*ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಸಕಲ ಸಿದ್ಧತೆ: ಸಚಿವ ಸತೀಶ್ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡಿ.9 ರಿಂದ 20ರವರೆಗೆ ಕರ್ನಾಟಕದ ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿದ್ದು, ಈ ಅಧಿವೇಶನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಂದಾನಗರಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನ ಹಾಗೂ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್ ಓಬಾಮಾ ಅಗಮಿಸುತ್ತಿರುವ ಹಿನ್ನಲೆಯಲ್ಲಿ ಪೇಟಿಂಗ್ ಹಾಗೂ ಕ್ಲಿನಿಂಗ್ ಗೆ ಹೆಚ್ಚು ಹಣ ನೀಡಲಾಗುತ್ತಿದೆ ಎಂದರು.
ಬಾಣಂತಿ ಸಾವು ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಬೆಳಗಾವಿಯ ಪ್ರತಿಷ್ಠಿತ ಬಿಮ್ಸ್ ಆಸ್ಪತ್ರೆಯಲ್ಲಿ ಇದೀಗ ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮೂರು ಜನರ ನೇತೃತ್ವದಲ್ಲಿ ಕಮಿಟಿ ಮಾಡಿ ತನಿಖೆ ನಡೆಸಲಾಗುತ್ತದೆ. ತಪ್ಪಿತಸ್ಥ ವೈದ್ಯರ ವಿರುದ್ದ ಪೊಲೀಸ್ ಕೇಸ್ ದಾಖಲಿಸಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.
ಗುಂಡಿ ಮುಚ್ಚುವ ಕಾರ್ಯಕ್ಕೆ ಡಿ. 15 ಕೊನೆ ದಿನ: ಈಗಾಗಲೇ ಜಿಲ್ಲೆ ಸೇರಿದಂತೆ ಇಡಿ ರಾಜ್ಯದಲ್ಲಿ ಮಳೆ ಅಬ್ಬರ ನಿಂತಿದ್ದು, ರಸ್ತೆಗಳಲ್ಲಿ ಬಿದ್ದ ಗುಂಡಿ ಮುಚ್ಚುವ ಕಾರ್ಯ ಶರವೇಗದಲ್ಲಿ ನಡೆಯುತ್ತಿದೆ. 40 ವರ್ಷಗಳಲ್ಲಿ ಸುರಿಯದಿರುವ ಮಳೆ ಈ ವರ್ಷ ಹೆಚ್ಚು ಸುರಿದಿರುವದರಿಂದ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ರಸ್ತೆಗಳು ಅಲ್ಲಲ್ಲಿ ಹಾಳಾಗಿದೆ. ಈ ಹಾಳಾಗಿರುವ ರಸ್ತೆ ಹಾಗೂ ರಸ್ತೆಗಳಲ್ಲಿ ಬಿದ್ದ ಗುಂಡಿ ಮುಚ್ಚುವ ಕಾರ್ಯಕ್ಕೆ ಡಿ. 15 ಕೊನೆ ಅವಧಿ ನೀಡಲಾಗಿದೆ. ಈ ರಸ್ತೆ ಕಾಮಗಾರಿಗೆ ಈಗಾಗಲೇ ಹಣವನ್ನು ನೀಡಲಾಗಿದ್ದು,ಈ ಕಾರ್ಯ ಮುಗಿದ ನಂತರ ಇನ್ನು ಹೆಚ್ಚಿನ ಹಣ ನೀಡಲಾಗುವುದು ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ