*33 ವರ್ಷಗಳ ಹಿಂದೆ ದೈವಾಧೀನರಾಗಿದ್ದ ಸ್ವಾಮಿ ಚಿನ್ಮಯಾನಂದರೊಂದಿಗೆ ಮೋದಿ ಮಾತುಕತೆ*

ಪ್ರಗತಿವಾಹಿನಿ ಸುದ್ದಿ: ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ‘ಚಿನ್ಮಯ ಅಮೃತ ಮಹೋತ್ಸವ’ ಜಾಗತಿಕ ಶೃಂಗಸಭೆಯಲ್ಲಿ ಅಪರೂಪದ ಭಾವನಾತ್ಮಕ ಕ್ಷಣವೊಂದು ಅನಾವರಣಗೊಂಡಿದೆ. 1993ರಲ್ಲಿ ದೈವಾಧೀನರಾದ ಆಧ್ಯಾತ್ಮಿಕ ಗುರು ಸ್ವಾಮಿ ಚಿನ್ಮಯಾನಂದರ 3D ಹೊಲೊಗ್ರಾಮ್ ರೂಪದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದಾರೆ. ಕೃತಕ ಬುದ್ಧಿಮತ್ತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಮೂಡಿಬಂದ ಈ ದೃಶ್ಯವನ್ನು ಕಂಡು ಸಭೆಯಲ್ಲಿದ್ದ 9,000ಕ್ಕೂ ಹೆಚ್ಚು ಭಕ್ತರು ಮತ್ತು ಗಣ್ಯರು ಮೂಕವಿಸ್ಮಿತರಾಗಿದ್ದಾರೆ.
ಸಂವಾದದ ವೇಳೆ ಪ್ರಧಾನಿ ಮೋದಿ ಸ್ವಾಮಿ ಚಿನ್ಮಯಾನಂದರ ಆಶೀರ್ವಾದ ಕೋರಿದ್ದಾರೆ. ಆಗ ಹೊಲೊಗ್ರಾಫಿಕ್ ರೂಪದ ಮೂಲಕ 1993ರ ವಡೋದರಾ ಭೇಟಿಯ ನೆನಪನ್ನು ಮರುಸೃಷ್ಟಿಸಲಾಗಿದೆ. ಚಿಕಾಗೋದಲ್ಲಿ ನಡೆಯಲಿದ್ದ ವಿಶ್ವ ಧರ್ಮ ಸಂಸತ್ತಿನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಲು ಮೋದಿ ವಡೋದರಾಕ್ಕೆ ಬಂದಿದ್ದ ಘಟನೆಯನ್ನು ಸ್ವಾಮೀಜಿಯವರ ಡಿಜಿಟಲ್ ರೂಪ ನೆನಪಿಸಿಕೊಂಡಿದೆ.
ಆಗ ವಯಸ್ಸಾಗಿರುವುದರಿಂದ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾಗಿ ಹೊಲೊಬೋಟ್ ಸಂವಾದದಲ್ಲಿ ಹೇಳಿದೆ. ಮುಂದಿನ ದಿನಗಳಲ್ಲಿ ಹಿಂದೂ ಯುವಕರು ದೇಶದ ಹೊಣೆ ಹೊತ್ತು ಮುನ್ನಡೆಯಬೇಕು ಎಂಬ ಸಂದೇಶವನ್ನೂ ನೀಡಿದೆ. 1993ರಲ್ಲಿ ಭೇಟಿಯಾಗಿದ್ದ ವ್ಯಕ್ತಿಯೇ ಇಂದು ಭಾರತದ ಪ್ರಧಾನಿಯಾಗಿರುವುದು ಸಂತಸ ತಂದಿದೆ ಎಂಬ ಮಾತುಗಳನ್ನೂ ಈ ಡಿಜಿಟಲ್ ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ.
ಸನಾತನ ಧರ್ಮವನ್ನು ಪ್ರಾಚೀನ ದೇವಾಲಯಕ್ಕೆ ಹೋಲಿಸಿದ ಹೊಲೊಬೋಟ್, ಶತಮಾನಗಳ ನಿರ್ಲಕ್ಷ್ಯದಿಂದ ದುರ್ಬಲಗೊಂಡಿರುವ ಅದರ ಕಂಬಗಳನ್ನು ಪುನರ್‌ನಿರ್ಮಿಸುವುದು ಇಂದಿನ ಯುವಜನರ ಕರ್ತವ್ಯ ಎಂದು ಸಂದೇಶ ನೀಡಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಉತ್ಸಾಹಿ ಯುವಕರು ಒಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದೆ.
ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ವ್ಯಕ್ತಿ ಕೆಲವೊಮ್ಮೆ ಒಂಟಿಯಾಗಬಹುದು, ಆದರೆ ಇಡೀ ಭಾರತ ನಿಮ್ಮೊಂದಿಗಿದೆ ಎಂಬ ಸಂದೇಶವನ್ನೂ ನೀಡಿದೆ. ಭಕ್ತರಿಗೆ ಶ್ರೀಖಂಡ ಪ್ರಸಾದ ನೀಡುವಂತೆ ಹೇಳಿದ್ದು, ಉಪವಾಸದ ಕಾರಣ ನೀಡಿ ಪ್ರಸಾದ ಸೇವಿಸದೆ ಇರಬಾರದು ಎಂದು ಪ್ರಧಾನಿಗೆ ಹೇಳಿದ ಪ್ರಸಂಗವೂ ಸಂವಾದದಲ್ಲಿ ಮೂಡಿಬಂದಿದೆ.
ಈ ವಿಶಿಷ್ಟ ಅನುಭವದ ಬಳಿಕ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿದ್ದಾರೆ. ಸ್ವಾಮಿ ಚಿನ್ಮಯಾನಂದರನ್ನು ಈ ರೂಪದಲ್ಲಿ ಕಂಡು ಮಾತನಾಡಿದ್ದು, 33 ವರ್ಷಗಳ ಹಿಂದಕ್ಕೆ ಮರಳಿದ ಅನುಭವ ನೀಡಿತು ಎಂದು ಹೇಳಿದ್ದಾರೆ. 1993ರಲ್ಲಿ ವಡೋದರಾದಲ್ಲಿ ಸ್ವಾಮೀಜಿಯನ್ನು ಭೇಟಿಯಾಗಿ ಚಿಕಾಗೋ ಧರ್ಮ ಸಂಸತ್ತಿಗೆ ಆಹ್ವಾನಿಸಿದ್ದನ್ನು ನೆನಪಿಸಿಕೊಂಡಿದ್ದಾರೆ.
ಆದರೆ ಕಾರ್ಯಕ್ರಮಕ್ಕೆ ಕೆಲವೇ ವಾರಗಳ ಮೊದಲು, ಆಗಸ್ಟ್ 3, 1993ರಂದು ಸ್ವಾಮಿ ಚಿನ್ಮಯಾನಂದರು ದೈವಾಧೀನರಾದರು. ಇದೀಗ ತಂತ್ರಜ್ಞಾನದ ಮೂಲಕ ಗುರುದೇವರ ಆಶೀರ್ವಾದ ಪಡೆದ ಅನುಭವ ಜೀವನದ ವಿಶಿಷ್ಟ ಆಧ್ಯಾತ್ಮಿಕ ಕ್ಷಣವಾಗಿದೆ ಎಂದು ಮೋದಿ ತಿಳಿಸಿದ್ದಾರೆ. ಇದೇ ವೇಳೆ ಚಿನ್ಮಯ ಮಿಷನ್‌ನ ಕಾರ್ಯವನ್ನೂ ಶ್ಲಾಘಿಸಿದ್ದಾರೆ.
ಹೊಲೊಗ್ರಾಮ್ ತಂತ್ರಜ್ಞಾನದಲ್ಲಿ ವಿಶೇಷ ಬೆಳಕಿನ ವ್ಯವಸ್ಥೆ, ಹೈ-ಡೆಫಿನಿಷನ್ ಚಿತ್ರಣ ಮತ್ತು ಡಿಜಿಟಲ್ ಪ್ರೊಜೆಕ್ಷನ್ ಬಳಸಿ ವ್ಯಕ್ತಿಯ ತ್ರಿಪರಿಮಾಣದ ಆಕೃತಿಯನ್ನು ನೈಜವಾಗಿ ಕಾಣುವಂತೆ ಮಾಡಲಾಗುತ್ತದೆ. ಇದರಿಂದ ವ್ಯಕ್ತಿ ವೇದಿಕೆಯ ಮೇಲೆ ಪ್ರತ್ಯಕ್ಷವಾಗಿ ನಿಂತು ಮಾತನಾಡುತ್ತಿರುವ ಅನುಭವ ಮೂಡುತ್ತದೆ.
ಹೊಲೊಬೋಟ್ ರೂಪಿಸಲು ಸ್ವಾಮಿ ಚಿನ್ಮಯಾನಂದರ ಹಳೆಯ ಭಾಷಣಗಳು, ವಿಡಿಯೊಗಳು, ಧ್ವನಿಯ ಮಾದರಿಗಳು ಮತ್ತು ಹಾವಭಾವಗಳನ್ನು ಕೃತಕ ಬುದ್ಧಿಮತ್ತೆಯೊಂದಿಗೆ ಸಂಯೋಜಿಸಲಾಗಿತ್ತು. ಎದುರಿನ ವ್ಯಕ್ತಿಯ ಮಾತಿಗೆ ತಕ್ಕಂತೆ ಪ್ರತಿಕ್ರಿಯಿಸುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿತ್ತು. ಹೀಗೆ ಆಧುನಿಕ ತಂತ್ರಜ್ಞಾನವು ದಶಕಗಳ ಹಿಂದಿನ ಆಧ್ಯಾತ್ಮಿಕ ವ್ಯಕ್ತಿತ್ವದ ನೆನಪುಗಳನ್ನು ಮತ್ತೆ ವೇದಿಕೆಯಲ್ಲಿ ಜೀವಂತ ಅನುಭವವಾಗಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


