Latest

 ಶಿಕ್ಷಣ ಸಚಿವ ಎಸ್ ಸುರೇಶಕುಮಾರ್ ಅವರಿಗೆ ಒಂದು ಬಹಿರಂಗ ಪತ್ರ

ಶಾಲೆಗಳನ್ನು ಮಳೆಗಾಲದ ನಂತರವೇ ಪ್ರಾರಂಭಿಸಿ

ಮಾನ್ಯರೇ,
ಜುಲೈ ೧ರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ತಮ್ಮ ಮನೋಗತ ವ್ಯಕ್ತಪಡಿಸಿದ್ದೀರಿ. ಅದಕ್ಕೆ ನನ್ನ ಪ್ರತಿಕ್ರಿಯೆ. ನಾನು ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಕಾಲೇಜಿನ ಓರ್ವ ನಿವೃತ್ತ ಪ್ರಾಚಾರ್ಯ ಹಾಗೂ ಪ್ರೌಢಶಾಲಾ ಶಿಕ್ಷಕನಾಗಿ, ಪದವಿಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಒಟ್ಟು ೩೬ ವರ್ಷಗಳ ಸೇವೆ ಸಲ್ಲಸಿದ್ದೇನೆ. ನಾನು ಪ್ರಾಥಮಿಕ ಶಾಲೆಯ ಹಾಗೂ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳ ಮನಸ್ಸುಗಳನ್ನು ಚೆನ್ನಾಗಿ ಅರಿತಿದ್ದೇನೆ.
ದಿನೇ ದಿನೇ ಕೊರೊನಾ ಸೋಂಕಿತರ ಪ್ರಮಾಣ ಹಾಗೂ ಮೃತ್ಯು ಪ್ರಮಾಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಶಾಲೆಗಳನ್ನು ಪ್ರಾರಂಭಿಸಬೇಡಿ. ಮಳೆಗಾಲ ಪ್ರಾರಂಭವಾಗಿದೆ. ಮಳೆಗಾಲದಲ್ಲಿ ಸೋಂಕು ಅಧಿಕಗೊಳ್ಳುವ ಶಂಕೆ ತಜ್ಞರಿಂದ ವ್ಯಕ್ತವಾಗಿದೆ. ಮಕ್ಕಳು ಶಾಲೆಗೆ ಬಂದಾಗ ಅವರನ್ನು ಸಾಮಾಜಿಕ ಸಂಪರ್ಕ ಕಾಯ್ದುಕೊಳ್ಳುವಂತೆ ನಿಯಂತ್ರಿಸುವುದು ತುಂಬ ಕಷ್ಟದ ಕೆಲಸ. ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಪಟ ಸಂಖ್ಯೆ ಕಡಿಮೆ ಇರಬಹುದಾದರೂ ಈ ಭಾಗದ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ೬೦ ರಿಂದ ೮೦ ವಿದ್ಯಾರ್ಥಿಗಳನ್ನು ಪ್ರತಿ ವಿಭಾಗದಲ್ಲಿ ಕಾಣಬಹುದು. ಸಾಮಾಜಿಕ ಅಂತರ ಕಾಯುವುದು ಸಾಧ್ಯವೇ ಇಲ್ಲ. ಸಾಮೂಹಿಕ ಪ್ರಾರ್ಥನೆ, ಆಟದ ಅವಧಿಗಳಲ್ಲಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಿದ ಸಂದರ್ಭಗಳಲ್ಲಿ ’ಎರಡು ಮೀಟರ್’ ಅಂತರ ಹೇಗೆ ಕಾಯ್ದುಕೊಳ್ಳುವರು?
ಮಳೆಗಾಲದಲ್ಲಿ ಶೀತದಿಂದಾಗಿ ನೆಗಡಿ, ಕೆಮ್ಮು, ಜ್ವರಗಳಿಂದ ಬಳಲುವವರೇ ಹೆಚ್ಚು. ಕ್ಲಾಸಿನಲ್ಲಿ ಯಾರಿಗೆ ಒಬ್ಬರಿಗೆ ಸೋಂಕು ತಗುಲಿದರೂ ಅದು ತೀವ್ರಗತಿಯಲ್ಲಿ ಎಲ್ಲರಲ್ಲೂ ಹರಡಬಹುದು. ಪೋಷಕರೂ ಮನೆಯಲ್ಲಿ ಚಿಕ್ಕಮಕ್ಕಳ ಕಿರಿಕಿರಿ, ಕೀಟಲೆಗಳಿಗೆ ಬೇಸತ್ತು ಶಾಲೆ ಬೇಗ ಪ್ರಾರಂಭವಾಗಲಿ ಎನ್ನಬಹುದಾದರೂ ಮಕ್ಕಳ ಪ್ರಾಣ ಬಹು ಮೌಲಿಕವಾದದ್ದು.
ಕಾರಣ ನಮ್ಮಲ್ಲಿ ಮಳೆಗಾಲ ಆಗಷ್ಟ್ ೧೫ ರವರೆಗೆ ಅಧಿಕ ಬಿರುಸಿನಿಂದ ಕೂಡಿರುತ್ತದೆ. ನಂತರ ಸಪ್ಟೆಂಬರ್, ಅಕ್ಟೋಬರ ತಿಂಗಳ ಕೊನೆಯಲ್ಲಿ ಕೊನೆಗೊಳ್ಳುತ್ತದೆ. ಹೀಗಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಮಳೆಗಾಲದ ಅನುಭವ ಪಡೆದು, ಕೊರೋನಾದ ತೀವ್ರತೆ ಗಮನಿಸಿ ಸಪ್ಟೆಂಬರ್ ೧ರಿಂದ ಶಾಲೆ ಪ್ರಾರಂಭಿಸಬಹುದು.
ಕನಾಟಕದ ಎಷ್ಟೋ ಶಾಲೆಗಳಿಗೆ ಮೂಲ ಸೌಲಭ್ಯಗಳಿಲ್ಲ, ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಶೌಚಾಲಯಗಳಿಲ್ಲ, ಕಟ್ಟಡಗಳಿಲ್ಲ, ಬಯಲಿನಲ್ಲಿ, ಗಿಡಗಳ ಕೆಳಗೆ ದೇವಾಲಯಗಳ ಆವರಣದಲ್ಲಿ ನಡೆಯವ ಶಾಲೆಗಳೂ ಇವೆ. ಶಿಕ್ಷಕರ ಕೊರತೆಯೂ ಇದೆ. ಒಂದೊಂದು ಶಾಲೆಯಲ್ಲಿ ಒಬ್ಬರೇ ಶಿಕ್ಷಕರು ೪ ತರಗತಿಗಳಿಗೆ ಪಾಠ ಮಾಡಬೇಕು. ಅವರನ್ನು ಹಿಡಿದಿಡುವುದೇ ಕಷ್ಟ ಕಷ್ಟ. ಅಂತಹದಲ್ಲಿ ಶಿಕ್ಷಕರಿಗೆ ಗಣತಿ, ಚುನಾವಣೆ, ಮಧ್ಯಾಹ್ನದ ಬಿಸಿಯೂಟದ ತಯಾರಿಯಲ್ಲಿ ತೊಡಗಿಸಿಕೊಂಡರೆ ಏನಾಗಬಹುದು?
ಕೇವಲ ರಾಜಧಾನಿಯಲ್ಲಿರುವ ಶಾಲೆಗಳು, ಆಂಗ್ಲಮಾಧ್ಯಮದ ಶಾಲೆಗಳನ್ನು ಗಮನಿಸಿ ಆತುರದ ಕ್ರಮ ಬೇಡ. ಗ್ರಾಮಾಂತರ ಪ್ರದೇಶದ ಶಾಲೆಗಳ ಸ್ಥಿತಿಗತಿಗಳನ್ನು ಗಮನಿಸಿ ಶಾಲೆಗಳನ್ನು ಪ್ರಾರಂಭಿಸಿ ಇಲ್ಲವಾದರೆ ’ಕೊರೊನಾ’ ಮಾಹಾಮಾರಿಗೆ ಮಕ್ಕಳನ್ನು ಬಲಿಕೊಟ್ಟ ಅಪಖ್ಯಾತಿ ನಿಮಗೆ ಬರಬಹುದು. ಯಾವುದಕ್ಕೂ ಆತುರದ ನಿರ್ಣಯ ಬೇಡ.

 -ಪ್ರಾ. ಬಿ.ಎಸ್.ಗವಿಮಠ, ಬೆಳಗಾವಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button