ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯ ಸರಕಾರಿ ನೌಕರರ ಸಂಘದ ಮಹತ್ವದ ಕಾರ್ಯಕಾರಿ ಸಮಿತಿ ಸಭೆ ಇನ್ನು ಕೆಲವೇ ಹೊತ್ತಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ. ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವ ಸಂಬಂಧ ಚರ್ಚಿಸಲು ಈ ಸಭೆ ಕರೆಯಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 7 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ರಾಜ್ಯ ಸರಕಾರಿ ನೌಕರರ ಸಂಘ ರಾಜ್ಯದ 2023 – 24ನೇ ಸಾಲಿನ ಬಜೆಟ್ ನಲ್ಲಿ 2 ಪ್ರಮುಖ ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು. ಮೊದಲನೆಯದು 7ನೇ ವೇತನ ಆಯೋಗದ ವರದಿ ಜಾರಿ ಸಂಬಂಧ ಸರಕಾರ ಸ್ಪಷ್ಟವಾಗಿ ಬಜೆಟ್ ನಲ್ಲಿ ಕ್ರಮ ತೆಗೆದುಕೊಳ್ಳುತ್ತದೆ ಎನ್ನುವುದು, ಮತ್ತೊಂದು ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನೇ ಮರುಸ್ಥಾಪಿಸಲಿದೆ ಎನ್ನುವುದು. ಆದರೆ ಈ ಎರಡೂ ನಿರೀಕ್ಷೆಗಳು ಹುಸಿಯಾಗಿವೆ.
6ನೇ ವೇತನ ಆಯೋಗದ ವರದಿ ಕಳೆದ 2022ರ ಆಗಸ್ಟ್ ತಿಂಗಳಿಗೇ ಮಕ್ತಾಯವಾಗಿದೆ. ಹಾಗಾಗಿ 7ನೇ ವೇತನ ಆಯೋಗದ ವರದಿ ಈಗಾಗಲೆ ಜಾರಿಯಾಗಬೇಕಿತ್ತು. ಆದಾಗ್ಯೂ ಮಾರ್ಚ್ ಅಂತ್ಯದೊಳಗೆ ಆಯೋಗದ ವರದಿ ಬರುತ್ತದೆ. ಒಂದೊಮ್ಮೆ ವಿಳಂಬವಾದರೆ ಮಧ್ಯಂತರ ವರದಿ ಪಡೆದು ಏಪ್ರಿಲ್ 1ರಿಂದ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ನೌಕರರ ಸಂಘ ಭಾವಿಸಿತ್ತು.
ಆದರೆ ಬಜೆಟ್ ನಲ್ಲಿ ಈ ಬಗ್ಗೆ ಯಾವುದೇ ಕ್ರಮ ಘೋಷಣೆಯಾಗಿಲ್ಲ. ಬಜೆಟ್ ನಂತರ ಕರೆದ ಪತ್ರಿಕಾಗೋಷ್ಠಿಯಲ್ಲಿ, 7ನೇ ವೇತನ ಆಯೋಗದ ವರದಿ ಜಾರಿಗೆ 6 ಸಾವಿರ ಕೋಟಿ ರೂ ತೆಗೆದಿಡಲಾಗಿದೆ. ಈ ವರ್ಷವೇ ವರದಿ ಜಾರಿಗೊಳಿಸುವ ಉದ್ದೇಶವಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರಾದರೂ, ಅದರಲ್ಲಿ ಸ್ಪಷ್ಟತೆ ಇಲ್ಲ ಎನ್ನುವುದು ನೌಕರರ ಸಂಘದ ಆಕ್ರೋಶ.
ಈ ಹಿನ್ನೆಲೆಯಲ್ಲಿ ತುರ್ತು ರಾಜ್ಯ ಕಾರ್ಯಕಾರಣಿ, ಚುನಾಯಿತ ಪದಾಧಿಕಾರಿಗಳ ಮತ್ತು ವೃಂದ ಸಂಘಗಳ ಅಧ್ಯಕ್ಷರ ಸಭೆಯನ್ನು ಮಂಗಳವಾರ ಸಂಜೆ 5 ಗಂಟೆಗೆ ಕಬ್ಬನ್ ಪಾರ್ಕ್ ಆವರಣದಲ್ಲಿರುವ ಸರಕಾರಿ ನೌಕರರ ಸಂಘದ ಕಚೇರಿಯಲ್ಲಿ ಕರೆಯಲಾಗಿದೆ.
ರಾಜ್ಯದ 2023-24ರ ಆಯವ್ಯಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳಾದ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆಯ ಬಗ್ಗೆ ಯಾವುದೇ ಘೋಷಣೆಗಳನ್ನು ಸರ್ಕಾರವು ಪ್ರಸ್ತಾಪಿಸದೇ ಇರುವುದರಿಂದ ರಾಜ್ಯ ಸರ್ಕಾರಿ ನೌಕರರಲ್ಲಿ ನಿರಾಸೆ ಮೂಡಿದೆ. ಹಾಗಾಗಿ ಮುಂದಿನ ಹೋರಾಟದ ಕುರಿತಂತೆ ಚರ್ಚಿಸಿ, ಸರಕಾರಕ್ಕೆ ಸಂದೇಶ ರವಾನಿಸಿ, ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಸಂಘದ ಮೂಲಗಳು ತಿಳಿಸಿವೆ.
ಒಟ್ಟಾರೆ ಇಂದು ಸಂಜೆ ನಡೆಯಲಿರುವ ಸಭೆ ಕುತೂಹಲ ಮೂಡಿಸಿದ್ದು, ನೌಕರರು ಮತ್ತೆ ದೊಡ್ಡ ಮಟ್ಟದ ಹೋರಾಟದ ಹಾದಿ ಹಿಡಿಯುತ್ತಾರಾ ಎನ್ನುವ ಪ್ರಸ್ನೆ ಮೂಡಿದೆ.
7ನೇ ವೇತನ ಆಯೋಗದ ವರದಿ ಜಾರಿ: ನಾಳೆಯೇ ಸರಕಾರದ ಬದ್ಧತೆ ಬಹಿರಂಗ
https://pragati.taskdun.com/7th-pay-commission/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ