*ಮೂರು ವರ್ಷದ ಮಗುವನ್ನು ಸೇತುವೆ ಮೇಲೆ ಬಿಟ್ಟು ನದಿಗೆ ಹಾರಿದ ದಂಪತಿ*

ಪ್ರಗತಿವಾಹಿನಿ ಸುದ್ದಿ: ಮೂರು ವರ್ಷದ ಮಗುವನ್ನು ಸೇತುವೆ ಮೇಲೆ ಸ್ಕೂಟರ್ ಮೇಲೆ ಕೂರಿಸಿ ದಂಪತಿ ನದಿಗೆ ಹಾರಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಚಿಂಚಿನಾಡ ವಸಿಷ್ಠ ಸೇತುವೆಯ ಬಳಿ ಈ ಘಟನೆ ನಡೆದಿದೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ವೆಲ್ಪುರು ಗ್ರಾಮದ ನಿವಾಸಿಗಳಾದ ದೊಡ್ಡ ಸಾಯಿ (29) ಮತ್ತು ಅವರ ಪತ್ನಿ ಶಿರೀಷಾ (28) ನದಿಗೆ ಹಾರಿದ ದಂಪತಿ.
ರಾತ್ರಿ 10 ಗಂಟೆ ಸುಮಾರಿಗೆ ದಂಪತಿ ಮಗುವಿನೊಂದಿಗೆ ಸ್ಕೂಟರ್‌ನಲ್ಲಿ ಸೇತುವೆ ಬಳಿ ಬಂದಿದ್ದರು. ಬಳಿಕ ಮಗುವನ್ನು ಸ್ಕೂಟರ್ ಮೇಲೆಯೇ ಬಿಟ್ಟು ಉಕ್ಕಿ ಹರಿಯುತ್ತಿದ್ದ ಗೋದಾವರಿ ನದಿಗೆ ಹಾರಿದ್ದಾರೆ ಎಂದು ಶಂಕಿಸಲಾಗಿದೆ. ಕತ್ತಲು ಹಾಗೂ ಚಳಿ ಮಧ್ಯೆ ಮಗು ಒಂಟಿಯಾಗಿ ಸೇತುವೆ ಮೇಲೆ ಅಳುತ್ತಿರುವುದನ್ನು ಗಮನಿಸಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ಮಗುವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಸ್ಕೂಟರ್ ಅನ್ನು ಜಪ್ತಿ ಮಾಡಿದ್ದಾರೆ. ಬಳಿಕ ಮಗುವನ್ನು ಕುಟುಂಬದ ಸದಸ್ಯರಿಗೆ ಒಪ್ಪಿಸಲಾಗಿದೆ. ಸದ್ಯ ದಂಪತಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದ್ದು, ಪೊಲೀಸ್ ಸಿಬ್ಬಂದಿ, ಈಜುಗಾರರು ಮತ್ತು ದೋಣಿ ತಂಡಗಳು ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ



