*ಅನಿರುದ್ಧ್-ಕಾವ್ಯಾ ಮಾರನ್ ಮದುವೆ ಫೋಟೋ ವೈರಲ್*: *ಗ್ರೀಸ್ನಲ್ಲಿ ಅದ್ಧೂರಿ ವಿವಾಹ*

ಪ್ರಗತಿವಾಹಿನಿ ಸುದ್ದಿ: ಸಂಗೀತ ಲೋಕದ ಖ್ಯಾತ ಹೆಸರು ಮತ್ತು ಕ್ರಿಕೆಟ್ ಲೋಕದ ಜನಪ್ರಿಯ ಮುಖ ಈಗ ಒಂದಾಗಿವೆ. ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗ್ರೀಸ್ನಲ್ಲಿ ನಡೆದ ಅದ್ಧೂರಿ ವಿವಾಹದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ.
ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡದ ಸಹ-ಮಾಲೀಕರು ಹಾಗೂ ಸಿಇಒ ಕಾವ್ಯಾ ಮಾರನ್ ನವೆಂಬರ್ 11ರಂದು ಗ್ರೀಸ್ನಲ್ಲಿ ವಿವಾಹವಾಗಿದ್ದಾರೆ. ನವೆಂಬರ್ 10 ಮತ್ತು 11ರಂದು ಎರಡು ದಿನಗಳ ಕಾಲ ಮದುವೆ ಸಮಾರಂಭ ನಡೆದಿದ್ದು, ಮಂಗಳವಾರ ನಿಶ್ಚಿತಾರ್ಥ ಹಾಗೂ ಬುಧವಾರ ಮಾಂಗಲ್ಯ ಧಾರಣೆ ನೆರವೇರಿದೆ.
ಮದುವೆಯ ಸುಂದರ ಕ್ಷಣಗಳನ್ನು ಅನಿರುದ್ಧ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. “My once in a lifetime, for a lifetime 11.11” ಎಂದು ಬರೆದುಕೊಂಡಿದ್ದಾರೆ. ಐವರಿ ಬಣ್ಣದ ಕುರ್ತಾ, ಪಂಚೆ ಹಾಗೂ ಕಸೂತಿ ಕೆಲಸವಿರುವ ಜಾಕೆಟ್ನಲ್ಲಿ ಅನಿರುದ್ಧ್ ಮಿಂಚಿದರೆ, ಬ್ಲಶ್ ಪಿಂಕ್ ಬಣ್ಣದ ಕಸೂತಿ ಮತ್ತು ಸೀಕ್ವಿನ್ ವರ್ಕ್ ಇರುವ ಲೆಹೆಂಗಾದಲ್ಲಿ ಕಾವ್ಯಾ ಕಂಗೊಳಿಸಿದ್ದಾರೆ.
ವಿವಾಹದ ಫೋಟೋದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಸೂಪರ್ಸ್ಟಾರ್ ರಜನಿಕಾಂತ್, ಸನ್ ಗ್ರೂಪ್ ಮುಖ್ಯಸ್ಥ ಹಾಗೂ ಕಾವ್ಯಾ ಅವರ ತಂದೆ ಕಲಾನಿಧಿ ಮಾರನ್, ದಯಾನಿಧಿ ಮಾರನ್ ಮತ್ತು ಅವರ ಪತ್ನಿ ಪ್ರಿಯಾ ಮಾರನ್ ಕಾಣಿಸಿಕೊಂಡಿದ್ದಾರೆ.
ನವೆಂಬರ್ 21ರಂದು ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ಆಯೋಜಿಸಲಾಗಿದೆ. ಕಾವ್ಯಾ ಅವರ ಪೋಷಕರಾದ ಕಲಾನಿಧಿ ಮಾರನ್ ಮತ್ತು ಕಾವೇರಿ ಮಾರನ್ ಅವರು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿ ಆಹ್ವಾನಿಸಿದ್ದಾರೆ. ಈ ಭೇಟಿಯ ಬಳಿಕ ತೆಲಂಗಾಣ ಮುಖ್ಯಮಂತ್ರಿ ಕಚೇರಿ ಹಂಚಿಕೊಂಡ ಪೋಸ್ಟ್ನಲ್ಲಿ ಆರತಕ್ಷತೆಯ ದಿನಾಂಕದ ಮಾಹಿತಿ ಪ್ರಕಟವಾಗಿತ್ತು.
ಆರತಕ್ಷತೆಗೆ ಪ್ರಧಾನಿ ನರೇಂದ್ರ ಮೋದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ರಾಜಕೀಯ ಗಣ್ಯರಿಗೆ ಆಹ್ವಾನ ನೀಡಲಾಗಿದೆ ಎಂದು ಮೂಲ ಮಾಹಿತಿ ತಿಳಿಸಿದೆ.
ಚಿತ್ರರಂಗದಿಂದ ರಜನಿಕಾಂತ್, ಎ.ಆರ್. ರೆಹಮಾನ್, ಕಮಲ್ ಹಾಸನ್, ಧನುಷ್, ಅಜಿತ್ ಕುಮಾರ್ ಮತ್ತು ಶಾಲಿನಿ, ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ, ಶಿವಕಾರ್ತಿಕೇಯನ್ ಹಾಗೂ ನಿರ್ದೇಶಕ ನೆಲ್ಸನ್ ದಿಲೀಪ್ಕುಮಾರ್ ಸೇರಿದಂತೆ ಹಲವು ಕಲಾವಿದರು ಭಾಗವಹಿಸುವ ನಿರೀಕ್ಷೆಯಿದೆ. ಕ್ರಿಕೆಟ್ ಲೋಕದಿಂದ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಸೇರಿದಂತೆ ಹಲವು ಆಟಗಾರರು ಪಾಲ್ಗೊಳ್ಳುವ ಸಾಧ್ಯತೆಯಿದೆ.
‘ವೈ ದಿಸ್ ಕೊಲವೆರಿ ಡಿ’ ಹಾಡಿನ ಮೂಲಕ ಜನಪ್ರಿಯತೆ ಪಡೆದ ಅನಿರುದ್ಧ್, ಶಾರುಖ್ ಖಾನ್, ಪವನ್ ಕಲ್ಯಾಣ್ ಮತ್ತು ವಿಜಯ್ ಸೇರಿದಂತೆ ಹಲವು ಸ್ಟಾರ್ ನಟರ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರಕ್ಕೂ ಸಂಗೀತ ಸಂಯೋಜಿಸಿದ್ದಾರೆ.
ಇನ್ನು ಕಾವ್ಯಾ ಮಾರನ್ ಅವರು ಯುಕೆಯ ವಾರ್ವಿಕ್ ಬಿಸಿನೆಸ್ ಸ್ಕೂಲ್ನಲ್ಲಿ ಎಂಬಿಎ ಪೂರ್ಣಗೊಳಿಸಿದ್ದು, 2019ರಲ್ಲಿ ಸನ್ ಟಿವಿ ನೆಟ್ವರ್ಕ್ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಸೇರ್ಪಡೆಯಾಗಿದ್ದರು. ಪ್ರಸ್ತುತ ಸನ್ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಆಗಿದ್ದಾರೆ.
2025ರಲ್ಲಿ ರೆಡ್ಡಿಟ್ ಪೋಸ್ಟ್ ಮೂಲಕ ಇವರಿಬ್ಬರ ಮದುವೆಯ ವದಂತಿ ಹರಡಿತ್ತು. ಆಗ ಅನಿರುದ್ಧ್ ಅದನ್ನು ತಳ್ಳಿಹಾಕಿದ್ದರು. ಆದರೆ 2026ರ ಜೂನ್ನಲ್ಲಿ ಅವರ ಚಿಕ್ಕಪ್ಪ ಹಾಗೂ ನಟ ವೈ.ಜಿ. ಮಹೇಂದ್ರನ್ ಸಂದರ್ಶನವೊಂದರಲ್ಲಿ ಮದುವೆಯ ಸುಳಿವು ನೀಡಿದ್ದರು. ಇದೀಗ ಗ್ರೀಸ್ನಲ್ಲಿ ನಡೆದ ವಿವಾಹದ ಫೋಟೋಗಳು ಆ ಸುದ್ದಿಗೆ ಅಧಿಕೃತ ರೂಪ ನೀಡಿವೆ.




