*ಅಂಗನವಾಡಿ ಆಹಾರ ಸಾಮಗ್ರಿಯನ್ನೂ ಹೊತ್ತೊಯ್ದ ಕಾರ್ಯಕರ್ತೆ; ಮೊಟ್ಟೆ ಬಳಿಕ ದಿನಸಿ ಸಾಮಗ್ರಿ ಕಳ್ಳಾಟ*
ಪ್ರಗತಿವಾಹಿನಿ ಸುದ್ದಿ: ಕೊಪ್ಪಳ ಜಿಲ್ಲೆಯ ಅಂಗನವಾಡಿಯೊಂದರಲ್ಲಿ ಮಕ್ಕಳಿಗೆ ತಟ್ಟೆಗೆ ಬಡಿಸಿದ್ದ ಮೊಟ್ಟೆಯನ್ನು ಎತ್ತಿಕೊಳ್ಳುತ್ತಿದ್ದ ಕಾರ್ಯಕರ್ತೆ, ಸಹಾಯಕಿಯನ್ನು ಅಮಾನತುಗೊಳಿಸಿ ಕ್ರಮ ಕೈಗೊಂಡರೂ ಬುದ್ಧಿ ಕಲಿಯದ ಕೆಲ ಅಂಗನವಾಡಿ ಕಾರ್ಯಕರ್ತೆಯರು ಕಳ್ಳಾಟ ಮುಂದುವರೆಸಿದ್ದಾರೆ. ಕೊಪ್ಪಳದ ಬಳಿಕ ಇದೀಗ ಯಾದಗಿರಿ ಜಿಲ್ಲೆಯಲ್ಲಿ ಅಂಗನವಾಡಿಯೊಂದರಲ್ಲಿ ಮಕ್ಕಳ ದಿನಸಿಯನ್ನೇ ಕಾರ್ಯಕರ್ತೆ ಕದಿಯುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಹಗರಟಗಿ ಗ್ರಾಮದ ಅಂಗನವಾಡಿಯೊಂದರಲ್ಲಿ ಕಾರ್ಯಕರ್ತೆ ಅಂಗನವಾಡಿಯ ದಿನಸಿ ಸಾಮಗ್ರಿಗಳನ್ನು ಮನೆಗೆ ಸಾಗಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾಳೆ.
ಅಂಗನವಾಡಿ ಕಾರ್ಯಕರ್ತೆ ಉಮಾ ಎಂಬುವವಳು ಈ ಕೃತ್ಯವೆಸಗಿದ್ದಾಳೆ. ಅಂಗನವಾಡಿಯ ದಿನಸಿ, ಆಹಾರ ಸಾಮಗ್ರಿಗಳನ್ನು ಮೂಟೆಗಟ್ಟಲೇ ಸಾಗಿಸುತ್ತಿರುವ ದೃಶ್ಯ ಸ್ಥಳೀಯರಿಬ್ಬರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅಂಗನವಾಡಿ ಕಾರ್ಯಕರ್ತೆಯ ಆಹಾರ ಕಳ್ಳಾಟ ಬೆಳಕಿಗೆ ಬಂದಿದೆ. ಅಂಗನವಾಡಿ ಮಕ್ಕಳ ಆಹಾರಕ್ಕೂ ಕಾರ್ಯಕರ್ತೆಯರೇ ಕನ್ನ ಹಾಕಿದರೆ ಮಕ್ಕಳ ಗತಿಯೇನು? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಇಲಾಖೆಯ, ಅಂಗನವಾಡಿಗಳ ಅವ್ಯವಹಾರ ತಡೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇಂತವರಿಂದಾಗಿ ಸಚಿವರಿಗೆ, ಸರಕಾರಕ್ಕೆ ಕೆಟ್ಟ ಹೆಸರು ಬರುವಂತಾಗಿದೆ. ಕಳೆದ ಒಂದು ವರ್ಷದಲ್ಲಿ ವ್ಯವಸ್ಥೆ ಸಾಕಷ್ಟು ಸುಧಾರಿಸಿದೆ. ಆದಾಗ್ಯೂ ಅಲ್ಲೊಂದು ಇಲ್ಲೊಂದು ನಡೆಯುವ ಕೃತ್ಯಗಳಿಂದಾಗಿ ಸಾರ್ವಜನಿಕ ವಲಯದಲ್ಲಿ ಬೇರೆ ರೀತಿಯ ಅಭಿಪ್ರಾಯ ಬರುವಂತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ