Kannada NewsKarnataka NewsLatestPolitics

*ಗ್ರಾಮೀಣ ಆಸ್ತಿ ಮಾಲೀಕರಿಗೆ ಗುಡ್‌ನ್ಯೂಸ್*: *ಡಿಸೆಂಬರ್ 31ರೊಳಗೆ 8 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು*

ಪ್ರಗತಿವಾಹಿನಿ ಸುದ್ದಿ: ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಹಲವು ವರ್ಷಗಳಿಂದ ಇ-ಸ್ವತ್ತು ದಾಖಲೆಗಾಗಿ ಕಾಯುತ್ತಿರುವವರಿಗೆ ಇದೀಗ ಹಕ್ಕಿನ ದಾಖಲೆ ಪಡೆಯುವ ಅವಕಾಶ ಸಿಗಲಿದೆ. ಇ-ಸ್ವತ್ತು ನೀಡಿಕೆಯಲ್ಲಿನ ವಿಳಂಬ ನಿವಾರಿಸಲು ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಡಿಸೆಂಬರ್ 31ರೊಳಗೆ 8 ಲಕ್ಷ ಗ್ರಾಮಠಾಣಾ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಗುರಿ ಹೊಂದಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಭೂ ಗ್ಯಾರಂಟಿ ಇ-ಸ್ವತ್ತು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಒಟ್ಟು 1,50,69,090 ಗ್ರಾಮೀಣ ಆಸ್ತಿಗಳಿವೆ ಎಂದು ಮಾಹಿತಿ ನೀಡಿದರು. ಈ ಪೈಕಿ 42,92,484 ಆಸ್ತಿಗಳಿಗೆ ನಮೂನೆ 11 ಹಾಗೂ 10,16,730 ಆಸ್ತಿಗಳಿಗೆ ನಮೂನೆ ಬಿ ವಿತರಿಸಲಾಗಿದೆ. ಇನ್ನೂ 97,59,867 ಆಸ್ತಿಗಳಿಗೆ ಇ-ಸ್ವತ್ತು ನೀಡಬೇಕಿದೆ ಎಂದು ತಿಳಿಸಿದರು.

ವ್ಯಾಜ್ಯರಹಿತ ಹಾಗೂ ಸರ್ಕಾರಿ ಅಥವಾ ಅರಣ್ಯ ಭೂಮಿಯಲ್ಲಿಲ್ಲದ 80 ಲಕ್ಷ ಗ್ರಾಮೀಣ ಆಸ್ತಿಗಳಿಗೆ 2027ರ ಡಿಸೆಂಬರ್ 31ರೊಳಗೆ ಇ-ಸ್ವತ್ತು ನೀಡಲು ಗುರಿ ನಿಗದಿಪಡಿಸಲಾಗಿದೆ. ರಾಜ್ಯದ 5,927 ಗ್ರಾಮ ಪಂಚಾಯಿತಿಗಳಿಗೂ ಈ ಸಂಬಂಧ ಗುರಿ ನೀಡಲಾಗಿದೆ ಎಂದು ಹೇಳಿದರು.

ಚುನಾವಣೆಗೂ ಮುನ್ನ ನೀಡಿದ್ದ ಐದು ಗ್ಯಾರಂಟಿಗಳನ್ನು ಸರ್ಕಾರ ಯಶಸ್ವಿಯಾಗಿ ಜಾರಿಗೆ ತಂದಿದೆ. ಇದೀಗ ಭೂ ಗ್ಯಾರಂಟಿ ಇ-ಸ್ವತ್ತು ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ಆರನೇ ಗ್ಯಾರಂಟಿ ಜಾರಿಗೆ ತರಲಾಗಿದೆ ಎಂದು ಸಚಿವರು ತಿಳಿಸಿದರು.

ಗ್ರಾಮೀಣ ಪ್ರದೇಶದ ಜನರಿಗೆ ಇ-ಸ್ವತ್ತು ಪಡೆಯುವಲ್ಲಿ ಆಗುತ್ತಿದ್ದ ವಿಳಂಬ ನಿವಾರಿಸಲು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿ ರಚಿಸಲಾಗಿತ್ತು. ಬೆಂಗಳೂರು ನಗರ, ಮಂಗಳೂರು, ಕಲಬುರಗಿ ಮತ್ತು ಬೆಳಗಾವಿ ಜಿಲ್ಲಾ ಪಂಚಾಯಿತಿಗಳ ಸಿಇಒಗಳು ಈ ಸಮಿತಿಯಲ್ಲಿದ್ದರು. ಸಮಿತಿಯ ಶಿಫಾರಸಿನಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳು, 2025ಕ್ಕೆ ತಿದ್ದುಪಡಿ ತರಲಾಗಿದೆ ಎಂದು ವಿವರಿಸಿದರು.

ಇನ್ನು, ಕಂದಾಯ ಭೂಮಿಯಲ್ಲಿ ಅಭಿವೃದ್ಧಿಪಡಿಸಲಾದ ಪರಿವರ್ತಿತ ಭೂಮಿಯಲ್ಲಿರುವ ಮನೆಗಳಿಗೂ ಇ-ಸ್ವತ್ತು ನೀಡಲು ಕ್ರಮ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ಬಿ ಖರಾಬು ಭೂಮಿ ಇಲ್ಲದ ಸರ್ವೆ ನಂಬರ್‌ಗಳಲ್ಲಿರುವ ಆಸ್ತಿಗಳಿಗೆ ಇ-ಸ್ವತ್ತು ನೀಡಲಾಗುತ್ತದೆ. ನಂತರ ಭೂಪರಿವರ್ತನೆಯಾಗದ ಭೂಮಿಯಲ್ಲಿರುವ ಮನೆಗಳಿಗೂ ಇ-ಸ್ವತ್ತು ನೀಡಲು ನಿಯಮಗಳನ್ನು ತಿದ್ದುಪಡಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ತಲೆಮಾರುಗಳಿಂದ ಗ್ರಾಮಠಾಣ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಕೆಲವರ ಆಸ್ತಿ ದಾಖಲೆಗಳು ಪ್ರವಾಹ, ಮಳೆ, ಬೆಂಕಿ ಅವಘಡ ಅಥವಾ ಗೆದ್ದಲುಗಳಿಂದ ನಾಶವಾಗಿವೆ. ಅಂತಹವರಿಗೆ 07-04-2025ಕ್ಕಿಂತ ಹಿಂದಿನ ವಿದ್ಯುತ್ ಬಿಲ್ ಆಧರಿಸಿ ಹಾಗೂ ಸ್ಥಳ ಮಹಜರು ನಡೆಸಿ ಇ-ಸ್ವತ್ತು ನೀಡಲಾಗುತ್ತದೆ. ಇದಕ್ಕೂ ಮೊದಲು ಆಕ್ಷೇಪಣೆ ಸಲ್ಲಿಸಲು 21 ದಿನಗಳ ಕಾಲಾವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.

ಮಲೆನಾಡು ಭಾಗದ ಜನರ ವಾಸಸ್ಥಳದ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಕಣಮನೆ ಮತ್ತು ಮನೆದಳ ಆಸ್ತಿಗಳಿಗೂ ಇ-ಸ್ವತ್ತು ನೀಡಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಜಮೀನಿನಲ್ಲಿ ವಾಸ ಅಥವಾ ಕೃಷಿ ಉದ್ದೇಶಕ್ಕಾಗಿ ನಿರ್ಮಿಸಿರುವ ಕಟ್ಟಡಗಳಿಗೆ ನೋಂದಾಯಿತ ದಾಖಲೆಗಳಿಲ್ಲದಿದ್ದರೂ ನಿಯಮಾನುಸಾರ ಇ-ಸ್ವತ್ತು ಪಡೆಯಬಹುದು. 4,000 ಚದರ ಅಡಿವರೆಗಿನ ಆಸ್ತಿಗಳಿಗೆ ಈ ಸೌಲಭ್ಯ ಲಭ್ಯವಾಗಲಿದೆ ಎಂದು ಸಚಿವರು ವಿವರಿಸಿದರು.

ಇ-ಸ್ವತ್ತು ಅಭಿಯಾನದ ಅನುಷ್ಠಾನಕ್ಕಾಗಿ ಪ್ರಸ್ತುತ ಇ-ಸ್ವತ್ತು 2.0 ತಂತ್ರಾಂಶ ಬಳಕೆಯಲ್ಲಿದೆ. ಸರ್ಕಾರಿ ಆಸ್ತಿಗಳಿಗೆ ಮತ್ತು ಬಿ ಖರಾಬು ಭೂಮಿಗೆ ಅನಧಿಕೃತವಾಗಿ ಇ-ಸ್ವತ್ತು ನೀಡುವುದನ್ನು ತಡೆಯಲು ಕಂದಾಯ ಇಲಾಖೆಯ ತಂತ್ರಾಂಶದೊಂದಿಗೆ ಸಂಪರ್ಕ ಹೊಂದಿರುವ ಇ-ಸ್ವತ್ತು 3.0 ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಗ್ರಾಮೀಣ ಪ್ರದೇಶದ ಜಮೀನುಗಳ ಸರ್ವೆ ಸಮಸ್ಯೆ ನಿವಾರಿಸಲು ಪಂಚಾಯತ್ ರಾಜ್ ಇಲಾಖೆಯಲ್ಲಿಯೇ ಪ್ರತ್ಯೇಕ ಮೋಜಣಿ ವಿಭಾಗ ಆರಂಭಿಸುವ ಯೋಜನೆಯೂ ಇದೆ. ಸಿಬ್ಬಂದಿಗೆ ತರಬೇತಿ ನೀಡಿ ರೋವರ್‌ಗಳ ಮೂಲಕ ಸರ್ವೆ ನಡೆಸಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಇದನ್ನು ಶೀಘ್ರವೇ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ತಿಳಿಸಿದರು.

ಇ-ಸ್ವತ್ತು ಪಡೆಯುವಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾದರೆ 9483476000 ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ಸಚಿವರು ತಿಳಿಸಿದ್ದಾರೆ. ಅಭಿಯಾನ ಯಶಸ್ವಿಯಾಗಲು ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಮಾಣಿಕತೆ, ದಕ್ಷತೆ ಹಾಗೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದರ ಜೊತೆಗೆ ಸರ್ಕಾರಿ ಆಸ್ತಿಗಳ ಸಂರಕ್ಷಣೆಗೂ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಡಿ. ರಂದೀಪ್, ಆಯುಕ್ತ ವೆಂಕಟರಾಜಾ, ಬೆಳಗಾವಿ ಸಿಇಒ ರಾಹುಲ್ ಶಿಂಧೆ ಹಾಗೂ ಇ-ಆಡಳಿತ ನಿರ್ದೇಶಕ ಗಿರೀಶ್ ದಿಲೀಪ್ ಬದೋಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Back to top button