Kannada NewsLatest

ಕೆಎಂಎಫ್ ನಿರ್ದೇಶಕರಾಗಿ ರಮೇಶ ಜಾರಕಿಹೊಳಿ ಪುತ್ರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಪುತ್ರ ಅಮರನಾಥ ಜಾರಕಿಹೊಳಿ ಅವರನ್ನು ಕರ್ನಾಟಕ ಹಾಲು ಮಹಾಮಂಡಳದ ನಿರ್ದೇಶಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ಹೇಳಿದರು.
ಇಲ್ಲಿಯ ಮಹಾಂತೇಶ ನಗರದಲ್ಲಿರುವ ಹಾಲು ಒಕ್ಕೂಟದ ಸಭಾ ಗೃಹದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಗಿದೆ ಎಂದು ವಿವೇಕರಾವ್ ಪಾಟೀಲ ಹೇಳಿದರು.

ಪ್ರತಿ ಲೀ. ಹಾಲಿಗೆ ೭೫ ಪೈಸೆ ಹೆಚ್ಚಳ :

ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡುವ ರೈತರಿಗೆ ಪ್ರತಿ ಲೀಟರ್ ಎಮ್ಮೆ ಹಾಲಿಗೆ ೩೩.೭೫ ರೂ. ಹಾಗೂ ಆಕಳು ಹಾಲಿಗೆ ಪ್ರತಿ ಲೀಟರ್‌ಗೆ ೨೦.೫೦ ರೂ.ಗಳನ್ನು ಜೂನ್ ೧೧ ರಿಂದ ಅನ್ವಯವಾಗುವಂತೆ ದರದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ಮೊದಲು ಎಮ್ಮೆ ಹಾಲಿಗೆ ೩೩ ರೂ. ಹಾಗೂ ಆಕಳು ಹಾಲಿಗೆ ೧೯.೭೫ ರೂ. ನೀಡಲಾಗುತ್ತಿತ್ತು. ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ಬರಗಾಲ ಆವರಿಸಿದ್ದು, ಇದರಿಂದ ಹಾಲು ಉತ್ಪಾದಕರಿಗೆ ಹೆಚ್ಚುತ್ತಿರುವ ಉತ್ಪಾದನೆ ವೆಚ್ಚವನ್ನು ಸರಿದೂಗಿಸಲು ಹಾಗೂ ಹೈನುಗಾರಿಕೆಯನ್ನು ಉತ್ತೇಜಿಸಲು ಜೂನ್ ೧೧ ರಿಂದ ಜಾರಿಗೆ ಬರುವಂತೆ ಎಮ್ಮೆ ಹಾಗೂ ಆಕಳ ಪ್ರತಿ ಲೀಟರ್ ಹಾಲಿಗೆ ೭೫ ಪೈಸೆ ಹೆಚ್ಚಿಸಲಾಗಿದೆ.

ಸರ್ಕಾರದ ಪ್ರೋತ್ಸಾಹಧನ ಪ್ರತಿ ಲೀಟರ್‌ಗೆ ೬ ರೂ. ಇದ್ದು ಹೊಸ ದರದ ಅನ್ವಯವಾಗುವಂತೆ ಸರ್ಕಾರದ ಪ್ರೋತ್ಸಾಹಧನ ಸೇರಿ ರೈತರಿಗೆ ಪ್ರತಿ ಲೀಟರ್ ಎಮ್ಮೆ ಹಾಲಿಗೆ ೩೯.೭೫ ರೂ. ಹಾಗೂ ಆಕಳ ಹಾಲಿಗೆ ೨೬.೫೦ ರೂ.ಗಳನ್ನು ನೀಡಲು ಜಿಲ್ಲಾ ಹಾಲು ಒಕ್ಕೂಟ ತೀರ್ಮಾನಿಸಿದೆ. ಸದಸ್ಯ ರೈತರಿಗೆ ಒಕ್ಕೂಟದಿಂದ ಅವರ ಖಾತೆಗಳಿಗೆ ಸರ್ಕಾರದ ಪ್ರೋತ್ಸಾಹ ಧನ ಜಮಾ ಆಗಲಿದೆ ಎಂದು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ವಿವೇಕರಾವ್ ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಅಮರನಾಥ ಜಾರಕಿಹೊಳಿ, ಮಲ್ಲಪ್ಪ ಪಾಟೀಲ, ಎಸ್.ಎಸ್. ಮುಗಳಿ, ಬಿ.ಬಿ. ಕಟ್ಟಿ, ಉದಯಸಿಂಗ್ ಶಿಂಧೆ, ಕಲ್ಲಪ್ಪ ಗಿರೆನ್ನವರ, ರಾಯಪ್ಪ ಡೂಗ, ಬಸವರಾಜ ಪರನ್ನವರ, ವಿರುಪಾಕ್ಷಿ ಈಟಿ, ಪ್ರಕಾಶ ಅಂಬೋಜಿ, ಸವಿತಾ ಖಾನಪ್ಪನವರ, ಅಪ್ಪಾಸಾಬ ಅವತಾಡೆ, ಬಾಬುರಾವ್ ವಾಘಮೂಡೆ, ವ್ಯವಸ್ಥಾಪಕ ನಿರ್ದೇಶಕ ಒಭೇದುಲ್ಲಾಖಾನ್ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button