ಸ್ವಾತಂತ್ರ್ಯದ ಅಮೃತ ಮಹೋತ್ಸವ: ಕೆ.ಎಸ್.ಆರ್.ಪಿ. ಅಧಿಕಾರಿ, ಸಿಬ್ಬಂದಿಗೆ ಪದಕ ಪ್ರದಾನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ರಾಜ್ಯ ಮೀಸಲು ಪೊಲೀಸ್, 2ನೇ ಪಡೆ, ಕೆಎಸ್‌ಆರ್‌ಪಿ, ಬೆಳಗಾವಿ ಘಟಕದಲ್ಲಿ 75ನೇ ಸ್ವಾತಂತ್ರಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಪದಕಗಳನ್ನು ಪಡೆಯ ಕವಾಯತಿನಲ್ಲಿ ಕಮಾಂಡಂಟ್ ಹಂಜಾ ಹುಸೇನ್ ರವರು 579 ಅಧಿಕಾರಿ, ಸಿಬ್ಬಂದಿಗೆ ವಿತರಿಸಿದರು.
75ನೇ ಸ್ವಾತಂತ್ರಂತ್ರ್ಯದ ವಾರ್ಷಿಕೋತ್ಸವ ಸಂದರ್ಭದಲ್ಲಿ, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಭಾರತದ ಎಲ್ಲ ಸಶಸ್ತ್ರ ಬಲಗಳ ಪೊಲೀಸರಿಗೆ ಐತಿಹಾಸಿಕ ಅಮೃತ ಮಹೋತ್ಸವದ ಸವಿನೆನಪಿಗಾಗಿ, ಭಾರತ ಸರಕಾರ ದೇಶದ ಇತಿಹಾಸ, ಸಂಸ್ಕೃತಿ, ಸಾಧನೆಗಳನ್ನು ಸಾರುವ ದಿಟ್ಟಹೆಜ್ಜೆಯಾಗಿ ‘Nation first, always first’ ಎಂಬ ಘೋಷ ವಾಕ್ಯದಡಿ ಆರಂಭವಾದ ಸಂಭ್ರಮದ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ 3 ಜನ ಅಧಿಕಾರಿ/ಸಿಬ್ಬಂದಿಗೆ ‘ಉತ್ತಮ ಪೊಲೀಸ್ ಅಧಿಕಾರಿ’ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.
ನಂತರ ಪಡೆಯ ಅಧಿಕಾರಿ, ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡಿದ ಕಮಾಂಡಂಟ್ ಹಂಜಾ ಅವರು, ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆ ಬಂದೋಬಸ್ತ್ ಹಾಗೂ ರಾಜ್ಯದ ಕಾನೂನು ಸುವ್ಯವಸ್ಥೆ ಕರ್ತವ್ಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಂತೆ ಸೂಚಿಸಿದರು.
ಸಂಜೆ ಹಮ್ಮಿಕೊಳ್ಳಲಾಗಿದ್ದ ಸಂಗೀತ ಸಭೆಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅಧಿಕಾರಿ, ಸಿಬ್ಬಂದಿಯ ಮಕ್ಕಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸಂಜೀವ ಪಾಟೀಲ್, ಕಂಗ್ರಾಳಿಯ ಕೆಎಸ್‌ಆರ್‌ಪಿ ತರಬೇತಿ ಶಾಲೆಯ ಪ್ರಾಂಶುಪಾಲ ರಮೇಶ ಬೋರಗಾವಿ ಹಾಗೂ ಪಡೆಯ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ