Belagavi NewsBelgaum NewsKannada NewsKarnataka NewsLatest

*ಪುಡಕಲಕಟ್ಟಿಯಲ್ಲಿ ಮೃಣಾಲ್ ಶುಗರ್ಸ್ ನೂತನ ಕಾರ್ಖಾನೆ ಲೋಕಾರ್ಪಣೆ*

ರೈತರ ಕನಸು ಸಾಕಾರ, ಯುವಜನರಿಗೆ ಉದ್ಯೋಗದ ಭರವಸೆ: ಗಣ್ಯರ ಸಮ್ಮುಖದಲ್ಲಿ ಅದ್ಧೂರಿ ಸಮಾರಂಭ

ಪ್ರಗತಿವಾಹಿನಿ ಸುದ್ದಿ, ಧಾರವಾಡ/ ಬೆಳಗಾವಿ: ಜಿಲ್ಲೆಯ ಪುಡಕಲಕಟ್ಟಿಯಲ್ಲಿ ಸ್ಥಾಪಿಸಲಾದ ಶ್ರೀ ಮೃಣಾಲ್ ಶುಗರ್ಸ್ ನಿಯಮಿತದ ನೂತನ ಸಕ್ಕರೆ ಕಾರ್ಖಾನೆಯ ಭವ್ಯ ಉದ್ಘಾಟನಾ ಸಮಾರಂಭವು ವಿವಿಧ ಮಠಾಧೀಶರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಈ ಕಾರ್ಖಾನೆಯ ಆರಂಭವು ಈ ಭಾಗದ ಕೃಷಿ ಹಾಗೂ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲಾಗಿದೆ. ಸ್ಥಳೀಯ ರೈತರು ಹಲವು ವರ್ಷಗಳಿಂದ ಕಂಡಿದ್ದ ಕನಸು ನನಸಾಗಿದ್ದು, ತಾವು ಬೆಳೆದ ಕಬ್ಬನ್ನು ದೂರದ ಕಾರ್ಖಾನೆಗಳಿಗೆ ಸಾಗಿಸುವ ಅನಿವಾರ್ಯತೆ ತಪ್ಪಲಿದೆ. ಹತ್ತಿರದಲ್ಲಿಯೇ ಕಬ್ಬಿಗೆ ಸೂಕ್ತ ಮಾರುಕಟ್ಟೆ ದೊರೆಯುವುದರ ಜತೆಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆ ರೈತ ಸಮುದಾಯದಲ್ಲಿ ಹೊಸ ಉತ್ಸಾಹ ಮತ್ತು ಭರವಸೆ ಮೂಡಿಸಿದೆ.

ಕೇವಲ ಸಕ್ಕರೆ ಉತ್ಪಾದನೆಗೆ ಸೀಮಿತವಾಗದೆ, ಈ ಭಾಗದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಆಶಯದೊಂದಿಗೆ ಕಾರ್ಖಾನೆ ಆರಂಭಗೊಂಡಿದೆ. ಸ್ಥಳೀಯ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮೂಲಕ ಗ್ರಾಮೀಣ ಭಾಗದ ಆರ್ಥಿಕ ಸಬಲೀಕರಣಕ್ಕೂ ಇದು ನೆರವಾಗಲಿದೆ. ರೈತರು, ಕಾರ್ಮಿಕರು ಹಾಗೂ ಸ್ಥಳೀಯ ಜನರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯುವ ಮೂಲಕ ಮೃಣಾಲ್ ಶುಗರ್ಸ್ ಈ ಭಾಗದ ಅಭಿವೃದ್ಧಿಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹೂಲಿ ಸಂಬಯ್ಯನವರ ಮಠದ ಶ್ರೀ ಉಮೇಶ್ವರ ಶಿವಾಚಾರ್ಯರು, ಶ್ರೀ ಪುಂಡಲೀಕ ಶಾಸ್ತ್ರಿಗಳು, ಉಪ್ಪಿನ ಬೆಟಗೇರಿಯ ಮೂರುಸಾವಿರ ವಿರಕ್ತಮಠದ ಶ್ರೀ ಕುಮಾರ ವೀರೂಪಾಕ್ಷ ಮಹಾಸ್ವಾಮಿಗಳು, ಕರಡಿಗುಡ್ಡದ ಶ್ರೀ ಶಂಕರಾನಂದ ಮಹಾಸ್ವಾಮಿಗಳು, ಪುಡಕಲಕಟ್ಟಿಯ ಆತ್ಮಾನಂದ ಆಶ್ರಮದ ಶ್ರೀ ಸಮರ್ಥ ಶಿವಾನಂದ ಮಹಾಸ್ವಾಮಿಗಳು, ಗರಗದ ಜಗದ್ಗುರು ಶ್ರೀ ಗುರು ಮಡಿವಾಳೇಶ್ವರ ಕಲ್ಮಠದ ಶ್ರೀ ಆತ್ಮಾರಾಮ ಮಹಾಸ್ವಾಮಿಗಳು, ಯಾದವಾಡ ಮುಳಮುತ್ತಲ ಆನಂದಧಾಮ ಶ್ರೀ ಸಿದ್ದಾರೂಢ ಮಠದ ಶ್ರೀ ಆನಂದ ಮಹಾಸ್ವಾಮಿಗಳು ಹಾಗೂ ಧಾರವಾಡದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಿದ್ದರು.

ಈ ಸಂದರ್ಭದಲ್ಲಿ ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ, ಕಿತ್ತೂರು ಕ್ಷೇತ್ರದ ಶಾಸಕ ಬಾಬಾಸಾಹೇಬ ಪಾಟೀಲ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮೃಣಾಲ್ ಶುಗರ್ಸ್ ಮಾಲೀಕ ಮೃಣಾಲ್ ಹೆಬ್ಬಾಳಕರ್, ಕಾಂಗ್ರೆಸ್ ಮುಖಂಡರಾದ ದೀಪಕ್ ಚಿಂಚೂರೆ, ತವನಪ್ಪ ಅಷ್ಟಗಿ, ಬೆಳಗಾವಿ ಗ್ರಾಮೀಣ ಭಾಗದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

ಅಲ್ಲದೆ, ಬೈಲಹೊಂಗಲದ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರು, ಎಂ.ಕೆ.ಹುಬ್ಬಳ್ಳಿಯ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರು, ಸುತ್ತಮುತ್ತಲಿನ ಗ್ರಾಮಗಳ ರೈತರು, ರೈತ ಸಂಘಟನೆಗಳ ಮುಖಂಡರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಗಣ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಸ್ಥಳೀಯ ರೈತರ ನಿರೀಕ್ಷೆಗಳಿಗೆ ಸ್ಪಂದಿಸುವುದರ ಜತೆಗೆ ಉದ್ಯೋಗ ಸೃಷ್ಟಿ ಮತ್ತು ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ವೇಗ ನೀಡುವ ಆಶಯದೊಂದಿಗೆ ಶ್ರೀ ಮೃಣಾಲ್ ಶುಗರ್ಸ್‌ನ ಹೊಸ ಪಯಣ ಆರಂಭಗೊಂಡಿದೆ.

Related Articles

Back to top button