ಅಮ್ಮಿನಬಾವಿಯಲ್ಲಿ ಚಿಣ್ಣರ ಸಂತೆ : ಮಕ್ಕಳ ವ್ಯಾಪಾರ ಜೋರು
ಪ್ರಗತಿವಾಹಿನಿ ಸುದ್ದಿ : ‘ಹಾ ಬರ‍್ರಿ ಬರ‍್ರಿ…ಆಲೂಗಡ್ಡಿ, ಉಳ್ಳಾಗಡ್ಡಿ 30 ರೂಪಾಯಕ ಕಿಲೋ, ಮೆಂತೆ, ಕೋತಂಬ್ರಿ, ಕಿರಕಸಾಲಿ ಶಿವುಡು 5 ರೂಪಾಯಿ… 10 ರೂಪಾಯಕ 4 ಮೂಲಂಗಿ…ಹಾ ಬರ‍್ರಿ ಬರ‍್ರಿ…’
ತಾಲೂಕಿನ ಅಮ್ಮಿನಬಾವಿ ಗ್ರಾಮದ ಪಂಚಗೃಹ ಹಿರೇಮಠದ ಆವರಣದಲ್ಲಿರುವ ಶ್ರೀಮತಿ ಸುಶಿಲಾತಾಯಿ ಅಜ್ಜಯ್ಯ ಹಿರೇಮಠ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಚಿಣ್ಣರ ಸಂತೆ’ಯಲ್ಲಿ ಶಾಲಾ ಮಕ್ಕಳ ವ್ಯಾಪಾರ ಭಾರಿ ಜೋರಾಗಿ ನಡೆದ ದೃಶ್ಯವಿದು. ಥೇಟ್ ವ್ಯಾಪಾರಸ್ಥರ ಗತ್ತಿನಲ್ಲಿ ತಮ್ಮ ತಮ್ಮ ಸಾಮಾನುಗಳ ಮಾರಾಟದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮಗ್ನರಾಗಿ ವ್ಯಾಪಾರ ಕುದುರಿಸಲು ಕೂಗಿ ಕೂಗಿ ಗ್ರಾಹಕರನ್ನು ತಮ್ಮತ್ತ ಸೆಳೆದ ದೃಶ್ಯಗಳು ಗಮನಸೆಳೆದವು.
ಟೋಮೇಟೋ, ಉಳ್ಳಾಗಡ್ಡಿ, ಆಲೂಗಡ್ಡಿ, ಹಸಿಮೆಣಸಿನಕಾಯಿ, ಬೊಳ್ಳೊಳ್ಳಿ, ಹಸಿಶುಂಠಿ, ಬದನೆಕಾಯಿ, ಬೀನ್ಸ್, ಮೆಂತೆ, ಕಿರಕಸಾಲಿ, ಪಾಲಕ, ಹಕ್ಕರಕಿ ಸೊಪ್ಪು, ಕೋತಂಬ್ರಿ, ಕರಬೇವು, ಮೂಲಂಗಿ, ಬಾಳಿಹಣ್ಣು, ದ್ರಾಕ್ಷಿ ಹಣ್ಣು, ಪೇರಲ ಹಣ್ಣು, ಗೆಣಸು, ನುಗ್ಗಿಕಾಯಿ, ತೆಂಗಿನಕಾಯಿ, ನೆಲ್ಲಿಕಾಯಿ, ವಠಾಣಿಕಾಳು ಒಂದೆಡೆಯಾದರೆ, ನೋಟಬುಕ್, ಪೆನ್ನು, ಪೆನ್ಸಿಲ್, ರಬ್ಬರ್, ಬಳೆ, ರಿಬ್ಬನ್, ಸೋಪು, ಹಲ್ಲು ಉಜ್ಜುವ ಪುಡಿ, ವಿವಿಧ ಸಾವಯವ ಪದಾರ್ಥಗಳು ಈ ಚಿಣ್ಣರ ಸಂತೆಯಲ್ಲಿ ಮೇಳೈಸಿದ್ದವು.
ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿವನ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ 1 ಕಿಲೋ ಆಲೂಗಡ್ಡೆ ಮತ್ತು ಹಸಿಕಡಲೆ ಗಿಡ ಖರೀದಿಸುವ ಮೂಲಕ ಚಿಣ್ಣರ ಸಂತೆ ಉದ್ಘಾಟಿಸಿದರು. ಶಾಲಾ ಆಡಳಿತ ಮಂಡಳಿಯ ಎಂ.ಸಿ. ಹುಲ್ಲೂರ, ಬಿ.ಸಿ. ಕೊಳ್ಳಿ, ವ್ಹಿ.ಬಿ. ಕೆಂಚನಗೌಡರ, ಡಾ. ಗುರುಮೂರ್ತಿ ಯರಗಂಬಳಿಮಠ, ಸೋಮಲಿಂಗಶಾಸ್ತ್ರಿ ಗುಡ್ಡದಮಠ, ಗ್ರಾ.ಪಂ. ಸದಸ್ಯೆ ನೀಲವ್ವ ಬಣವಿ, ಟಿ.ಎಂ.ದೇಸಾಯಿ, ಶಿವಾನಂದ ಹಿರೇಮಠ, ಮಕ್ಕಳ ಪಾಲಕರುಗಳಾದ ಶಿವಪ್ಪ ಹಂಚಿನಾಳ, ಈಶ್ವರ ಗುಡ್ಡದಮನಿ, ಮಹೇಶ ತಾವರಗೇರಿ, ಭುಜಂಗಪ್ಪ ಬಾವಿಕಟ್ಟಿ, ಈರಯ್ಯ ಹಿರೇಮಠ, ಸದಾನಂದ ಪಾಟೀಲ, ಅಲ್ಮಾಸ್ ತಾವರಗೇರಿ ಇತರರು ಸಂತೆಯಲ್ಲಿ ಪಾಲ್ಗೊಂಡು ಮಕ್ಕಳಿಂದ ವಿವಿಧ ವಸ್ತು ಖರೀದಿಸಿದರು.
ಶಿಕ್ಷಕರ ಮಾರ್ಗದರ್ಶನ : ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಕಿಲೋಗ್ರಾಂ ಮೂಲಕ ದವಸ-ಧಾನ್ಯ, ತರಕಾರಿ, ಗಡ್ಡೆ-ಗೆಣಸುಗಳನ್ನು ತೂಗಿ ಒಂದು ಕಿಲೋ(1000 ಗ್ರಾಂ), ಅರ್ಧ ಕಿಲೋ(500 ಗ್ರಾಂ.), ಪಾವ ಕಿಲೋ(250 ಗ್ರಾಂ) ಮೂಲಕ ಖರೀದಿಸುವ, ಜೊತೆಗೆ ಹಣಕಾಸು ವಹಿವಾಟು ಮಾಡುವ ಲೆಕ್ಕಾಚಾರವನ್ನು ತಿಳಿಸಲಾಯಿತು. 500, 200, 100, 50, 20, 10 ರೂಪಾಯಿ ನೋಟುಗಳನ್ನು ಪಡೆದುಕೊಂಡು ಗ್ರಾಹಕರು ಖರೀದಿಸಿದ ಸಾಮಾನುಗಳ ಒಟ್ಟು ಮೊತ್ತದ ಹಣವನ್ನು ಕಟಾವಣೆ ಮಾಡಿಕೊಂಡು ಮರಳಿ ಎಷ್ಟು ಹಣವನ್ನು ಕೊಡಬೇಕೆನ್ನುವ ಗಣಿತದ ವಿಚಾರಗಳ ಬಗ್ಗೆ ಶಾಲೆಯ ಎಲ್ಲ ಶಿಕ್ಷಕ-ಶಿಕ್ಷಕಿಯರು ಚಿಣ್ಣರೊಂದಿಗಿದ್ದು ಸೂಕ್ತ ಮಾರ್ಗದರ್ಶನ ಮಾಡಿದರು.
ಸಂದರ್ಶನ : ಧಾರವಾಡ ಗ್ರಾಮೀಣ ಬಿಇಓ ರಾಮಕೃಷ್ಣ ಸದಲಗಿ, ಇಸಿಓ ಎನ್.ಎಂ. ಛಬ್ಬಿ, ಗ್ರಾ.ಪಂ. ಅಧ್ಯಕ್ಷೆ ನೀಲವ್ವ ತಿದಿ ಚಿಣ್ಣರ ಸಂತೆಗೆ ಸಂದರ್ಶನ ನೀಡಿ ವಿದ್ಯಾರ್ಥಿಗಳ ವ್ಯಾಪಾರ ವಹಿವಾಟು ವೀಕ್ಷಿಸಿ ಮೆಚ್ಚಿಗೆ ಸೂಚಿಸಿದರು.
ಫೋಟೋ ವಿವರ : ಧಾರವಾಡ ತಾಲೂಕಿನ ಅಮ್ಮಿನಬಾವಿಯ ಸುಶಿಲಾತಾಯಿ ಹಿರೇಮಠ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಚಿಣ್ಣರ ಸಂತೆ’ಯನ್ನು ಅಭಿವನ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಡಾ. ಗುರುಮೂರ್ತಿ ಯರಗಂಬಳಿಮಠ, ಎಂ.ಸಿ. ಹುಲ್ಲೂರ, ಬಿ.ಸಿ. ಕೊಳ್ಳಿ, ವ್ಹಿ.ಬಿ. ಕೆಂಚನಗೌಡರ, ಸೋಮಲಿಂಗಶಾಸ್ತ್ರಿ ಗುಡ್ಡದಮಠ, ಶಿವಪ್ಪ ಹಂಚಿನಾಳ, ಟಿ.ಎಂ.ದೇಸಾಯಿ, ಈಶ್ವರ ಗುಡ್ಡದಮನಿ, ಸದಾನಂದ ಪಾಟೀಲ ಇತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ