*ಸುಗಮ ಪರೀಕ್ಷೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನಿರ್ದೇಶನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಬೆಂಗಳೂರು ಇವರ ಆದೇಶದಂತೆ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಮೂರು ಹಂತದಲ್ಲಿ ಆಯೋಜಿಸುತ್ತಿದ್ದು, ಪ್ರಥಮ ಹಂತದಲ್ಲಿ 2025ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1ನ್ನು ರಾಜ್ಯಾದ್ಯಂತ ಮಾರ್ಚ-21 ರಿಂದ ಎಪ್ರೀಲ್ 04 ರವರೆಗೆ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ 97 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 130 ಒಟ್ಟು 227 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಪರೀಕ್ಷೆಗೆ ಬೆಳಗಾವಿ ಜಿಲ್ಲೆಯ 34863 ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 47511 ಒಟ್ಟು 82374 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಸಮಯದಲ್ಲಿ ತಡೆರಹಿತ ವಿದ್ಯುತ್ ಸರಬರಾಜು ಮಾಡಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಕೇಂದ್ರದೊಳಗೆ ಅನ್ಯ/ಬಾಹ್ಯ ವ್ಯಕ್ತಿಗಳು, ಸಂಘ/ಸಂಸ್ಥೆ/ರಾಜಕೀಯ ಪಕ್ಷಗಳ ವ್ಯಕ್ತಿಗಳು ಹಾಗೂ ದೃಶ್ಯ/ ಪತ್ರಿಕಾ ಮಾಧ್ಯಮದ ವರದಿಗಾರರು ಮತ್ತು ಪತ್ರಕತ್ರರ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಿದೆ.
ಪರೀಕ್ಷಾ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ
ಪರೀಕ್ಷೆಗಳು ಶಾಂತಿಯುತವಾಗಿ ಹಾಗೂ ಸುರಕ್ಷಿತವಾಗಿ ಪರೀಕ್ಷೆಗೆ ಅನುಕೂಲವಾಗುವ ದೃಷ್ಟಿಯಿಂದ ಪರೀಕ್ಷೆಗಳ ಸುತ್ತಲಿನ 200 ಮೀಟರ ಪ್ರದೇಶವನ್ನು ಅಹಿತಕರ ಘಟನೆ ನಡೆಯದಂತೆ ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡಿ, ಪರೀಕ್ಷಾ ಕೇಂದ್ರದ ಸುತ್ತಲಿನ ನಿಷೇಧಿತ ಪ್ರದೇಶದಲ್ಲಿರುವ ಝರಾಕ್ಷ ಮತ್ತು ಸೈಬರ್ ಕೇಂದ್ರಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಪರೀಕ್ಷಾ ಕೊಠಡಿಗಳಿಗೆ ಅಭ್ಯರ್ಥಿಗಳು ಕ್ಯಾಲ್ಕ್ಯೂಲೇಟರ್ ಮತ್ತು ಮೋಬೈಲ್ ಪೋನ್ ಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಇತರೆ ಇಲಾಖಾ ಅಧಿಕಾರಿಗಳನ್ನೊಳಗೊಂಡ ವಿಚಕ್ಷಣಾ ದಳವನ್ನು ರಚಿಸಲಾಗಿದೆ.
ಯಾವುದೇ ಹಂತದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಪರೀಕ್ಷೆಗೆ ನಿಯೋಜಿತ ಎಲ್ಲ ಅಧಿಕಾರಿ / ಸಿಬ್ಬಂದಿಯವರು ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ನಿಗಾ ವಹಿಸಲು ಸೂಚನೆ ನೀಡಿದೆ.
ಪೊಲೀಸ್ ಭದ್ರತಾ ವ್ಯವಸ್ಥೆಗೆ ಕ್ರಮ
ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಿಂದ ಬೆಳಗಾವಿಯ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 600 ಕ್ಕಿಂತ ಹೆಚ್ಚು ಪರೀಕ್ಷಾರ್ಥಿಗಳನ್ನು ಹೊಂದಿದ 7 ಕೇಂದ್ರಗಳು ಸೇರಿದಂತೆ ಆಯ್ದ 35 ಪರೀಕ್ಷಾ ಕೇಂದ್ರಗಳಳಿಗೆ ಹೆಚ್ಚಿನ ಪೋಲಿಸ್ ಭದ್ರತೆಗೆ ಕ್ರಮ ವಹಿಸುವದರೊಂದಿಗೆ ಎಲ್ಲಾ ಕೇಂದ್ರಗಳಿಗೆ ಅಗತ್ಯ ಪೋಲಿಷ್ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಸೂಕ್ಷ್ಮ 10 ಪರೀಕ್ಷಾ ಕೇಂದ್ರಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಉಪಖಜಾನೆಯ ಭದ್ರತಾ ಕೊಠಡಿಯಿಂದ ಪಡೆದು ಮಾರ್ಗ ನಕ್ಷೆ ಪ್ರಕಾರ ಪರೀಕ್ಷಾ ಕೊಠಡಿಗಳಿಗೆ ತಲುಪುವವರೆಗೆ ಹಾಗೂ ಉತ್ತರ ಪತ್ರಿಕೆಗಳ ಬಂಡಲ್ ಗಳನ್ನು ಜಿಲ್ಲಾ ಸ್ವೀಕೃತಿ ಕೇಂದ್ರಕ್ಕೆ ತಲುಪಿಸುವವರೆಗೆ ಪೊಲೀಸ್ ಭದ್ರತೆ ನೀಡಲಾಗಿದೆ.
ಪರೀಕ್ಷಾ ಕೇಂದ್ರದ ಹೊರಗೆ ಗುಂಪುಗೂಡಿ ವಿದ್ಯಾರ್ಥಿಗಳ ಏಕಾಗೃತೆಗೆ ದಕ್ಕೆ ತರುವಂತಹ ಯಾವುದೇ ಚಟುವಟೆಕೆಗಳನ್ನು ನಿಷೇಧಿಸಿದೆ. ಪರೀಕ್ಷಾ ಕೇಂದ್ರದ ಹೊರಗೆ ಧ್ವನಿವರ್ಧಕಗಳನ್ನು ಅಳವಡಿಸುವುದು ನಿಷೇಧಿಸಲಾಗಿದೆ.
ಪರೀಕ್ಷಾ ಕೇಂದ್ರದ ಸುತ್ತಮುತ್ತ ಜಾತ್ರೆಗಳು ಹಾಗೂ ಮದುವೆ ಸಮಾರಂಭಗಳು ಇದ್ದಲ್ಲಿ ಮೊದಲೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಸೂಚಿಸಲಾಗಿದೆ.
ವೆಬ್ ಕಾಸ್ಟಿಂಗ್ ವ್ಯವಸ್ಥೆ; ಸಿ.ಸಿ ಕ್ಯಾಮರಾ ಅಳವಡಿಕೆ
ಜಿ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಂದ 227 ಪರೀಕ್ಷಾ ಕೇಂದ್ರಗಳಲ್ಲಿನ ಎಲ್ಲಾ ಕೊಠಡಿಗಳಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಿ ವೆಬ್ ಕಾಸ್ಟಿಂಗ್ (Live Streaming) ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಹಂತದ ವೀಕ್ಷಣೆಗೆ 17 ಅಧಿಕಾರಿಗಳನ್ನು ನೇಮಿಸಿ ತರಬೇತಿ ನೀಡಲಾಗಿದೆ. ಬೆಳಗಾವಿ ಜಿಲ್ಲಾ ಹಂತದ ವೀಕ್ಷಣೆಗೆ ಜಿಲ್ಲಾ ಪಂಚಾಯತ ಬೆಳಗಾವಿ ಇಲ್ಲಿ ವ್ಯವಸ್ಥೆಮಾಡಲಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವೆಬ್ ಕಾಸ್ಟಿಂಗ್ ವೀಕ್ಷಣೆಗಾಗಿ ಉಪವಿಭಾಗಾಧಿಕಾರಿಗಳು ಚಿಕ್ಕೋಡಿ ಇವರ ಕಛೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ದಿನಾಂಕ 13-03-2025 ರಂದು Dry run ಮಾಡಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ
ತಾಲೂಕಾ ಹಂತದ ತಾಂತ್ರಿಕ ಸಮಸ್ಯೆ ನಿವಾರಣೆಗೆ 22 ತಾಂತ್ರಿಕ ಸಹಾಯಕರನ್ನು ನೇಮಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತವಾದ ಅಗತ್ಯ ಆಸನದ ವ್ಯವಸ್ಥೆ, ಕುಡಿಯಲು ಶುದ್ಧವಾದ ನೀರು, ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಹಾಗೂ ಇನ್ನಿತರೆ ಮೂಲಭೂತ ಸೌಲಭ್ಯಗಳು ಇರುವ ಕುರಿತು ಮಂಜಾಗೃತ ಕ್ರಮ ಕೈಗೊಳ್ಳಲಾಗಿದೆ.
ತಾಲೂಕಾ ಹಂತದಲ್ಲಿ ವಿಚಕ್ಷಣಾದಳ ವನ್ನು ರಚಿಸಲಾಗಿದ್ದು, ಪ್ರತಿ ದಿನ ಕೇಂದ್ರಗಳಿಗೆ ಮಾರ್ಗ ಮಾದರಿಯಲ್ಲಿ ನಿಯೋಜಿಸಲು ಸೂಚಿಸಿದೆ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಪರೀಕ್ಷಾ ಕೇಂದ್ರಗಳಲ್ಲಿ ಓ.ಆರ್.ಎಸ್. ಪ್ಯಾಕೇಟ ವ್ಯವಸ್ಥೆ ಮಾಡಲು ಹಾಗೂ ಪ್ರತಿ ಪಿ.ಎಚ್.ಸಿ. ಗಳಲ್ಲಿ ತುರ್ತು ಚಿಕಿತ್ಸೆ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದೆ.
ತಾಲೂಕಾ ಮಟ್ಟದಲ್ಲಿ ರೂಟ್ ಮಾಡಿಕೊಂಡು ನಿಗಧಿತ ಸಮಯದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತಲುಪುವ ಕುರಿತು ಪ್ರತಿ ರೂಟ್ ವಾರು ಬಸ್ ಗಳ ವ್ಯವಸ್ಥೆ ಮಾಡಲು ಸೂಚಿಸಿದೆ.
ಪರೀಕ್ಷೆಗಳು ಸುಗಮವಾಗಿ ನಡೆಯುವ ದೃಷ್ಟಿಯಿಂದ ಜಿಲ್ಲಾ ಮಟ್ಟದಲ್ಲಿ ಶಿಕ್ಷಣ ಇಲಾಖೆ ಹಾಗೂ ಇತರೆ ಇಲಾಖಾ ಅಧಿಕಾರಿಗಳನ್ನೊಳಗೊಂಡ 04 ಜಿಲ್ಲಾ ತಂಡಗಳು ಹಾಗೂ ಪ್ರತಿ ವಲಯದಿಂದ 03 ತಂಡಗಳಂತೆ ಒಟ್ಟು 21 ವಿಚಕ್ಷಣಾ ತಂಡವನ್ನು ರಚಿಸಲಾಗಿದೆ.
ಭಯಮುಕ್ತ ವಾತಾವರಣ ನಿರ್ಮಿಸಲು ನಿಯೋಜಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಕರ್ತವ್ಯ ನಿರ್ವಹಿಸಬೇಕು. ವಿಶೇಷ ಅಗತ್ಯತೆಯುಳ್ಳ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನೆಲಮಹಡಿಯಲ್ಲಿ ಸೌಲಭ್ಯ ಒದಗಿಸಲು ತಿಳಿಸಲಾಗಿದೆ. ಎಲ್ಲ ಇಲಾಖೆಗಳ ಸಹಯೋಗದಲ್ಲಿ ಸುಗಮವಾಗಿ ಪರೀಕ್ಷೆ ನಡೆಸಲು ಸೂಚಿಸಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.