Kannada NewsKarnataka NewsLatest

ಪ್ರಸಿದ್ಧ ವ್ಯಕ್ತಿಗಳೆಲ್ಲ ತಮ್ಮ ಜೀವಿತಾವಧಿಯಲ್ಲಿ ನಿಂದನೆ, ತಾತ್ಸಾರ, ವಿರೋಧ ಎದುರಿಸಿದವರೇ !

ಲೇಖನ : ರವಿ ಕರಣಂ

ನಿಮಗೆ ಗೊತ್ತಿರಬಹುದು. ಇತಿಹಾಸದಲ್ಲಿ ಓದಿದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳು, ಅದರಲ್ಲೂ ನಿನ್ನೆ ಮೊನ್ನೆವರೆಗಿನ ಆತ್ಮ ಚರಿತ್ರೆಗಳಂತೂ ರೋಚಕವಾಗಿರುತ್ತವೆ. ಅವರು ಅನುಭವಿಸಿದ್ದ ಪ್ರತಿಯೊಂದು ಕ್ಷಣಗಳು ಮುಂದಿನ ಪೀಳಿಗೆಗೆ ಪಾಠಗಳಾಗುತ್ತವೆ. ಅದರ ಕುರಿತಾಗಿ ನಾಲ್ಕು ಅಭಿಪ್ರಾಯಗಳನ್ನು ಹಂಚಿಕೊಳ್ಳೋಣ.

ಗೊತ್ತಾ ನಿಮಗೆ ? ಪ್ರಸಿದ್ಧ ವ್ಯಕ್ತಿಗಳೆಲ್ಲ ತಮ್ಮ ಜೀವಿತಾವಧಿಯಲ್ಲಿ ನಿಂದನೆ, ತಾತ್ಸಾರ, ಬೈಗುಳ,ವಿರೋಧ, ಹಲ್ಲೆಗಳನ್ನು ಎದುರಿಸಿದವರೇ ! ಕಾರಣ, ಮಾನವ ಸಮೂಹ ಜೀವನದಲ್ಲಿದ್ದ ಮೇಲೆ, ಇಡೀ ಸಮೂಹವನ್ನು ಮೆಚ್ಚಿಸಲು, ಒಲಿಸಿಕೊಳ್ಳಲು ಅಸಂಭವ. ಅದಂತೂ ದೇವಾನುದೇವತೆಗಳಲ್ಲೇ ಅಸಾಧ್ಯವಾಗಿರುವಾಗ, ತೃಣಕ್ಕೂ ಸಮಾನವಾಗದ, ಭೂಮಿಯ ಮೇಲಿನ ಜೀವಿಗಳಿಗೆ ಸಾಧ್ಯವೇ ? ಇರಲಿ. ಸಮಕಾಲೀನ ಜನರು ಸಾಧನೆಯಲ್ಲಿ ತೊಡಗಿದವರಿಗೆ ಮಾನ್ಯತೆ ಕೊಟ್ಟಿದ್ದು ಅಷ್ಟಕ್ಕಷ್ಟೇ. ಆದರೆ ಸಾಧಕರ ವ್ಯಕ್ತಿತ್ವ, ಗಟ್ಟಿತನವನ್ನು ಅರ್ಥ ಮಾಡಿಕೊಂಡು, ಅದನ್ನು ಮನಸಾರೆ ಪ್ರಶಂಸಿಸಿ, ಆದರ್ಶ ವ್ಯಕ್ತಿಯನ್ನಾಗಿಸಿಕೊಳ್ಳುವ ವ್ಯಕ್ತಿಗಳು ಮುಂದೊಂದು ದಿನ ಬಂದೇ ಬರುತ್ತಾರೆ. ಅದಕ್ಕೆ ಇಂದಿನ ದಿನಮಾನಗಳಲ್ಲಿ ಸಾಧಿಸ ಹೊರಟಿರುವ ವ್ಯಕ್ತಿ ಸಮೂಹಕ್ಕೆ ಇದೊಂದು ಅಂಶ ಮನವರಿಕೆಯಾಗಬೇಕು.

ಅದು ತಮಗೆ ಇಷ್ಟವಾದ ಯಾವುದೇ ಕ್ಷೇತ್ರವಾಗಿರಲಿ, ಅದರಲ್ಲಿ ಕೃಷಿ ಮಾಡುವುದೊಂದೆ ಕಾಯಕವಾಗಿರಬೇಕು. ಫಲ ಈಗಲೇ ದೊರಕಬೇಕು ಎಂಬ ನಿರೀಕ್ಷೆಯೇ ಬೇಕಿಲ್ಲ. ಅದು ನಮ್ಮ ಅಣತಿಯಲ್ಲಿಲ್ಲ. ಬೀಜ ಬಿತ್ತಿ ಹೋಗುವುದು ಸಾಧಕನ ಕೆಲಸ. ಮುಂದೆ ಫಲ ಬರುತ್ತದೆ. ಆಗ ಇವನು ಇರಲ್ಲ. ಆದರೆ ಮುಂದೆ ಬಂದ ಪೀಳಿಗೆ ಇವನನ್ನು ಸ್ಮರಿಸುತ್ತದೆ. ಮನಸಾರೆ ಕೊಂಡಾಡುತ್ತದೆ. ಕಾರಣ ಸಾಧಕನೋರ್ವನ ವ್ಯಕ್ತಿತ್ವದ ಬುತ್ತಿಯನ್ನು ಮುಂದಿನವರು ಬಿಚ್ಚಿ ನೋಡಿ, ಒರೆಗೆ ಹಚ್ವಿ ಅಬ್ಬಾ ! ಎನ್ನುತ್ತದೆ. ಆದರೆ ವಿಚಿತ್ರ ನೋಡಿ. ಸಾಧಕನೋರ್ವನ ಸುತ್ತ ಮುತ್ತಲಿನ ಜನಕ್ಕೆ ಅವನೇನೇನೂ ಅಲ್ಲ. “ನನ್ನ ಮುಂದೆ ಇವನೇನು ಮಹಾ ?” ಎನ್ನುತ್ತದೆ. ಹಾಗಾಗಿ ಹಿಂದಿನ ಎಲ್ಲ ಮಹಾ ಮಹಿಮರಿಗೆ ವಿರೋಧಿಗಳಿದ್ದರೆಂಬ ಸಂಗತಿಗಳಿವೆ. ತೊಂದರೆಗಳನ್ನು ಅನುಭವಿಸಿದ ಘಟನೆಗಳಿವೆ. ಅಷ್ಟೇ ಅಲ್ಲ. ಮರಣ ದಂಡನೆಗೂ, ಪ್ರಾಣ ಹಾನಿಗೂ ತುತ್ತಾದದ್ದಿದೆ. ಈ ಪರಿಯ ಅಸೂಯೆ ಉಂಟು ಮಾಡಿದ ಸಾಧನೆಯಾದರೂ ಎಂಥದು ? ಮೆಚ್ಚಲೇಬೇಕು.

ಸಮಕಾಲೀನ ಜೀವನದಲ್ಲಿ ಸುತ್ತ ಮುತ್ತಲಿನ ಜನರಿಂದ ಯಾವತ್ತೂ ಒಬ್ಬರ ಏಳಿಗೆಯನ್ನು ಸಹಿಸಲಾಗದು. ಕಾರಣವಿಷ್ಟೇ. ತಮ್ಮೊಳಗೆ ಇರಲಾರದ ಸಾಮರ್ಥ್ಯ ಎದುರಿಗಿರುವ ವ್ಯಕ್ತಿಯಲ್ಲಿರುವುದನ್ನು ಕಂಡಾಗ, ಅಸೂಯೆ ಭಾವ ಬೆನ್ನೇರಿ ಬಿಡುತ್ತದೆ. ತಾನು ಅವನ ಮುಂದೆ ಸೋತಂತೆನಿಸಿಬಿಡುತ್ತದೆ. ಇದನ್ನೇ ಧನಾತ್ಮಕವಾಗಿ ತೆಗೆದುಕೊಂಡಾಗ, ಒಂದು ಮೆಚ್ಚುಗೆ, ಹಲವು ಚೆಪ್ಪಾಳೆ,ಸಂತೋಷದ ನಗು ಸುತ್ತಲೂ ಹರಡುತ್ತದೆ. ಏನು ಮಾಡುವುದು ? ಮಾತ್ಸರ್ಯ ಅಥವಾ ಅಸೂಯೆಗೆ ಮದ್ದಿಲ್ಲ. ಅದು ಹೊರಗಡೆಯಿಂದ ಶಮನ ಮಾಡುವಂತಹುದೇ ಅಲ್ಲ. ಪ್ರಜ್ಞೆಯಿಂದ ಇಲ್ಲವೇ ಅರಿವಿನಿಂದ ಶಮನವಾಗಬೇಕು ಅಷ್ಟೇ.

ಶಿಕ್ಷಕ, ಸಾಹಿತಿ, ವಿಜ್ಞಾನಿ, ಕಲಾವಿದ, ರಾಜಕಾರಣಿ, ಸಂಗೀತ ವಿದ್ವಾಂಸ, ವಾದ್ಯ ಪ್ರವೀಣ, ಭಾಷಾ ಜ್ಞಾನಿ, ವ್ಯಾಪಾರಿ ಮತ್ತು ಯಾರನ್ನೇ ತೆಗೆದುಕೊಳ್ಳಿ. ತನಗಾಗದ ಲಾಭ, ಅವಕಾಶ, ಗೌರವ, ಕೀರ್ತಿ ಇನ್ನೇನೋ ಇನ್ನೊಬ್ಬನಿಗೆ ಒಲಿಯುತ್ತಿದೆ ಎಂದಾಗ ಅವನಿಗೆ ನಿರಾಶೆ ಕಾದಿರುತ್ತದೆ. ಇದನ್ನು ವೃತ್ತಿ ಮಾತ್ಸರ್ಯ ಎಂದು ಕರೆಯುತ್ತಾರೋ ಏನೋ ! ಅದಕ್ಕಾಗಿ ಅವನ ಒಳಗೊಳಗೇ ಗೊತ್ತಿಲ್ಲದೇ ದ್ವೇಷ ಅಸೂಯೆಗಳು ಮನೆ ಮಾಡಿ, ಮನೋರೋಗಿಯನ್ನಾಗಿಸುತ್ತವೆ. ಅದರಿಂದ ತನಗೇ ನಷ್ಟವಿದೆ ಎಂಬ ಅರಿವು ಅವನೊಳಗೆ ಮೂಡುವಷ್ಟರಲ್ಲಿ ಸಾವಿಗೆ ಹತ್ತಿರದಲ್ಲಿರುತ್ತಾನೆ. ಆಗಲಾದರೂ ಬದಲಾಗುತ್ತಾನೆಯೇ ? ಅಶಕ್ಯ. ಎದುರಿಗಿರುವವನು ತನಗಿಂತ ಹೆಚ್ಚು ಇರಬಲ್ಲ ಮತ್ತು ಇರುತ್ತಾನೆ ಎಂಬ ಮಾತನ್ನು ಒಪ್ಪಿಕೊಳ್ಳಲಾರ. ಹಾಗಾಗಿ ಅವನೆಂದೂ ಬೆಳೆಯಲಾರ.

ತಾವಂತೂ ತಮ್ಮೊಳಗಿನ ಪ್ರತಿಭೆಯನ್ನು, ಸಾಮರ್ಥ್ಯವನ್ನು ಬಳಸಿಕೊಂಡು, ಬೆಳೆಸಿಕೊಂಡು, ನೆಲಕ್ಕೇನಾದರೂ ಅಲ್ಪ ಸೇವೆಯನ್ನು ಮಾಡುವ ಮನಸ್ಸನ್ನು ಹೊಂದಿರುವುದಿಲ್ಲ. ತಮ್ಮ ಅಕ್ಕ ಪಕ್ಕದಲ್ಲಿರುವವರು ಯಾವುದಾದರೊಂದು ಕ್ಷೇತ್ರದಲ್ಲಿ ಸಾಧನೆಗೈಯುತ್ತಿದ್ದಾರೆಂದರೆ, ಅದನ್ನು ಕೂಡಾ ಸಹಿಸಿಕೊಳ್ಳಲಾರದವರಾಗುತ್ತಾರೆ. ಅದು ಯಾಕೋ ? ಹೆಸರು, ಕೀರ್ತಿ, ಗೌರವ – ಪುರಸ್ಕಾರಗಳು ಕೇವಲ, ಸಾಧನೆಯಲ್ಲಿ ತೊಡಗಿದ ವ್ಯಕ್ತಿಗೆ ಉತ್ತೇಜಿಸುವ ಉದ್ದೇಶವನ್ನು ಮಾತ್ರ ಹೊಂದಿದೆಯೇ ವಿನಃ ಅವನನ್ನು ದೈವ ಸ್ವರೂಪಕ್ಕೇನೂ ಮುಟ್ಟಿಸಲಾರವು.

ಅಂತೆಯೇ ಸಾಧಕರೂ ಸಹ ತಾವೇನೋ ಜಗತ್ತಿಗೆ ಮಹೋಪಕಾರ ಮಾಡಿದ್ದೇವೆ ಎಂಬ ಭಾವವನ್ನು ತಳೆಯಬಾರದು. ಸಾಮಾನ್ಯರಲ್ಲಿ ಸಾಮಾನ್ಯನೇ ಅಗ್ರಮಾನ್ಯ ಎಂಬುದಂತೂ ಎಲ್ಲರಲ್ಲೂ ಮನೆ ಮಾಡಬೇಕು. ಇಲ್ಲವಾದಲ್ಲಿ ಸಾಮಾಜಿಕ ಅಂತರ ಎಂಬ ಪರದೆಯ ಹಿಂಬದಿ ಸರಿದಾಗ, ಸಾಮಾಜೀಕರಣ ಪ್ರಕ್ರಿಯೆಯೇ ಘಾಸಿಗೊಳ್ಳುತ್ತದೆ. ಸಮೂಹದಲ್ಲಿ ತಾನೊಬ್ಬನಿದ್ದು ಎಲ್ಲರನ್ನೂ ಜೊತೆಯಾಗಿ ಕೊಂಡೊಯ್ಯುವ ಬುದ್ದಿಯೂ ನಮ್ಮಲ್ಲಿರಬೇಕು. ಸಂತೋಷವನ್ನು ಹಂಚಬೇಕೇ ವಿನಃ ನಮ್ಮೊಳಗೇ ಅದುಮಿಟ್ಟುಕೊಂಡರೆ, ಅದಕ್ಕೆ ಬೆಲೆಯೇ ಸಿಗದು, ಅಲ್ಲವೇ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button