ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಗೋವಾ ರಾಜ್ಯದಲ್ಲಿ ತಯಾರಿಸುವ ಭಟ್ಟಿ ಮದ್ಯವನ್ನು ಹಾಲಿನ ಟ್ಯಾಂಕರ್ ನಲ್ಲಿ ಸಾಗಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಖಾನಾಪುರ ಪೊಲೀಸರು ಇಬ್ಬರನ್ನು ಬಂಧಿಸಿ ಟ್ಯಾಂಕರ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಹಾಲು ಸರಬರಾಜು ಮಾಡಲು ಬೆಳಗಾವಿಯಿಂದ ಗೋವಾ ರಾಜ್ಯಕ್ಕೆ
ತೆರಳಿದ್ದ ಬೆಳಗಾವಿಯ ಟ್ಯಾಂಕರ್ ಗೋವಾದಿಂದ ಬೆಳಗಾವಿಯತ್ತ ಬರುವಾಗ ಗೋವಾದ ಭಟ್ಟಿ
ಮದ್ಯವನ್ನು ಮತ್ತು 8 ಬಾಕ್ಸ್ ಗೋವಾ ಮದ್ಯವನ್ನು ಹೊತ್ತು ತರುತ್ತಿದ್ದುದನ್ನು ಅರಿತ
ಪೊಲೀಸರು ತಾಲ್ಲೂಕಿನ ಕಣಕುಂಬಿ ಬಳಿಯ ಚೆಕ್ ಪೋಸ್ಟ್ ಬಳಿ ಕೈಗೊಂಡ ವಿಶೇಷ ಕಾರ್ಯಾಚರಣೆ
ಸಂದರ್ಭದಲ್ಲಿ ರಾಜ್ಯದಲ್ಲಿ ನಿಷೇಧಿತ ಮದ್ಯ ಸಾಗಿಸುತ್ತಿದ್ದ ಆರೋಪದಡಿ ಬೆಳಗಾವಿ
ತಾಲ್ಲೂಕು ರಾಕಸಕೊಪ್ಪ ನಿವಾಸಿಗಳಾದ ಟ್ಯಾಂಕರ್ ಚಾಲಕ ರತನ ಪಾಟೀಲ, ಕ್ಲೀನರ್ ಅಮೋಲ
ಪವಾರ ಅವರನ್ನು ವಶಕ್ಕೆ ಪಡೆದು ಬಂಧಿತರಿಂದ ಮದ್ಯ ಸಾಗಾಟಕ್ಕೆ ಬಳಸಿದ ಗೂಡ್ಸ್ ವಾಹನ
ಮತ್ತು ಅದರಲ್ಲಿದ್ದ 13,500 ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ಎಸ್.ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಖಾನಾಪುರ
ಠಾಣೆಯ ಪಿ.ಎಸ್.ಐ ಬಸಗೌಡ ಪಾಟೀಲ, ಸಿಬ್ಬಂದಿ ಕೆ.ಬಿ ಮೊಕಾಶಿ ಹಾಗೂ ಇತರರು
ಭಾಗವಹಿಸಿದ್ದರು. ಈ ಕುರಿತು ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳಭಟ್ಟಿ ಮದ್ಯ ಮಾರಾಟ: ಮೂವರ ಬಂಧನ
ಖಾನಾಪುರ: ತಾಲ್ಲೂಕಿನ ಎರಡು ಕಡೆಗಳಲ್ಲಿ ಖಾನಾಪುರ ಪೊಲೀಸರು ನಡೆಸಿದ ಮಿಂಚಿನ
ದಾಳಿಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಮದ್ಯ ತಯಾರಿಸಿ ಮಾರುತ್ತಿದ್ದ ಮೂವರನ್ನು ಬಂಧಿಸಿ
ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಬೈಲೂರು ಮತ್ತು ಮಾಡಿಗುಂಜಿ ಗ್ರಾಮಗಳಲ್ಲಿ ದಾಳಿ ನಡೆದಿದ್ದು, ಕಳ್ಳಭಟ್ಟಿ
ತಯಾರಿಕೆ ಮತ್ತು ಮಾರಾಟದ ಆರೋಪದಡಿ ಬೈಲೂರು ಗ್ರಾಮದ ಲಕ್ಷ್ಮಣ ಗೋವೇಕರ ಮತ್ತು ಗುಂಜಿ
ಗ್ರಾಮದ ಗಸ್ತಿಮಾ ರಾಡ್ ಗ್ರಿಜ್ ಮತ್ತು ಶಿರಿಲ್ ರಾಡ್ ಗ್ರಿಜ್ ಎಂಬುವರನ್ನು ಪೊಲೀಸರು
ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು 40 ಸಾವಿರ ಬೆಲೆಬಾಳುವ ಎರಡು ಬೈಕ್, 30 ಲೀ
ಕಳ್ಳಭಟ್ಟಿ ಸಾರಾಯಿಯನ್ನು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ಸ್ಥಳೀಯ
ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಖಾನಾಪುರ
ಪೊಲೀಸರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ