*5 ಲಕ್ಷ ಹಣ, ಕಾರು ವಾಪಸ್ ನೀಡದೆ ಬೆದರಿಕೆ ಆರೋಪ*: *ನಟ ಧನ್ವೀರ್ ವಿರುದ್ಧ ಸಾಲು ಸಾಲು ದೂರು*

ಪ್ರಗತಿವಾಹಿನಿ ಸುದ್ದಿ: ನಟ ಧನ್ವೀರ್ ಗೌಡ ವಿರುದ್ಧ ಬೆಂಗಳೂರಿನಲ್ಲಿ ಮತ್ತಷ್ಟು ದೂರುಗಳು ದಾಖಲಾಗಿವೆ. ₹5 ಲಕ್ಷಕ್ಕೆ ವಿಮಾನ ಟಿಕೆಟ್ ಬುಕ್ ಮಾಡಿಸಿಕೊಂಡು ಹಣ ಹಿಂದಿರುಗಿಸಿಲ್ಲ, ಕಾರನ್ನೂ ವಾಪಸ್ ನೀಡಿಲ್ಲ ಎಂದು ಗೌರವ್ ಎಂಬಾತ ಆರೋಪಿಸಿದ್ದಾರೆ. ಮತ್ತೊಂದೆಡೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಮ್ಯಾನೇಜರ್ ನಾಗರಾಜ್ ಕೂಡ ಧನ್ವೀರ್ ವಿರುದ್ಧ ದೂರು ನೀಡಿದ್ದಾರೆ. ಈ ದೂರುಗಳ ಆಧಾರದಲ್ಲಿ ಬ್ಯಾಟರಾಯನಪುರ ಮತ್ತು ಆರ್‌ಆರ್ ನಗರ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ.
ಗೌರವ್ ನೀಡಿದ ದೂರಿನ ಪ್ರಕಾರ, ಧನ್ವೀರ್ ಮತ್ತು ಶಶಿ ಎಂಬಾತನಿಗೆ ಸಂಬಂಧಿಸಿದಂತೆ ₹5 ಲಕ್ಷ ಮೌಲ್ಯದ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಲಾಗಿತ್ತು. ಟಿಕೆಟ್ ಬುಕ್ ಆದ ಬಳಿಕ ಹಣ ಕೇಳಿದರೂ ಧನ್ವೀರ್ ಹಣ ಹಿಂದಿರುಗಿಸಿಲ್ಲ ಎಂದು ಆರೋಪಿಸಲಾಗಿದೆ. ಹಣ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇಷ್ಟೇ ಅಲ್ಲದೆ, ತನ್ನ ವೋಕ್ಸ್‌ವ್ಯಾಗನ್ ಕಾರನ್ನು ಧನ್ವೀರ್ ಶಶಿ ಎಂಬಾತನಿಗೆ ನೀಡಿದ್ದಾರೆ. ಹಣ ಮತ್ತು ಕಾರನ್ನು ವಾಪಸ್ ನೀಡುವಂತೆ ಕೇಳಿದಾಗ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಗೌರವ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ಇನ್ನೊಂದೆಡೆ, ವಿಜಯಲಕ್ಷ್ಮಿ ಮ್ಯಾನೇಜರ್ ನಾಗರಾಜ್ ಕೂಡ ಧನ್ವೀರ್ ವಿರುದ್ಧ ಆರ್‌ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಧನ್ವೀರ್ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ನಾಗರಾಜ್ ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದ ಆಡಿಯೋ ರೆಕಾರ್ಡಿಂಗ್‌ನ್ನೂ ಪೊಲೀಸರಿಗೆ ನೀಡಿದ್ದಾರೆ. ದೂರಿನ ಆಧಾರದಲ್ಲಿ ಆರ್‌ಆರ್ ನಗರ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ. ಮುಂದಿನ ವಿಚಾರಣೆಗಾಗಿ ಧನ್ವೀರ್‌ಗೆ ನೋಟಿಸ್ ನೀಡುವ ಸಾಧ್ಯತೆಯಿದೆ.
ಈ ಬೆಳವಣಿಗೆಗಳ ನಡುವೆ ಧನ್ವೀರ್ ತಂದೆ ತಿಮ್ಮೇಗೌಡ ಕೂಡ ವಿಜಯಲಕ್ಷ್ಮಿ, ಮ್ಯಾನೇಜರ್ ನಾಗರಾಜ್ ಹಾಗೂ ಇತರರ ವಿರುದ್ಧ ಪ್ರತಿದೂರು ನೀಡಿದ್ದಾರೆ. ಧನ್ವೀರ್ ಜೊತೆ ಮಾತನಾಡಲು ಮನೆಗೆ ಬಂದ ತಂಡ, ರೌಡಿಗಳನ್ನು ಕರೆಸಿ ಬೆದರಿಕೆ ಹಾಕಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಗೌರವ್ ಶೆಟ್ಟಿ ಮೂಲಕ ಕೆಲವರನ್ನು ಕರೆಸಲಾಗಿದೆ ಎಂಬ ಆರೋಪವನ್ನೂ ಮಾಡಿದ್ದಾರೆ.
ಒಂದೆಡೆ ಹಣ ಮತ್ತು ಕಾರು ಹಿಂದಿರುಗಿಸದ ಆರೋಪ, ಮತ್ತೊಂದೆಡೆ ನಿಂದನೆ ಹಾಗೂ ಬೆದರಿಕೆ ದೂರುಗಳು ದಾಖಲಾಗಿವೆ. ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವಿನ ವಿವಾದ ಈಗ ಹಲವು ದೂರುಗಳ ರೂಪ ಪಡೆದಿದ್ದು, ಪೊಲೀಸರು ಪ್ರಕರಣಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



