*ಚಂಡಮಾರುತದ ಸಂಕಷ್ಟದಲ್ಲಿ ಕರ್ನಾಟಕದ ನೆರವು:* *ಡಿಕೆಶಿಗೆ ಪತ್ರ ಬರೆದು ಧನ್ಯವಾದ ಹೇಳಿದ ಆಂಧ್ರ ಸಿಎಂ*

ಪ್ರಗತಿವಾಹಿನಿ ಸುದ್ದಿ: ಅರ್ನಾಬ್ ಮತ್ತು ಮುರಸು ಅವಳಿ ಚಂಡಮಾರುತಗಳಿಂದ ತತ್ತರಿಸಿರುವ ಆಂಧ್ರಪ್ರದೇಶಕ್ಕೆ ಕರ್ನಾಟಕ ಸರ್ಕಾರ ನೀಡಿದ ನೆರವಿಗೆ ಅಲ್ಲಿನ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಸಂಪರ್ಕ ಪುನಃಸ್ಥಾಪನೆ ಕಾರ್ಯಕ್ಕೆ ತಕ್ಷಣ ಸ್ಪಂದಿಸಿ ಸಿಬ್ಬಂದಿ ಮತ್ತು ತಂಡಗಳನ್ನು ಕಳುಹಿಸಿದ ಕರ್ನಾಟಕದ ಕ್ರಮಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ಸಂಬಂಧ ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕೃತ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಕರ್ನಾಟಕಕ್ಕೆ ಸಂಕಷ್ಟ ಎದುರಾದರೆ ತಾವೂ ನೆರವಿಗೆ ಸಿದ್ಧ ಎಂದು ಭರವಸೆ ನೀಡಿದ್ದಾರೆ.
ಅರ್ನಾಬ್ ಮತ್ತು ಮುರಸು ಚಂಡಮಾರುತಗಳ ಪರಿಣಾಮ ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ವಿದ್ಯುತ್ ಮೂಲಸೌಕರ್ಯಕ್ಕೆ ಭಾರಿ ಹಾನಿಯಾಗಿತ್ತು. ವಿದ್ಯುತ್ ಸಂಪರ್ಕ ಕಡಿತಗೊಂಡು ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ತಕ್ಷಣ ಸ್ಪಂದಿಸಿ, 68 ತಂಡಗಳಲ್ಲಿ ಒಟ್ಟು 592 ಸಿಬ್ಬಂದಿಯನ್ನು ವಿದ್ಯುತ್ ಪುನಃಸ್ಥಾಪನೆ ಕಾರ್ಯಕ್ಕಾಗಿ ಆಂಧ್ರಪ್ರದೇಶಕ್ಕೆ ನಿಯೋಜಿಸಿತ್ತು.
ಆಂಧ್ರಪ್ರದೇಶ ಕೇಂದ್ರ ವಿದ್ಯುತ್ ವಿತರಣಾ ನಿಗಮದ ವ್ಯಾಪ್ತಿಯಲ್ಲೇ ಅರ್ನಾಬ್ ಚಂಡಮಾರುತದಿಂದ 1,333 ಗ್ರಾಮಗಳು ಹಾಗೂ ಮುರಸು ಚಂಡಮಾರುತದಿಂದ 1,825 ಗ್ರಾಮಗಳು ಬಾಧಿತವಾಗಿದ್ದವು. ಅರ್ನಾಬ್ ಚಂಡಮಾರುತದಲ್ಲಿ 1,852 ವಿದ್ಯುತ್ ಕಂಬಗಳು ಹಾಗೂ ಮುರಸು ಚಂಡಮಾರುತದಲ್ಲಿ 7,850 ಕಂಬಗಳು ಹಾನಿಗೊಳಗಾಗಿದ್ದವು ಅಥವಾ ನೆಲಕ್ಕುರುಳಿದ್ದವು.
ಈಗಾಗಲೇ ಆಂಧ್ರಪ್ರದೇಶದ ವಿದ್ಯುತ್ ವಿತರಣಾ ನಿಗಮವು ಅರ್ನಾಬ್ ಚಂಡಮಾರುತದ ಬಳಿಕ 165 ತಂಡಗಳಲ್ಲಿ 1,580 ಸಿಬ್ಬಂದಿಯನ್ನು ಹಾಗೂ ಮುರಸು ಚಂಡಮಾರುತದ ಬಳಿಕ 390 ತಂಡಗಳಲ್ಲಿ 3,292 ಸಿಬ್ಬಂದಿಯನ್ನು ಕಾರ್ಯಾಚರಣೆಗೆ ನಿಯೋಜಿಸಿತ್ತು. ಇದರ ಜೊತೆಗೆ ಕರ್ನಾಟಕದಿಂದ ತೆರಳಿದ್ದ 592 ಸಿಬ್ಬಂದಿಯ 68 ತಂಡಗಳು ಸ್ಥಳೀಯ ಸಿಬ್ಬಂದಿಯೊಂದಿಗೆ ಕೈಜೋಡಿಸಿ ಸಮರೋಪಾದಿಯಲ್ಲಿ ವಿದ್ಯುತ್ ಸಂಪರ್ಕ ಮರುಸ್ಥಾಪಿಸಲು ನೆರವಾದವು ಎಂದು ಚಂದ್ರಬಾಬು ನಾಯ್ಡು ಶ್ಲಾಘಿಸಿದ್ದಾರೆ.
ಇನ್ನು, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು ಭೌಗೋಳಿಕ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ನಿಕಟ ಸಂಬಂಧ ಹೊಂದಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಪರಸ್ಪರ ನೆರವು ನೀಡುವುದರಿಂದ ಎರಡೂ ರಾಜ್ಯಗಳ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ ಎಂದು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.
ಭವಿಷ್ಯದಲ್ಲಿ ಕರ್ನಾಟಕಕ್ಕೆ ಯಾವುದೇ ನೈಸರ್ಗಿಕ ವಿಕೋಪ ಅಥವಾ ತುರ್ತು ಪರಿಸ್ಥಿತಿ ಎದುರಾದರೆ ಸಿಬ್ಬಂದಿ, ಉಪಕರಣಗಳು ಮತ್ತು ಯಂತ್ರೋಪಕರಣ ಸೇರಿದಂತೆ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡಲು ಆಂಧ್ರಪ್ರದೇಶ ಸರ್ಕಾರ ಸಿದ್ಧವಿದೆ ಎಂದು ಚಂದ್ರಬಾಬು ನಾಯ್ಡು ಭರವಸೆ ನೀಡಿದ್ದಾರೆ.




