*NWKRTC ಬಸ್ ಚಾಲಕ ಕಂ ನಿರ್ವಾಹಕನ ಮನೆ ಮೇಲೆ ಲೋಕಾಯುಕ್ತ ದಾಳಿ: ರೇಡ್ ಗೆ ಕಾರಣವೇನು?*

ಪ್ರಗತಿವಾಹಿನಿ ಸುದ್ದಿ: NWKRTC ಬಸ್ ಚಾಲಕ ಕಂ ನಿರ್ವಾಹಕ ಷಡಕ್ಷರಯ್ಯ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ್ದಾರೆ.
ಷಡಕ್ಷರಯ್ಯ ಅವರ ಹುಬ್ಬಳ್ಳಿಯ ಗಾಂಧಿನಗರದಲ್ಲಿರುವ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ನಿಗದಿತ ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಮೇಲೆ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ದಾಳಿಯ ವೇಳೆ, ಅಧಿಕಾರಿಗಳು ಮನೆಯಲ್ಲಿ ಲಭ್ಯವಿರುವ ದಾಖಲೆಗಳು, ಆಸ್ತಿ ಪತ್ರಗಳು ಮತ್ತು ಇತರೆ ಮಹತ್ವದ ಮಾಹಿತಿಗಳನ್ನು ಪರಿಶೀಲಿಸಿದ್ದಾರೆ.
ಸಾರ್ವಜನಿಕ ಸೇವಾ ವಲಯದಲ್ಲಿರುವ ಕಂಡಕ್ಟರ್ ಆದಾಯದಲ್ಲಿ ಅಕ್ರಮವಾಗಿ ಆಸ್ತಿಯನ್ನು ಗಳಿಸಲು ಸಾಮಾನ್ಯವಾಗಿ ಅವಕಾಶಗಳು ಕಡಿಮೆ. ಆದರೆ, ಷಡಕ್ಷರಯ್ಯ ಅವರ ಮೇಲೆ ದಾಳಿ ನಡೆದಿರುವುದು ಮತ್ತು ಅವರು ಹೊಂದಿರುವ ಆಸ್ತಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಲಭ್ಯವಾಗಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಷಡಕ್ಷರಯ್ಯ ಅತ್ತಿಕಟ್ಟಿಮಠ ಅವರು ಕಂಡಕ್ಟರ್ ಕೆಲಸದ ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ. ಈ ವ್ಯವಹಾರಗಳ ಮೂಲಕ ಅಪಾರ ಪ್ರಮಾಣದ ಸಂಪತ್ತನ್ನು ಅಕ್ರಮವಾಗಿ ಗಳಿಸಿದ್ದಾರೆ ಎಂಬ ಮಾಹಿತಿ ಇದೆ. ಅವರ ಆದಾಯ ಮತ್ತು ಪ್ರಸ್ತುತ ಅವರು ಸಂಪಾದಿಸಿರುವ ಆಸ್ತಿಗಳ ನಡುವೆ ಸಾಕಷ್ಟು ವ್ಯತ್ಯಾಸಗಳು ಕಂಡುಬಂದಿರುವುದೇ ಈ ದಾಳಿಗೆ ಮುಖ್ಯ ಕಾರಣ ಎನ್ನಲಾಗಿದೆ.
ಷಡಕ್ಷರಯ್ಯ ಅವರು ಯಾವುದೇ ರೀತಿಯ ಇತರೆ ವ್ಯವಹಾರ ಅಥವಾ ಬ್ಯುಸಿನೆಸ್ ನಡೆಸಿದಲ್ಲಿ, ಅದರ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ತಮ್ಮ ಸೇವಾ ಪುಸ್ತಕಗಳಲ್ಲಿ ಅದನ್ನು ದಾಖಲಿಸುವುದು ಕಡ್ಡಾಯವಾಗಿರುತ್ತದೆ. ಆದರೆ, ಅವರು ಈ ನಿಯಮಗಳನ್ನು ಪಾಲಿಸದೆ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಗಂಭೀರ ಆರೋಪವಿದೆ. ಈ ಹಿನ್ನೆಲೆಯಲ್ಲಿ, ಅವರು ಸಕ್ರಮವಾಗಿ ಗಳಿಸಿದ ಆಸ್ತಿ ಎಷ್ಟು ಮತ್ತು ಅಕ್ರಮ ಮೂಲಗಳಿಂದ ಗಳಿಸಿದ ಆಸ್ತಿ ಎಷ್ಟು ಎಂಬುದನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.




