ಸಿಕ್ಕಿದ್ದೆಲ್ಲ ನನ್ನದೇ ಹಣ, ಅದಕ್ಕೆಲ್ಲ ದಾಖಲೆ ಇದೆ, ಬೇನಾಮಿ ಅಲ್ಲ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು-
ನನ್ನ ಮನೆಯಲ್ಲಿ, ಸ್ನೇಹಿತರ ಮನೆಯಲ್ಲಿ, ಸಂಬಂಧಿಕರ ಮನೆಯಲ್ಲಿ ಸಿಕ್ಕಿದ ಹಣ ನನ್ನದೇ. ಕಾನೂನು ಬಾಹಿರವಾಗಿ ಸಂಪಾದಿಸಿದ್ದಲ್ಲ. ಅದಕ್ಕೆಲ್ಲ ದಾಖಲೆ ಇದೆ. ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ್ದೇನೆ. ಅವೆಲ್ಲ ಬೇನಾಮಿ ಆಸ್ತಿ ಅಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ ಸ್ಪಷ್ಟಪಡಿಸಿದ್ದಾರೆ.
ಜಾರಿ ನಿರ್ದೇಶನಾಲಯದ ನೋಟೀಸ್ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ನವದೆಹಲಿಗೆ ತೆರಳುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನಾತ್ಮಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಎಲ್ಲವನ್ನೂ ಎದುರಿಸಲು ನಾನು ಸಿದ್ದನಿದ್ದೇನೆ. ಓಡಿಹೋಗುವ ಮನುಷ್ಯ ನಾನಲ್ಲ ಎಂದು ತಿಳಿಸಿದರು.
ಪಕ್ಷದ ಸೇವೆಗಾಗಿ ನಾನು ಕಷ್ಟ ಅನುಭವಿಸಬೇಕಾಗಿದೆ
ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ, ನಾಯಕನಾಗಿ ಪಕ್ಷದ ಗುಜರಾತ್ ಶಾಸಕರಿಗೆ, ಮಹಾರಾಷ್ಟ್ರ ಶಾಸಕರಿಗೆ, ನಮ್ಮದೇ ಕೆಲವು ಶಾಸಕರಿಗೆ ರಕ್ಷಣೆ ನೀಡಿದ್ದೇನೆ. ಆ ಹಿನ್ನೆಲೆಯಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎನ್ನುವ ಮೂಲಕ ಪಕ್ಷದ ಸೇವೆಗಾಗಿ ನಾನು ಕಷ್ಟ ಅನುಭವಿಸಬೇಕಾಗಿದೆ ಎನ್ನುವ ರೀತಿಯಲ್ಲಿ ಬಿಂಬಿಸಲು ಯತ್ನಿಸಿದರು.
ನನಗೆ ಕಾನೂನು ರೀತಿಯಲ್ಲಿ ಇರುವ ಅವಕಾಶ ಬಳಸಿಕೊಂಡು ನಾನು ನ್ಯಾಯಾಲಯಕ್ಕೆ ಹೋಗಿದ್ದೇನೆ, ನನ್ನಿಂದಾಗಿ ನನ್ನ ಸಂಬಂಧಿಕರಿಗೆ, ಮಿತ್ರರಿಗೆ ಎಲ್ಲ ನೋಟೀಸ್ ನೀಡಲಾಗಿದೆ. ಎಲ್ಲದಕ್ಕೂ ನಾನೇ ಉತ್ತರ ಕೊಡಿಸಿದ್ದೇನೆ. ನಾನು ನ್ಯಾಯಬದ್ದವಾದ ವ್ಯವಹಾರ ಮಾಡಿದ್ದೇನೆ. ಕಾನೂನಿನಲ್ಲಿ ಗೌರವ ಹೊಂದಿದ್ದೇನೆ. ಯಾವುದೂ ಲಂಚ ಹೊಡೆದ ದುಡ್ಡಲ್ಲ ಎಂದು ಶಿವಕುಮಾರ ಸ್ಪಷ್ಟಪಡಿಸಿದರು.
ಅವರಿಗೊಂದು ನ್ಯಾಯ….
ವಿಧಾನಸಭೆಯಲ್ಲಿ ಶ್ರೀನಿವಾಸ ಗೌಡ ಅವರು 5 ಕೋಟಿ ರೂ. ಕೊಡಲು ಬಂದ ವಿಚಾರ ಮಾತನಾಡಿದ್ದಾರೆ. ಆದರೆ ಅವರಿಗೆಲ್ಲ ಯಾವುದೇ ನೋಟೀಸ್ ನೀಡಲಾಗಿಲ್ಲ. ನನಗೆ, ನಮ್ಮ ಪಕ್ಷದ ನಾಯಕರಿಗೆ ಮಾತ್ರ ನೋಟೀಸ್ ನೀಡಲಾಗುತ್ತಿದೆ. ರಾಜಕೀಯ ವಿಚಾರಗಳನ್ನೆಲ್ಲ ನಾನು ಸಮಯ ಬಂದಾಗ ಹೇಳುತ್ತೇನೆ ಎಂದು ಅವರು ತಿಳಿಸಿದರು.
84 ವರ್ಷದ ನನ್ನ ತಾಯಿ ನಮ್ಮ ಮೇಲೆಯೇ ಅವಲಂಬಿಸಿದ್ದಾರೆ. ಇರುವ ಮಕ್ಕಳನ್ನೇ ನಂಬಿದ್ದಾರೆ. ಅವರ ಆಸ್ತಿಗಳನ್ನೂ ಬೇನಾಮಿ ಎಂದು ಬಿಂಬಿಸಿದ್ದಾರೆ. ನನ್ನ ಮನೆಯೂ ಬೇನಾಮಿ ಎಂದಿದ್ದಾರೆ. ನಾನು ಎಲ್ಲವನ್ನೂ ಕಾನೂನು ಪ್ರಕಾರವೇ ಗಳಿಸಿದ್ದೇನೆ. ಅದರ ಎಲ್ಲ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಎಲ್ಲವನ್ನೂ ಗಮನಿಸಿದ್ದೇನೆ
ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಬೇರೆ ಬೇರೆ ನಾಯಕರು ಏನೇನು ಮಾತನಾಡಿದ್ದಾರೆ ಎಲ್ಲವನ್ನೂ ಗಮನಿಸಿದ್ದೇನೆ. ಆ ಬಗ್ಗೆ ಈಗ ಏನನ್ನೂ ಮಾತನಾಡುವುದಿಲ್ಲ. ಮುಂದೆ ಸಂದರ್ಭ ಬಂದಾಗ ಮಾತನಾಡುತ್ತೇನೆ. ಈಗ ನವದೆಹಲಿಗೆ ತೆರಳಿ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಶಿವಕುಮಾರ ಹೇಳಿದರು.
ನಾನು ಖಾಸಗಿ ಕೆಲಸಕ್ಕೆ ಹೊರಟರೂ ಓಡಿ ಹೋಗುತ್ತಿದ್ದೇನೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ನಾನು ಯಾವುದಕ್ಕೂ ಹೆದರಿ ಓಡುವವನಲ್ಲ ಎಂದೂ ಅವರು ಅಸಮಾಧನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯ ಬಳಿಕ ಶಿವಕುಮಾರ ಮನೆಯ ಬಳಿ ಸೇರಿದ್ದ ಸಾವಿರಾರು ಅಭಿಮಾನಿಗಳಿಗೆ ಕೈ ಬೀಸಿ ನವದೆಹಲಿಗೆ ಹೋರಟರು.
ಬಳ್ಳಾರಿಯಲ್ಲಿ ಪ್ರತಿಭಟನೆ
ಡಿ.ಕೆ.ಶಿವಕುಮಾರ ಅವರನ್ನು ಬೆಂಬಲಿಸಿ ಬೆಂಬಲಿಗರು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಕೀಯವಾಗಿ ಶಿವಕುಮಾರ ಅವರನ್ನು ಹಣಿಯಲು ಷಢ್ಯಂತ್ರ ನಡೆಯುತ್ತಿದೆ ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಿಸಿದ ಸುದ್ದಿ – ಇಂದೇ ವಿಚಾರಣೆಗೆ ಹಾಜರಾಗಲಿರುವ ಡಿ.ಕೆ.ಶಿವಕುಮಾರ
ಕಲ್ಲಿನಂಥ ಡಿ.ಕೆ.ಶಿವಕುಮಾರ ಗಳಗಳನೆ ಅತ್ತಿದ್ದೇಕೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ