Belagavi NewsBelgaum NewsKarnataka NewsTravel

*ಭರತ ಹುಣ್ಣಿಮೆ ವೇಳೆ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಸಕಲ ವ್ಯವಸ್ಥೆ: ಸಚಿವ ಎಚ್. ಕೆ ಪಾಟೀಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ಬಾರಿ ಭರತ ಹುಣ್ಣಿಮೆ ವೇಳೆ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಜಿಲ್ಲಾಡಳಿತ ವತಿಯಿಂದ ಜನಸಂದಣಿ ನಿರ್ವಹಣೆಗೆ ಪಾರ್ಕಿಂಗ್, ಶೌಚಾಲಯ, ಎಲ್.ಇ.ಡಿ. ಸ್ಕ್ರೀನ್ ಅಳವಡಿಕೆ ಸೇರಿದಂತೆ ಸಕಲ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್.ಕೆ.ಪಾಟೀಲ್ ತಿಳಿಸಿದರು.‌

ಇಂದು ಡಿಸಿ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ದಾಸೋಹ ಭವನ ಮತ್ತು ಮೇವು ದಾಸೋಹ ಭವನ ನಿರ್ಮಾಣಕ್ಕೆ ಒಂದು ತಿಂಗಳಿನಲ್ಲಿ ಶಂಕುಸ್ಥಾಪನೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಪವಿತ್ರ ಗುಡ್ಡದ ಅಭಿವೃದ್ಧಿಗೆ ಟಿಟಿಡಿ ಮಾದರಿಯಲ್ಲಿ ಅಭಿವೃದ್ಧಿಯನ್ನು ಮಾದರಿಯಾಗಿಟ್ಟುಕೊಂಡು ಯೋಜನೆ ರೂಪಿಸಲಾಗುವುದು.‌ ಸವದತ್ತಿ ಅಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನೆ, ಸಣ್ಣಪುಟ್ಟ ಕಾನೂನಾತ್ಮಕ ಸಮಸ್ಯೆಗಳನ್ನು ಜಿಲ್ಲಾಡಳಿತ ಬಗೆಹರಿಸಿದೆ ಎಂದರು. 

ಕೇಂದ್ರದಿಂದ ನೂರು ಕೋಟಿ ಮಂಜೂರಾಗಿದೆ. ಇದು ಮಾತ್ರವಲ್ಲದೇ 20 ಕೋಟಿ ಪ್ರಸಾದ ಯೋಜನೆಯಡಿ ಮಂಜೂರಾಗಿದೆ. ಇದಲ್ಲದೇ ರಾಜ್ಯ ಸರಕಾರದಿಂದ ಕೂಡ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ವಸತಿ ಗೃಹ, ದಾಸೋಹ ಭವನ, ಮೂಲಸೌಕರ್ಯಗಳನ್ನು ಒಳಗೊಂಡ ಮಾಸ್ಟರ್ ಪ್ಲ್ಯಾನ್ ಬಹುತೇಕ ಸಿದ್ಧಗೊಂಡಿದೆ. ವೆಬ್ ಸೈಟ್ ನಲ್ಲೂ ಪ್ಲ್ಯಾನ್ ಪ್ರಕಟಿಸಿ ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸಲಾಗುವುದು.

ದಾಸೋಹ ಭವನ ನಿರ್ಮಾಣದ ನಂತರ ದಾಸೋಹ ಆರಂಭಿಸಲಾಗುವುದು. ಸವದತ್ತಿ ಗುಡ್ಡದಲ್ಲಿ ಬಯಲು ಶೌಚಾಲಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು ಎಂದು ಹೇಳಿದರು.

ಅಕ್ಟೋಬರ್ 2 ರವರೆಗೆ ಗಾಂಧಿ ಭಾರತ ಕಾರ್ಯಕ್ರಮ ನಡೆಯಲಿದೆ. ಇದರ ಅಂಗವಾಗಿ 28 ಬಗೆಯ ಕಾರ್ಯಕ್ರಮಗಳನ್ನು ಸರಕಾರದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದರು.

ಗೋಕಾಕ ಫಾಲ್ಸ್ ರೋಪ್ ಕಾರ್ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಭೀಮಗಡ ಪ್ರದೇಶದಲ್ಲಿ 18 ಕಿ.ಮೀ. ಸಫಾರಿಗಾಗಿ ಮುಕ್ತಗೊಳಿಸಲಾಗುತ್ತಿದೆ. ಅದು ಆರಂಭಗೊಂಡ ಬಳಿಕ ಭೀಮಗಡ ಅತ್ಯಾಕರ್ಷಕ ಪ್ರವಾಸಿತಾಣ ಆಗಲಿದೆ ಎಂದರು

ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಕುರಿತ ಮಾಹಿತಿ ಪುಸ್ತಕವನ್ನು ಸಚಿವ ಎಚ್.ಕೆ.ಪಾಟೀಲ ಬಿಡುಗಡೆಗೊಳಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಗೀತಾ ಕೌಲಗಿ, ಸೌಮ್ಯಾ ಬಾಪಟ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button