Kannada NewsKarnataka NewsLatest

ದಿ.ಸುರೇಶ ಅಂಗಡಿ ನಿವಾಸಕ್ಕೆ ಅಮಿತ್ ಶಾ ಭೇಟಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿನ ವಿಶ್ವೇಶ್ವರ ನಗರದ ಸಂಪಿಗೆ ರಸ್ತೆಯಲ್ಲಿರುವ
ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ.ಸುರೇಶ ಅಂಗಡಿಯವರ ನಿವಾಸ “ಸ್ಫೂರ್ತಿ” ಗೆ ಇಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಭೇಟಿ ನೀಡಿದರು.

ದಿ.ಸುರೇಶ ಅಂಗಡಿಯವರ ಪುಷ್ಪಾಲಂಕೃತ ಭಾವಚಿತ್ರಕ್ಕೆ ನಮನಗಳನ್ನು ಅರ್ಪಿಸಿದ ಅವರು, ಸುರೇಶ ಅಂಗಡಿಯವರು ಉತ್ತಮ ವ್ಯಕ್ತಿತ್ವ ಹೊಂದಿದ್ದರು. ಅವರು ಕೋವಿಡ್ ನಿಂದ ಬಳಲುತ್ತಿರುವಾಗ ತಾವೂ ಸಹ ಅದೇ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದನ್ನು ಸ್ಮರಿಸಿದ ಅವರು, ಅವರ ನಿಧನ ದೊಡ್ಡ ನಷ್ಟ ಉಂಟುಮಾಡಿದೆ ಎಂದು ಸಂತಾಪ ವ್ಯಕ್ತಪಡಿಸಿದರು.

ದಿ.ಸುರೇಶ ಅಂಗಡಿಯವರ ಧರ್ಮಪತ್ನಿ ಮಂಗಲಾ ಅಂಗಡಿ, ಪುತ್ರಿಯರಾದ ಸ್ಫೂರ್ತಿ, ಶ್ರದ್ಧಾ, ಅಳಿಯಂದಿರಾದ ಡಾ.ರಾಹುಲ್ ಪಾಟೀಲ, ಸಂಕಲ್ಪ ಶೆಟ್ಟರ್, ಕಿರಿಯ ಸಹೋದರ ಮೋಹನ ಚ.ಅಂಗಡಿಯವರಿಗೆ ಸಾಂತ್ವನ ಹೇಳಿ, ದುಃಖ ಸಹಿಸಿಕೊಳ್ಳುವ ಶಕ್ತಿ ಬರಲೆಂದು ತೀವ್ರ ಶೋಕ ವ್ಯಕ್ತಪಡಿಸಿದರು. ಅನಾರೋಗ್ಯದ ಹಿನ್ನೆಲೆಯಲ್ಲಿ ದಿ‌.ಸುರೇಶ ಅಂಗಡಿಯವರ ತಾಯಿ ಸೋಮವ್ವ ಚನ್ನಬಸಪ್ಪ ಅಂಗಡಿಯವರು ನಾಗೇರಹಾಳದ (ಕೊಂಡಸಕೊಪ್ಪ) ನಿವಾಸದಲ್ಲಿದ್ದರು‌.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಭಾರತೀಯ ಜನತಾ ಪಕ್ಷದ ರಾಜ್ಯ ಉಸ್ತುವಾರಿ ಅರುಣಸಿಂಗ್,ರಾಜ್ಯ ಅಧ್ಯಕ್ಷ ನಳೀನಕುಮಾರ್ ಕಟೀಲ, ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಷಿ, ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ ಶೆಟ್ಟರ್ , ಶಾಸಕ ಅನಿಲ ಬೆನಕೆ, ಉಪಸ್ಥಿತರಿದ್ದರು.

 ಬಿಗಿಭದ್ರತೆ ಕುಟುಂಬ ವರ್ಗದ ಸದಸ್ಯರಿಗೆ ಮಾತ್ರ ಅವಕಾಶ 

ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ಭೇಟಿ ಹಿನ್ನೆಲೆಯಲ್ಲಿ ದಿ.ಸುರೇಶ ಅಂಗಡಿ ಅವರ ನಿವಾಸಕ್ಕೆ ತಲುಪುವ ಎಲ್ಲಾ ಮಾರ್ಗಗಳಲ್ಲಿ ತೀವ್ರ ಬಿಗಿ,ಭದ್ರತೆ ಏರ್ಪಡಿಸಲಾಗಿತ್ತು. ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆಹಾರ ಸುರಕ್ಷತಾ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಉಪಹಾರ ಸಿದ್ಧಪಡಿಸಲಾಗಿತ್ತು.

ದಿ.ಸುರೇಶ ಅಂಗಡಿಯವರ ಆಪ್ತ ಸಿಬ್ಬಂದಿ ವರ್ಗದ ರಾಜು ಜೋಷಿ, ಶ್ರೀಕಾಂತ ಕಡಕೋಳ, ಸಂತೋಷ ತುಬಚಿ, ಶಿವಲಿಂಗಯ್ಯ ಅಲ್ಲಯ್ಯನವರಮಠಮತ್ತಿತರ ಕೆಲವೇ ಜನರಿಗೆ ಭೇಟಿ ಸಂದರ್ಭದಲ್ಲಿ ಅವಕಾಶ ಕಲ್ಪಿಸಲಾಗಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button