ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು : ಸರ್ಕಾರ ಮದ್ಯ ಮಾರಾಟವನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು. ಜೊತೆಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನನ್ನು ಜಾರಿಗೊಳಿಸಿ ಸದೃಡ ಹಾಗೂ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಬೇಕೆಂದು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ಸಭಾ ಮಂಟಪದಲ್ಲಿ ಮಹಾತ್ಮ ಗಾಂಧಿ 151ನೇಯ ಜಯಂತಿ ಆಚರಣೆಯ ಪ್ರಯುಕ್ತ ಗುರುವಾರ ಮದ್ಯಪಾನ ಸಂಯಮ ಮಂಡಳಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕಿತ್ತೂರು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಸ್ಥೆಯವರು ಆಯೋಜಿಸಲಾಗಿದ್ದ “ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಬೃಹತ್ ಜನಜಾಗೃತಿ ಜಾಥಾ ಹಾಗೂ ವ್ಯಸನಮುಕ್ತ ಸಾಧಕರ ಸಮಾವೇಶದಲ್ಲಿ” ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.
ವ್ಯಸನ ಮುಕ್ತ ಸಮಾಜ ನಿರ್ಮಿಸುವುದು ಮಹತ್ಮಾ ಗಾಂಧಿಯವರ ಆಶಯವಾಗಿತ್ತು. ಅಲ್ಲದೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವಿರೇಂದ್ರ ಹೆಗ್ಗಡೆ ದಂಪತಿಗಳ ಮಹನ್ನೋತ ಆಶಯವು ಇದಾಗಿದ್ದು ಸದೃಡ ಸಮಾಜವನ್ನು ನಿರ್ಮಿಸುವುದಕ್ಕಾಗಿ ಹತ್ತು ಹಲವಾರು ಕಾರ್ಯಕ್ರಮವನ್ನು ಗ್ರಾಮಮಟ್ಟದಿಂದ ಆಯೋಜಿಸುವ ಮೂಲಕ ಪ್ರಯತ್ನ ನಡೆಸುತ್ತಿದ್ದಾರೆ.
ಇವರ ಎಲ್ಲ ಯೋಜನೆಗೆ ಸಹಕಾರ ನೀಡುವುದಾಗಿ ತಿಳಿಸಿದ ಅವರು, ಮದ್ಯಪಾನದಿಂದ ಸಾವಿರಾರು ಕುಟುಂಬಗಳು ತತ್ತರಿಸಿವೆ. ಅಂತಹ ಕುಟುಂಬಗಳಲ್ಲಿರುವ ವ್ಯಸನಿಗಳನ್ನು ಗುರುತಿಸಿ ಅವರನ್ನು ವ್ಯಸನ ಮುಕ್ತರನ್ನಾಗಿಸಿ ಅವರಿಗೆ ಹೊಸ ಬದುಕನ್ನು ಕಟ್ಟಿ ಕೊಡುತ್ತಿರುವ ಈ ಸಂಘದ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉಸಿರುಗಟ್ಟಿಸುವ ಪರಿಸ್ಥಿತಿ
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಬೆಳಗಾವಿಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ, ಸಮಾಜದಲ್ಲಿ ಯುವಕರು ದುಶ್ಚಟಗಳಿಗೆ ಬೇಗನೆ ಆಕರ್ಷಿತಗೊಳ್ಳುತ್ತಿದ್ದಾರೆ. ಇದರಿಂದ ವ್ಯಸನಕ್ಕೆ ಒಳಗಾಗುತ್ತಿರುವವರ ಬಳಿ ಮಾನವೀಯ ಮೌಲ್ಯಗಳಿಗೆ ಬೆಲೆ ಇಲ್ಲದಂತಾಗಿ ಸಮಾಜದಲ್ಲಿ ಉಸಿರುಗಟ್ಟಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಇದರಿಂದ ಮನುಷ್ಯನಲ್ಲಿರುವ ದಯೆ, ಕರುಣೆ ಹಾಗೂ ಸಂಸ್ಕೃತಿ ಸಂಪೂರ್ಣವಾಗಿ ನಶಿಸಿಹೋಗುತ್ತಿವೆ ಎಂದು ಕಳವಳ ವ್ಯಕ್ತ ಪಡಿಸಿದರು. ಪ್ರತಿಯೊಬ್ಬ ಮನುಷ್ಯನಿಗೆ ಸಮಾಜ ಎಲ್ಲ ರೀತಿಯ ಅನುಕೂಲ ಕಲ್ಪಿಸುತ್ತಿದೆ. ಆದ ಕಾರಣ ಸಮಾಜದ ಋಣ ತಿರಿಸುವ ಬಗ್ಗೆ ಪ್ರತಿಯೊಬ್ಬರೂ ಅಣಿಯಾಗಬೇಕೆಂದು ಕಿವಿಮಾತನ್ನು ಹೇಳಿದರು.
ವ್ಯವಸನ ಮುಕ್ತರಿಗೆ ಜಾಗೃತಿ ಮಿತ್ರ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಬೆಳಗಾವಿಯ ಸಿ.ಐ.ಡಿ ಪೊಲೀಸ್ ಇನ್ಸಪೆಕ್ಟರ್ ಜೋತಿರ್ಲಿಂಗ ಹೊನಕಟ್ಟಿ, ಮನುಷ್ಯನಲ್ಲಿರುವ ದುಶ್ಚಟಗಳು ಅವನ ಅವನತಿಗೆ ಕಾರಣವಾಗುತ್ತವೆಯೇ ಹೊರೆತು ಬೆಳವಣಿಗೆಗೆ ಅಲ್ಲ, ವ್ಯಸನಕ್ಕೆ ಒಳಗಾದವರಿಂದ ಅನೇಕ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಇದರಿಂದ ಸಮಾಜದಲ್ಲಿ ಶಾಂತತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಹೇಳಿದರು.
ಸದೃಡ ಸಮಾಜ ನಿರ್ಮಾಣವಾಗುವವರೆಗೂ ಘಾತುಕ ಶಕ್ತಿಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಬೇಕೆಂದು ಕರೆ ನೀಡಿದರು.
ಜಿಪಂ ಸದಸ್ಯೆ ರೋಹಿಣಿ ಪಾಟೀಲ, ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಮಾತನಾಡಿದರು.
ಕೆಎಂಎಫ್ ನಿರ್ದೇಶಕ ಬಸವರಾಜ ಪರವಣ್ಣವರ, ಜನಜಾಗೃತಿ ವೇದಿಕೆ ಅಧ್ಯಕ್ಷ ವಿಠ್ಠಲ ಪೀಸೆ, ಉಪಾಧ್ಯಕ್ಷ ಕೃಷ್ಣಾಜಿ ಕುಲಕರ್ಣಿ, ಸದಸ್ಯರಾದ ಜಗಧೀಶ ಹಾರೂಗೊಪ್ಪ, ಉಮಾದೇವಿ ಬಿಕ್ಕಣ್ಣವರ, ಅದೃಶ್ಯಪ್ಪಾ ಗದ್ದಿಹಳ್ಳಿ ಶೆಟ್ಟಿ, ಪಪಂ ಸದಸ್ಯ ಕಿರಣ ಪಾಟೀಲ, ಸೇರಿದಂತೆ ನವಜೀವನ ಸಮಿತಿಯ ಸದಸ್ಯರು ಹಾಜರಿದ್ದರು. ಗ್ರಾಮೀಣಾಭಿವೃದ್ಧಿ ಸಂಘದ ಜಿಲ್ಲಾ ನಿರ್ದೇಶಕ ಶಿನಪ್ಪ ಎಂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕಾ ಯೋಜನಾಧಿಕಾರಿ ಪ್ರಶಾಂತ ನಾಯ್ಕ ಠರಾವು ಮಂಡಿಸಿದರು.
ದುಶ್ಚಟಗಳ ವಿರುದ್ಧ ನಡೆದ ಬೃಹತ್ ಜನಜಾಗೃತಿ ಜಾಥಾ ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ವರ್ತುಳದಿಂದ ಆರಂಭವಾಗಿ ವೀರಭದ್ರೇಶ್ವರ ಸಭಾ ಮಂಟಪದಲ್ಲಿ ಅಂತ್ಯಗೊಂಡಿತು. ಮೆರವಣಿಗೆಯಲ್ಲಿ ವಿವಿಧ ವೇಷ ಭೂಷಣದಲ್ಲಿ ಪಾಲ್ಗೊಂಡ ಮಹಿಳೆಯರು ನೋಡುಗರ ಗಮನ ಸೆಳೆದರು, ಹಾಗೂ ಮೆರವಣಿಗೆಯುದ್ದಕ್ಕೂ ಎಲ್ಲರೂ ವ್ಯಸನದಿಂದಾಗುವ ಕೆಟ್ಟ ಪರಿಣಾಮದ ಬಗ್ಗೆ ಕೈಯಲ್ಲಿ ಬಿತ್ತಿ ಪತ್ರಗಳನ್ನು ಹಿಡಿದು ಸಾಗುತ್ತಿದಿದ್ದು ಸಾಮಾನ್ಯವಾಗಿತ್ತು.
ಸಭೆಯಲ್ಲಿ ಕೈಗೊಂಡ ಠರಾವು :
ಮದ್ಯಪಾನದಿಂದ ಆಗುವ ಸಮಾಜಿಕ ಕಷ್ಟ, ನಷ್ಟಗಳ ಬಗ್ಗೆ ಹಾಗೂ ಸರ್ಕಾರದ ಬೊಕ್ಕಸಕ್ಕೆ ಉಂಟಾಗುವ ನಷ್ಟದ ಕುರಿತು ವೈಜ್ಞಾನಿಕ ಅಧ್ಯಯನ ಮಾಡಲು ಸಮಿತಿ ರಚಿಸಿ ವರದಿ ಹೊರತಂದು ರಾಜ್ಯದಲ್ಲಿ ಸಂಪೂರ್ಣ ಮದ್ಯಮಾರಾಟ ನಿಷೇಧಿಸಬೇಕು.
ರಾಜ್ಯದಲ್ಲಿರುವ ಅಬಕಾರಿ ಟಾರ್ಗೆಟ್ ಪದ್ದತಿಯನ್ನು ರದ್ದುಗೊಳಿಸಬೇಕು.
ಜನಜಾಗೃತಿ ವೇದಿಕೆ ನಡೆಸುವ ಕಾರ್ಯಚಟುವಟಿಕೆಗಳಲ್ಲಿ ಸಂಪೂರ್ಣ ಸಹಕಾರ ನೀಡುವಂತೆ ಅಬಕಾರಿ ಹಾಗೂ ಪೊಲೀಸ್ ಇಲಾಖೆಗೆ ಆದೇಶಿಸಬೇಕು,
ದುಶ್ಚಟ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕಾರ್ಯಕ್ರಮವನ್ನು ರೂಪಿಸಬೇಕು.
ಸರ್ಕಾರದ ವತಿಯಿಂದ ಯಾವುದೇ ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡಬಾರದು. ಅಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು.
ಗ್ರಾಮಾಂತರ ಪ್ರದೇಶದಲ್ಲಿ ಅನಧಿಕೃತವಾಗಿ ಮದ್ಯಮಾರಾಟವನ್ನು ತಡೆಯಬೇಕು. ಇದರ ವಿರುದ್ಧ ಸಂಬಂಧ ಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ