ಆನಂದ ಮಾಮನಿಯವರ ನಿಧನದಿಂದ ಉತ್ತಮ ಜನಪ್ರತಿನಿಧಿಯನ್ನು ಕಳೆದುಕೊಂಡಂತಾಗಿದೆ: ಸಿಎಂ ಬೊಮ್ಮಾಯಿ ಕಂಬನಿ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆ ಉಪಾಧ್ಯಕ್ಷರಾಗಿದ್ದ ಆನಂದ ಮಾಮನಿ ಅವರ ನಿಧನದಿಂದ ಉತ್ತಮ ಜನಪ್ರತಿನಿಧಿಯನ್ನು ಹಾಗೂ ಕರ್ನಾಟಕ ರಾಜ್ಯ ಬೆಳೆಯುತ್ತಿರುವ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರ್. ಟಿ. ನಗರ ನಿವಾಸದಲ್ಲಿ ಮಾಧ್ಯಮದವರಿಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು. ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ ಅವರ ನಿಧನ ದುರ್ದೈವದ ಸಂಗತಿ. ಅವರ ಪಾರ್ಥಿವ ಶರೀರ ಅವರ ಸ್ವಕ್ಷೇತ್ರವಾದ ಸವದತ್ತಿಗೆ ಒಯ್ಯಲಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತಿಮಕ್ರಿಯೆಯನ್ನು ನೆರವೇರಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಹಿರಿಯ ನಾಯಕರೂ ಭಾಗವಹಿಸಲು ತೆರಳುತ್ತಿರುವುದಾಗಿ ತಿಳಿಸಿದರು.
ಅತ್ಯಂತ ಕ್ರೀಯಾಶೀಲ ವ್ಯಕ್ತಿ :
ಆನಂದ ಮಾಮನಿಯವರು ಅತ್ಯಂತ ಕ್ರೀಯಾಶೀಲ ವ್ಯಕ್ತಿಯಾಗಿದ್ದು, ಜನರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದರು. ವಿಶೇಷ ರೈತರು, ನೀರಾವರಿ ಯೋಜನೆಗಳ ಬಗ್ಗೆ ವಿಶೇಷ ಆಸ್ಥೆ ಹೊಂದಿದ್ದರು. ಅವರ ಕ್ಷೇತ್ರದಲ್ಲಿ ಮಲಪ್ರಭಾ ನೀರಾವರಿ ಯೋಜನೆಯಡಿ ಎಂಟು ಲಿಫ್ಟ್ ಗೇಟ್ಗಳನ್ನು ಪುನ: ನಿರ್ಮಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದರು. ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಸ್ಪಷ್ಟವಾದ ನಿಲುವನ್ನು ಹೊಂದಿದ್ದರು. ಮೊದಲ ಬಾರಿಗೆ ಶಾಸಕರಾಗಿದ್ದ ಅವಧಿಯಿಂದಲೇ ಕ್ಷೇತ್ರದ ಏಳಿಗೆ ಬಗೆಗಿನ ಅವರ ಚಿಂತನೆ ಎಲ್ಲರಿಗೂ ಮಾದರಿಯಾಗಿತ್ತು. ರಾಜಕಾರಣ ಕ್ಷೇತ್ರದಲ್ಲಿಉಜ್ವಲವಾದ ಭವಿಷ್ಯವನ್ನು ಹೊಂದಿದ್ದರು.ಅಗಾಧವಾದ ಆಡಳಿತದ ಅನುಭವವನ್ನೂ ಹೊಂದಿರುವುದು ನಮಗೆಲ್ಲಾ ದಿಗ್ಭ್ರಮೆಯ ವಿಷಯವಾಗಿದೆ. ವಿಧಾನಸಭೆಯ ಉಪಾಧ್ಯಕ್ಷರಾಗಿ ಉತ್ತಮವಾಗಿ ಕಲಾಪಗಳನ್ನು ನಿರ್ವಹಿಸುತ್ತಿದ್ದರು ಎಂದರು.
ಆನಂದ ಮಾಮನಿಯವರು ಸಣ್ಣವಯಸ್ಸಿನಲ್ಲಿಯೇ ಅನಾರೋಗ್ಯದಿಂದ ನಮ್ಮನ್ನು ಅಗಲಿರುವುದು ಆಘಾತ ತರುವಂತಹ ಸಂಗತಿ. ಲಿವರ್ ಸಮಸ್ಯೆ ಕ್ಯಾನ್ಸರ್ ಆಗಿದ್ದು, ಹೆಚ್ಚಿನ ಚಿಕಿತ್ಸೆಗೆ ಚೆನ್ನೈಗೆ ತೆರಳಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಆನಂದ ಮಾಮನಿಯವರ ತಂದೆಯವರೂ ಸಹ ವಿಧಾನಸಭೆಯ ಉಪಾಧ್ಯಕ್ಷರಾಗಿದ್ದಾಗಲೇ ಹೃದಾಯಾಘಾತದಿಂದ ಅಸುನೀಗಿದ್ದರು. ಅವರ ಅಣ್ಣನವರೂ ಸಣ್ಣ ವಯಸ್ಸಿನಲ್ಲಿಯೇ ಸಾವನ್ನಪ್ಪಿದ್ದರು. ಇವರ ಸಂಬಂಧಿಕರಾದ ಮಾಜಿ ಶಾಸಕ ರಾಜಣ್ಣ ಮಾಮನಿಯವರೂ ಸಹ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಅವರ ಕುಟುಂಬ ಒಂದರ ನಂತರ ಒಂದು ಆಘಾತವನ್ನು ಎದುರಿಸುತ್ತಿದೆ. ಅವರ ಅಗಲಿಕೆಯಿಂದ ರಾಜ್ಯಕ್ಕೆ ಹಾಗೂ ವೈಯಕ್ತಿಕವಾಗಿ ನನಗೂ ಹಾನಿಯಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ದು:ಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಸಂತಾಪ:
ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದವರಲ್ಲಿ ಮುಂಚೂಣಿಯಲ್ಲಿದ್ದ ಮುಖಂಡ ಹಾಗೂ ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ಅವರ ಅಕಾಲಿಕ ನಿಧನ ತೀವ್ರ ಆಘಾತವನ್ನುಂಟು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ಸಂತಾಪ ಸೂಚಿಸಿದ್ದಾರೆ.
ಅವರು ಸತತ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಅಭಿಮಾನಿಗಳಿಂದ ಅಜಾತ ಶತ್ರುವೆಂದು ಕರೆಸಿಕೊಂಡಿದ್ದ ಅವರು ಮೃದು ಸ್ವಭಾವದಿಂದಾಗಿಯೇ ಜನಾನುರಾಗಿ ಆಗಿದ್ದರು ಎಂದು ತಿಳಿಸಿದ್ದಾರೆ.
ಶಾಸಕರಾಗಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, ಯಲ್ಲಮ್ಮ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ, ಪ್ರಸಕ್ತ ವಿಧಾನಸಭೆ ಉಪಸಭಾಧ್ಯಕ್ಷರ ಹುದ್ದೆ ನಿಭಾಯಿಸುತ್ತಿದ್ದ ಮಾಮನಿ; ಸೋಲಿಲ್ಲದ ಸರದಾರ ಎನಿಸಿದ್ದರು. ‘ಸವದತ್ತಿ ಸಾಹುಕಾರ’, ‘ಜನಪರ ನಾಯಕ’ ಎಂಬ ಹಲವು ಅಂಕಿತಗಳೂ ಅವರದಾಗಿದ್ದವು. ಕ್ಷೇತ್ರದಲ್ಲಿ ನಿತ್ಯ ಪರ್ಯಟನೆ ಮಾಡುವ ಕ್ರಿಯಾಶೀಲತೆ, ಜನಪರ ನಿಲುವು, ಮುತ್ಸದ್ಧಿ ಗುಣಗಳಿಂದ ಅವರು ಆಪ್ತರಾಗಿದ್ದರು ಎಂದು ಸ್ಮರಿಸಿದ್ದಾರೆ.
ಇವರ ತಂದೆ, ದೊಡ್ಡಪ್ಪನ ಮಗನೂ ಶಾಸಕರಾಗಿದ್ದರು. ರಾಜಕೀಯ ಹಿರಿಮೆಯ ಕುಟುಂಬ ಇವರದಾಗಿತ್ತು. ಸವದತ್ತಿಯಲ್ಲಿ ಅಭಿವೃದ್ಧಿ ಪರ್ವ ಆರಂಭಿಸಿದ ಮಾಮನಿ ಬಿಜೆಪಿ ಭದ್ರವಾಗಿ ನೆಲೆಯೂರುವಂತೆ ಮಾಡಿದ್ದರು. ಇವರು ‘ಯರಗಟ್ಟಿ ತಾಲ್ಲೂಕಿನ ರೂವಾರಿ’ ಎಂದೇ ಜನರಿಂದ ಮೆಚ್ಚುಗೆ ಪಡೆದಿದ್ದರು ಎಂದು ನೆನಪಿಸಿದ್ದಾರೆ.
ಅವರ ಕುಟುಂಬ, ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಭಗವಂತನು ಈ ದುಃಖವನ್ನು ಸಹಿಸುವ ಶಕ್ತಿಯನ್ನು ಕೊಡಲಿ ಎಂದು ನಳಿನ್ಕುಮಾರ್ ಕಟೀಲ್ ಅವರು ಪ್ರಾರ್ಥಿಸಿದ್ದಾರೆ.
ಕಿತ್ತೂರು ಉತ್ಸವಕ್ಕೆ ಶುಭ ಕೋರಿದ ದಿನವೇ ಇಹಲೋಕ ತ್ಯಜಿಸಿದ ಆನಂದ ಮಾಮನಿ
https://pragati.taskdun.com/politics/anand-mamaniwishes-for-kitturu-utsavaon-his-last-day/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ