
ಪ್ರಗತಿವಾಹಿನಿ ಸುದ್ದಿ: ಪತ್ನಿಯೊಬ್ಬಳು ತನ್ನ ಪತಿಯನ್ನು ಕೊಲ್ಲಲು ಯೂಟ್ಯೂಬ್ ನೋಡಿ ದತ್ತೂರಿ ಬೀಜ ತರಿಸಿ ಅದರಿಂದ ಕೊಲೆ ಮಡಿರುವ ಘಟನೆ ಬೆಳಕಿಗೆ ಬಂದಿದೆ.
ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಇನ್ನೋರ್ವನ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಮಹಿಳೆ ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆಗೈದಿದ್ದಾಳೆ. ಪತಿ ಕೊಲೆಗೈಯ್ಯಲು ಯೂಟ್ಯೂಬ್ ನೋಡಿ ದತ್ತೂರಿ ಬೀಜ ತರಿಸಿ ಅದರಿಂದ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಜಿಲ್ಲೆಯ ಹುಣಸೂರು ತಾಲೂಕಿನ ವಿನೋಬ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ರಾಮಪ್ರಸಾದ್ (35) ಕೊಲೆಯಾದ ದುರ್ದೈವಿ. ಪವಿತ್ರ ಪತಿಯನ್ನೇ ಕೊಂದ ಮಹಿಳೆ. ಇದಕ್ಕೆ ಆಕೆಯ ಪ್ರಿಯಕರ ಸುನೀಲ್ ಸಾಥ್ ನೀಡಿದ್ದಾನೆ.
ಪ್ರಕರಣ ಸಂಬಂಧ ಪವಿತ್ರಾ ಹಾಗೂ ಸುನೀಲ್ ಇಬ್ಬರನ್ನೂ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪವಿತ್ರಳನ್ನು ಮದುವೆಯಾಗಿದ್ದ ರಾಮಪ್ರಸಾದ್ ದಂಪತಿಗೆ 11 ವರ್ಷದ ಗಂಡು ಹಾಗೂ 9 ವರ್ಷದ ಹೆಣ್ಣು ಮಕ್ಕಳಿದ್ದಾರೆ. ಆದರೆ ಅದೇ ಗ್ರಾಮದ ಸುನೀಲ್ ಎಂಬಾತನೊಂದಿಗೆ ಪವಿತ್ರಾ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಹೇಗಾದರೂ ಮಾಡಿ ಪತಿಯನ್ನು ಮುಗಿಸಲೇಬೇಕು ಎಂದು ಪವಿತ್ರ ಸಂಚು ರೂಪಿಸಿದ್ದಳು. ಹಾಗಾಗಿ ಯೂಟ್ಯೂಬ್ನಲ್ಲಿ ದತ್ತೂರಿ ಬೀಜದ ಕುರಿತು ಮಾಹಿತಿ ಪಡೆದು ಕೊಲೆಗೆ ಪ್ಲಾನ್ ಮಾಡಿದ್ದಳು.
ತನ್ನ ಪ್ಲಾನ್ನಂತೆ ಪವಿತ್ರ, ಅಕ್ಟೋಬರ್ 16ರಂದು ರಾತ್ರಿ ಕುಡಿದು ಮನೆಗೆ ಬಂದ ರಾಮಪ್ರಸಾದ್ಗೆ ಇಡ್ಲಿಯಲ್ಲಿ ದತ್ತೂರಿ ಬೀಜದ ಪುಡಿ ಬೆರೆಸಿ ತಿನ್ನಿಸಿದ್ದಾಳೆ. ಆದರೂ ಆತ ಸಾಯದಿದ್ದಾಗ, ಪ್ರಿಯಕರನ ಸಹಾಯದಿಂದ ಕತ್ತು ಹಿಸುಕಿ ಹತ್ಯೆ ಮಾಡಿದ್ದಾಳೆ. ನಂತರ ಮೃತನ ಸಹೋದರ ಚಂದ್ರಹಾಸಗೆ ಕರೆ ಮಾಡಿದ ಪವಿತ್ರಾ, ಪತಿ ಮೊಸರು ತಿಂದು ಮಲಗಿ ಎದ್ದೇಳುತ್ತಿಲ್ಲ ಎಂದು ನಾಟಕವಾಡಿದ್ದಾಳೆ. ಆಸ್ಪತ್ರೆಗೆ ಕೊಂಡೊಯ್ದಾಗ ರಾಮಪ್ರಸಾದ್ ಮೃತಪಟ್ಟಿರುವುದು ತಿಳಿದುಬಂದಿತ್ತು. ಆಕೆಯ ಮಾತನ್ನೇ ನಂಬಿದ್ದ ಸಂಬಂಧಿಕರು ಮೃತನ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದರು. ಪತಿ ಸಾವಿನ್ನಪ್ಪಿದ ಅದೇ ರಾತ್ರಿ ಆರೋಪಿ ಸುನೀಲ್ ಮನೆಗೆ ಪವಿತ್ರಾ ಹೋಗಿದ್ದಳು. ಈ ಬಗ್ಗೆ ಸ್ಥಳೀಯರು ಚಂದ್ರಹಾಸಗೆ ಮಾಹಿತಿ ನೀಡಿದ್ದಾರೆ. ಸಂಶಯಗೊಂಡು ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರ ತನಿಖೆಯಲ್ಲಿ ಕೊಲೆ ರಹಸ್ಯ ಬಯಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


