಎಂದು ಸಚಿವರು ವಿವರಿಸಿದರು.
ಈಗಾಗಲೇ 200 ಅಂಗನವಾಡಿ ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಸರ್ಕಾರಿ ಮಾಂಟೆಸ್ಸರಿ ತರಗತಿಗಳು ಆರಂಭಗೊಂಡಿದ್ದು, ಸದ್ಯ ಮೊದಲ ಹಂತದಲ್ಲಿ ಐದು ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಆರಂಭಗೊಳ್ಳಲಿವೆ. ಬಳಿಕ ಹಂತ ಹಂತವಾಗಿ ವಿಸ್ತರಿಸಲಾಗುವುದು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಅಕ್ಕಾ ಪಡೆ ಕಾರ್ಯನಿರ್ವಹಿಸಲಿದೆ. ಎನ್‌ಸಿಸಿ ವಿದ್ಯಾರ್ಥಿಗಳು, ಮಹಿಳಾ ಪೇದೆಗಳು ಜನನಿಬೀಡ ಪ್ರದೇಶಗಳು ಹಾಗೂ ಮಹಿಳಾ ಕಾಲೇಜುಗಳ ಬಳಿ ಕಾರ್ಯನಿರ್ವಹಿಸಲಿವೆ. ಇದಕ್ಕಾಗಿ 109 ಸಹಾಯವಾಣಿ ಆರಂಭಿಸಲಾಗಿದೆ ಎಂದರು.
ದೇಶದಲ್ಲೇ ಪ್ರಥಮ ಬಾರಿಗೆ ದೇವದಾಸಿ ಸಮೀಕ್ಷೆ, ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗಳು ನಡೆಯುತ್ತಿದ್ದು, ಕಳೆದ ಮುಂಗಾರು ಅಧಿವೇಶನದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು (ತಿದ್ದುಪಡಿ) ಜಾರಿಗೆ ತರಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದರೂ ನಮ್ಮ ಇಲಾಖೆಗೆ ಹೆಚ್ಚು ಅನುದಾನವನ್ನು ತಂದಿರುವೆ. ನಮ್ಮ ಇಲಾಖೆಯ ಕಾರ್ಯವೈಖರಿಗೆ ಕೇಂದ್ರ ಸರ್ಕಾರವೇ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.