
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಮಹಾತ್ಮ ಗಾಂಧಿಜಿಯವರ ಸ್ವಾತಂತ್ರ್ಯ ಚಳವಳಿ ಒಂದು ಡ್ರಾಮಾ ಎಂದು ಕರೆದಿದ್ದ ಬಿಜೆಪಿ ನಾಯಕ ಅನಂತ್ ಕುಮಾರ್ ಹೆಗಡೆ ವಿರುದ್ಧ ಕಾಂಗ್ರೆಸ್ ಕಿಡಿಕಾರಿದ್ದು, ಬ್ರಿಟೀಷರ ಚಮಚಗಳಿಂದ ಮಹಾತ್ಮನಿಗೆ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್ ಟ್ವೀಟ್ ರ್ ನಲ್ಲಿ ಕಿಡಿಕಾರಿದ್ದು, ಬಿಜೆಪಿಯನ್ನು ‘ನಾಥುರಾಮ್ ಗೋಡ್ಸೆ ಪಾರ್ಟಿ’ ಎಂದು ಮರುನಾಮಕರಣ ಮಾಡುವ ಸಮಯ ಇದು. ಮಹಾತ್ಮ ಗಾಂಧಿಗೆ ಬ್ರಿಟಿಷರ ಚಮಚಾ ಮತ್ತು ಗೂಢಚಾರರಾಗಿದ್ದ ಕೇಡರ್ ಗಳಿಂದ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೋರ್ವ ಕಾಂಗ್ರೆಸ್ ಮುಖಂಡ ಅಭಿಷೇಕ್ ಸಿಂಗ್ವಿ ಕೂಡ ಅನಂತ್ ಹೆಗಡೆ ಹೇಳಿಕೆಯನ್ನು ಖಂದಿಸಿದ್ದು, ಬಿಜೆಪಿಯ ಹಿರಿಯ ನಾಯಕರಾಗಿರುವ ಹೆಗಡೆ ನೀವು ಗಾಂಧೀಜಿಯನ್ನು ಟೀಕಿಸುತ್ತೀರಿ ಆದರೆ ನರೇಂದ್ರ ಮೋದಿಯವರನ್ನು ಕಾಯುತ್ತೀರಿ. ಅವರು ಶೇಷವಾಗಿ ಗಾಂಧೀಜಿಯ ಆಲೋಚನೆಗಳನ್ನು ಮರುಬಳಸಿಕೊಂಡು ಅಂತರರಾಷ್ಟ್ರೀಯ ವಿಶ್ವಾಸಾರ್ಹತೆಯನ್ನು ಪಡೆದುಕೊಳ್ಳುತ್ತಾರೆ ಎಂದು ಅವರು ಕುಟುಕಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಹೆಗಡೆ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಗೋಡ್ಸೆ ಹಾಗೂ ಸಾವರ್ಕರ್ ಪೂಜೆ ಮಾಡುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಸ್ವಾತಂತ್ರ್ಯ ಹೋರಾಟದ ಬಗ್ಗೆ ಇವರಿಗೇನು ಗೊತ್ತು? ಅನಂತ ಕುಮಾರ್ ಹೆಗಡೆ ಸ್ವಾತಂತ್ರ್ಯ ಹೋರಾಟಕ್ಕೂ ಪೂರ್ವದಲ್ಲಿ ಹುಟ್ತಿದ್ದರೆ? ಸ್ವಾತಂತ್ರ್ಯ ಹೋರಾಟದಲ್ಲಿ ಬಲಿಯಾದವರ ಹೆಸರನ್ನು ಹೇಳಲಿ ನೋಡೋಣ. ಗಾಂಧೀಜಿ ಎಷ್ಟು ವರ್ಷಗಳ ಕಾಲ ಜೈಲಿನಲ್ಲಿದ್ದರು ಎಂಬುದು ಹೆಗಡೆಗೆ ಗೊತ್ತಾ? ಎಂದು ಪ್ರೆಶ್ನಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಇಡೀ ಸ್ವಾತಂತ್ರ್ಯ ಚಳವಳಿಯನ್ನು ಬ್ರಿಟಿಷರ ಒಪ್ಪಿಗೆ ಮತ್ತು ಬೆಂಬಲದೊಂದಿಗೆ ನಡೆಸಲಾದ ಒಂದು ಒಪ್ಪಂದದ ಹೋರಾಟ. ಗಾಂಧಿ ನೇತೃತ್ವದ ಸ್ವಾತಂತ್ರ್ಯ ಚಳುವಳಿ ಒಂದು ನಾಟವಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರು ಎಂದು ಹೇಳಿಕೊಳ್ಳುತ್ತಿರುವವರು ಮತ್ತು ಪ್ರಗತಿಪರರು ಎಡಬಿಡಂಗಿಗಳು ಎಂದು ವಿವಾದ ಸೃಷ್ಟಿಸಿದ್ದರು.
ಅಲ್ಲದೇ ಸ್ವಾತಂತ್ರ್ಯ ಚಳುವಳಿ ನಿಜವಾದ ಹೋರಾಟವಲ್ಲ. ಕಾಂಗ್ರೆಸ್ ಅನ್ನು ಬೆಂಬಲಿಸುವ ಜನರು ಗಾಂಧೀಜಿಯ ಉಪವಾಸ ಸತ್ಯಾಗ್ರಹದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳುತ್ತಲೇ ಇರುತ್ತಾರೆ. ಇದು ನಿಜವಲ್ಲ. ಸತ್ಯಾಗ್ರಹದಿಂದಾಗಿ ಬ್ರಿಟಿಷರು ದೇಶವನ್ನು ತೊರೆಯಲಿಲ್ಲ, ಬ್ರಿಟಿಷರು ಹತಾಶೆಯಿಂದ ಸ್ವಾತಂತ್ರ್ಯವನ್ನು ನೀಡಿದರು. ನಾನು ಇತಿಹಾಸವನ್ನು ಓದಿದಾಗ ನನ್ನ ರಕ್ತ ಕುದಿಯುತ್ತದೆ. ಅಂತಹ ಜನರು ನಮ್ಮ ದೇಶದಲ್ಲಿ ಮಹಾತ್ಮರಾಗುತ್ತಾರೆ ಎಂದು ಅನಂತಕುಮಾರ್ ಹೆಗಡೆ ಗುಡುಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ