*ಬೀದರ್ ಕರ್ನಾಟಕದಲ್ಲೇ ಉಳಿಯಲು ಭೀಮಣ್ಣ ಖಂಡ್ರೆ ಅವರ ಹೋರಾಟವೂ ಕಾರಣ: ಸಿ.ಎಂ.ಸಿದ್ದರಾಮಯ್ಯ*
ಪ್ರಗತಿವಾಹಿನಿ ಸುದ್ದಿ; ಬೀದರ್: ಭೀಮಣ್ಣ ಖಂಡ್ರೆ ಹುಟ್ಟು ಹೋರಾಟಗಾರರು. ಬೀದರ್ ಕರ್ನಾಟಕದಲ್ಲೇ ಉಳಿಯಲು ಭೀಮಣ್ಣ ಖಂಡ್ರೆ ಅವರ ಹೋರಾಟವೂ ಕಾರಣ ಎಂದು ಸಿ.ಎಂ.ಸಿದ್ದರಾಮಯ್ಯ ನುಡಿದರು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮತ್ತು ಡಾ.ಭೀಮಣ್ಣ ಖಂಡ್ರೆ ಜನ್ಮ ಶತಮಾನೋತ್ಸವ ಸಮಿತಿ ಜಂಟಿಯಾಗಿ ಹಮ್ಮಿಕೊಂಡಿದ್ದ ಡಾ.ಭೀಮಣ್ಣ ಖಂಡ್ರೆ ಜನ್ಮ ಶತಮಾನೋತ್ಸವವನ್ನು ಉದ್ಘಾಟಿಸಿ “ಲೋಕನಾಯಕ” ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿದರು.
ಮಹಾತ್ಮಗಾಂಧಿಯವರ ಕರೆ ಓಗೊಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದರು. ಬಳಿಕ ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಸಕ್ರಿಯರಾಗಿ ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲು ರಾಜಿರಹಿತವಾಗಿ ಹೋರಾಟ ನಡೆಸಿದರು. ಇವರ ಹೋರಾಟದ ಹೆಜ್ಜೆಗಳು ಈ ಮಣ್ಣಿನಲ್ಲಿ ದಾಖಲಾಗಿ ಭೀಮಣ್ಣ ಖಂಡ್ರೆಯವರು ಸಮಾಜದ ಋಣ ತೀರಿಸಿ ಸಾರ್ಥಕ ಬದುಕನ್ನು ಸಾಗಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವಣ್ಣನವರ ಅಪ್ಪಟ ಅನುಯಾಯಿಯಾಗಿರುವ ಭೀಮಣ್ಣ ಖಂಡ್ರೆಯವರು ವಚನ ಸಾಹಿತ್ಯವನ್ನು ಇಡಿ ರಾಜ್ಯಕ್ಕೆ ಪಸರಿಸಲು ಶ್ರಮಿಸಿದ್ದಾರೆ. ಜಾತಿ ತಾರತಮ್ಯ ಇಲ್ಲದ ಸಮ ಸಮಾಜದ ಆಶಯ ವಚನ ಸಾಹಿತ್ಯದ್ದಾಗಿದೆ. 850 ವರ್ಷಗಳ ಹಿಂದೆ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಮೇಲು ಕೀಳಿನ ಸಮಾಜವನ್ನು ಅಳಿಸಿ ಸಮಾನಾಂತರ ಸಮಾಜಕ್ಕೆ ಅಡಿಪಾಯ ಹಾಕಿದರು. ಈ ಪಂಪರೆಯಲ್ಲಿ ಭೀಮಣ್ಣ ಖಂಡ್ರೆ ಅವರು ಸಾಗಿ ಬಂದಿದ್ದಾರೆ ಎಂದರು.
ಬಸವಾದಿ ಶರಣರ ಕೆಲಸ ಮತ್ತು ಸಾಹಿತ್ಯ ಈ ಸಮಾಜದಲ್ಲಿ ಜಾತಿ ತಾರತಮ್ಯ ಇರುವವರೆಗೂ ಶಾಶ್ವತವಾಗಿ ಉಳಿಯಲಿದೆ. ಶರಣರಿಂದ ಅಂಬೇಡ್ಕರ್ ವರೆಗೂ ಮಹನೀಯರು ನಡೆಸಿದ ಹೋರಾಟದಿಂದ ರೂಪುಗೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾವು ಕಾಪಾಡಿಕೊಳ್ಳಬೇಕಾದರೆ ಸಾಮಾಜಿಕ , ಆರ್ಥಿಕ ತಾರತಮ್ಯ ಹೋಗಬೇಕು ಎಂದರು.
ಶತಮಾನೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ.ಶಾಮನೂರು ಶಿವಶಂಕರಪ್ಪ ಅವರು ಅಧ್ಯಕ್ಷರಾಗಿದ್ದ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ತರಳಬಾಳು ಜಗದ್ಗುರು ಸಿರಿಗೆರೆ ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.
ಸುತ್ತೂರು ಶ್ರೀ ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಆಂಧ್ರ ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ನೂರಕ್ಕೂ ಅಧಿಕ ಮಹಾಸ್ವಾಮಿಗಳು ಮತ್ತು ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಇಂಧನ ಸಚಿವ ಕೆ.ಜೆ.ಜಾರ್ಜ್, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ನೂರಕ್ಕೂ ಹೆಚ್ಚು ಹಾಲಿ, ಮಾಜಿ ಸಚಿವರು, ಶಾಸಕರು, ನಾಯಕರುಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ