
ಪ್ರಗತಿವಾಹಿನಿ ಸುದ್ದಿ, ಸವದತ್ತಿ : ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದ ಕರ್ನಾಟಕ ವಿಧಾನಸಭೆ ಉಪ ಸಭಾಧ್ಯಕ್ಷರಾದ ಆನಂದ ಮಾಮನಿ ಅವರ ಅಂತಿಮ ದರ್ಶನವನ್ನು ಪಡೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸರಕಾರದ ಪರವಾಗಿ ಅಂತಿಮ ನಮನ ಸಲ್ಲಿಸಿದರು.

ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿ ಮಾಮನಿಯವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು.
ಬೆಂಗಳೂರಿನಿಂದ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅಂತಿಮ ದರ್ಶನವನ್ನು ಪಡೆದುಕೊಂಡು, ಸರ್ಕಾರದ ಪರವಾಗಿ ಅಂತಿಮ ನಮನ ಸಲ್ಲಿಸಿದರು.
ಇದಕ್ಕೂ ಮುಂಚೆ ಮಾಮನಿಯವರ ತಾಯಿ ಗಂಗಮ್ಮ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನವನ್ನು ಹೇಳಿದರು.
ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ, ಲೋಕೋಪಯೋಗಿ ಇಲಾಖೆಯ ಸಚಿವರಾದ ಸಿ.ಸಿ.ಪಾಟೀಲ ಮತ್ತಿತರರು ಪಾರ್ಥೀವ ಶರೀರಕ್ಕೆ ಪುಷ್ಪಗುಚ್ಛ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು.

ಐಜಿಪಿ ಸತೀಶ್ ಕುಮಾರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಮತ್ತಿತರ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.
ಕೊನೆಯಲ್ಲಿ ಹುತಾತ್ಮ ಗೌರವ ಪಡೆಯ ವತಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡುಹಾರಿಸಿ ರಾಷ್ಟ್ರಗೀತೆ ನುಡಿಸುವ ಮೂಲಕ ಸರಕಾರಿ ಗೌರವ ವಂದನೆ ಸಲ್ಲಿಸಲಾಯಿತು. ಎರಡು ನಿಮಿಷಗಳ ಕಾಲ ಮೌನ ಆಚರಿಸಲಾಯಿತು.

ಸಿಎಂ ಸಂತಾಪ ನುಡಿಗಳು:
ಈ ಸಂದರ್ಭದಲ್ಲಿ ಸಂತಾಪ ನುಡಿಗಳನ್ನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅಭಿವೃದ್ಧಿ ದೃಷ್ಟಿಕೋನ ಮತ್ತು ರೈತಪರ ಕಾಳಜಿ ಹೊಂದಿದ್ದ ಯುವ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ದುಃಖ ವ್ಯಕ್ತಪಡಿಸಿದರು.
ಮಾಮನಿಯವರ ಅಗಲಿಕೆ ದಿಗ್ಭ್ರಮೆ ಮೂಡಿಸಿದೆ. ಅತ್ಯಂತ ಸಣ್ಣ ವಯಸ್ಸಿನಲ್ಲಿ ಅವರನ್ನು ಕಳೆದುಕೊಂಡಿದ್ದೇವೆ.
ಕ್ರಿಯಾಶೀಲ ವ್ಯಕ್ತಿಯಾಗಿದ್ಸ ಮಾಮನಿಯವರು ಸದಾ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಕುರಿತು ನಿರಂತರ ಚರ್ಚೆ ನಡೆಸುತ್ತಿದ್ದರು.
ಒಂದೂವರೆ ತಿಂಗಳ ಹಿಂದೆಯಷ್ಟೇ ಆರೋಗ್ಯಯುತವಾಗಿದ್ದರು. ಯುವ ಹಾಗೂ ಜನಪರ ನಾಯಕರಾಗಿದ್ದ ಅವರು ರೈತಪರ ಕಾಳಜಿಯ ವ್ಯಕ್ತಿಯಾಗಿದ್ದರು. ವಿಶೇಷವಾಗಿ ನೀರಾವರಿ ಸೌಲಭ್ಯ ವಿಸ್ತರಣೆಗೆ ಅತ್ಯಂತ ಕಳಕಳಿಯಿಂದ ಕೆಲಸ ಮಾಡಿದ್ದರು.
ಕುಟುಂಬದ ಒಡನಾಟ, ಅನೋನ್ಯತೆಯನ್ನು ಮೆಲುಕುಹಾಕಿದ ಮುಖ್ಯಮಂತ್ರಿಗಳು, ಮಾಮನಿಯವರ ತಂದೆ ನನಗೆ ಮಾರ್ಗದರ್ಶಕರಾಗಿದ್ದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅವರ ಕೆಲಸ ಸ್ಮರಣೀಯ. ಧೀಮಂತ ನಾಯಕ, ರೈತನ ನೈಜ ಪ್ರತಿನಿಧಿಯನ್ನು ಕಳೆದುಕೊಂಡು ನಾಡು ಬಡವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆನಂದ ಮಾಮನಿಯವರು ರೈತರ ಅನುಕೂಲಕ್ಕಾಗಿ ಈ ಭಾಗದಲ್ಲಿ ಒಂದು ಸಕ್ಕರೆ ಕಾರ್ಖಾನೆ ಸ್ಥಾಪನೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸದ ಕನಸುಗಳನ್ನು ಕಂಡಿದ್ದರು. ಅವರ ಕನಸುಗಳ ಸಾಕಾರಕ್ಕೆ ನಾವೆಲ್ಲರೂ ಪ್ರಯತ್ನಿಸೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

https://pragati.taskdun.com/politics/anand-mamaniwishes-for-kitturu-utsavaon-his-last-day/
https://pragati.taskdun.com/latest/anand-mamanideathcm-basavaraj-bommainalin-kumar-kateelcondolance/
https://pragati.taskdun.com/karnataka-news/ananda-mamanis-death-is-kittur-utsav-held/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ