*ಮಹಿಳೆಯನ್ನು ರಸ್ತೆಗೆ ಎಳೆತಂದು ಮಾರಣಾಂತಿಕ ಹಲ್ಲೆ: ಪತಿ, ಅತ್ತೆ-ಮಾವನಿಂದ ಕ್ರೌರ್ಯ*

ಪ್ರಗತಿವಾಹಿನಿ ಸುದ್ದಿ: ಹಾಡಹಗಲೇ ಮಹಿಳೆಯನ್ನು ಮನೆಯಿಂದ ರಸ್ತೆಗೆ ಎಳೆದುತಂದು ಪತಿ, ಅತ್ತೆ-ಮಾವ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಮೃಗಗಳಂತೆ ವರ್ತಿಸಿರುವ ಘಟನೆ ನಡೆದಿದೆ.
ಬೆಂಗಳೂರು ನಗರ ಜಿಲ್ಲೆಯ ಆನೆಕಲ್ ತಾಲೂಕಿನ ನಾರಾಯಣಪುರದಲ್ಲಿ ಈ ಘಟನೆ ನಡೆದಿದೆ. ಶ್ರೀಲಜಾ (32) ಹಲ್ಲೆಗೊಳಗಾದ ಮಹಿಳೆ. ಶ್ರೀಲಜಾ ಹಾಗೂ ಅರುಣ್ ಕುಮಾರ್ ದಂಪತಿಗೆ ನಾಲ್ಕು ವರ್ಷದ ಮಗಳಿದ್ದಾಳೆ. ಮದುವೆ ಬಳಿಕ ಪತಿ ಅರುಣ್ ಕುಮಾರ್, ಅತ್ತೆ ಪ್ರಭಾವತಿ, ಮಾವ ಚೌಡಯ್ಯ ಪ್ರತಿ ದಿನ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರಂತೆ. ತವರಿನಿಂದ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಇಲ್ಲವೇ ಮನೆ ಬಿಟ್ಟು ಹೋಗು ಎಂದು ಹೊಡೆಯುವುದು, ಕುಕ್ಕರ್ ನಿಂದ ಹಲ್ಲೆ ನಡೆಸುವುದು ಮಾಡುತ್ತಿದ್ದರಂತೆ.
ವಾರದ ಹಿಂದೆ ಶ್ರೀಲಜಾ ತನ್ನ ತಂಗಿಗೆ ಅನಾರೋಗ್ಯ ಎಂಬ ವಿಷಯ ತಿಳಿದು ನೋಡಿಕೊಂಡು ಬರಲೆಂದು ತವರಿಗೆ ಹೋಗಿದ್ದಳಂತೆ. ಇಂದು ತವರಿನಿಂದ ಮನೆಗೆ ಬಂದ ಶ್ರೀಲಜಾಳನ್ನು ಬಾಯಿಗೆ ಬಂದಂತೆ ಬೈದು ಪತಿ, ಅತ್ತೆ-ಮಾವ ಹೊಡೆದಿದ್ದಾರೆ. ಅಲ್ಲದೇ ಆಕೆಯನ್ನು ಮನೆಯಿಂದ ರಸ್ತೆಗೆ ಎಳೆದು ತಂದು ಒಬ್ಬರು ಕೂದಲು ಹಿಡಿದು ಎಳೆದಾಡಿದರೆ ಅತ್ತೆ-ಮಾವ ಕಾಲಿನಿಂದ ಒದ್ದು, ಮನಬಂದಂತೆ ಹೊಡೆದಾಡಿದ್ದಾರೆ. ತನ್ನನ್ನು ರಕ್ಷಿಸುವಂತೆ ಮಹಿಳೆ ಗೋಗರೆದರೂ ಬಿಡದೇ ರಾಕ್ಷಸರಂತೆ ವರ್ತಿಸಿದ್ದಾರೆ. ಮಹಿಳೆಯ ಮೇಲೆ ಪತಿ, ಅತ್ತೆ-ಮಾವ ನಡೆಸಿರುವ ಮಾರಣಾಂತಿಕ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.