ಅಣ್ಣಾಸಾಹೇಬ ಜೊಲ್ಲೆ ಜನರ ಅಭಿಮಾನ, ಪ್ರೀತಿ ಮತ್ತು ವಿಶ್ವಾಸ ಗಳಿಸಿದ್ದಾರೆ – ಧನಂಜಯ ಮಹಾಡಿಕ
ಸಹಕಾರಿ, ಕೃಷಿ ಮತ್ತು ಸಮಾಜಮುಖಿ ಕೆಲಸ ಮಾಡುವ ಮೂಲಕ ಗಡಿ ಭಾಗದಲ್ಲಿ ಮಾಜಿ ಸಂಸದರ ಜನ ಸೇವೆ
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಸಹಕಾರಿ, ಕೃಷಿ ಮತ್ತು ಸಮಾಜಮುಖಿ ಕೆಲಸ ಮಾಡುವ ಮೂಲಕ ಜನರ ಅಭಿಮಾನ ಪ್ರೀತಿ ಮತ್ತು ವಿಶ್ವಾಸ ಗಳಿಸಿದ್ದಾರೆ ಎಂದು ಮಹಾರಾಷ್ಟ್ರದ ರಾಜ್ಯಸಭೆ ಸದಸ್ಯ ಧನಂಜಯ ಮಹಾಡಿಕ ಹೇಳಿದರು.
ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ (ಬಹುರಾಜ್ಯ) ಕಾರ್ಖಾನೆ ಆವರಣದಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ೬೨ ನೆಯ ಜನ್ಮದಿನದ ಕಾರ್ಯಕ್ರಮದಲ್ಲಿ ಜೊಲ್ಲೆಯವರನ್ನು ಸನ್ಮಾನಿಸಿ ಅವರು ಮಾತನಾಡಿದರು. ಅಣ್ಣಾಸಾಹೇಬ ಜೊಲ್ಲೆ ಅವರು ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆ ಕಂಡಿರುವ ಮೇಧಾವಿ. ದಿನಕ್ಕೊಂದು ಹೊಸ ಹೊಸ ಯೋಜನೆ ರೂಪಿಸುವ ಕಾರ್ಯಕ್ಷಮತೆ ಅವರಲ್ಲಿದೆ. ರಾಷ್ಟ್ರೀಯಕೃತ ಬ್ಯಾಂಕಿನ ವ್ಯವಸ್ಥೆ ಇಲ್ಲದ ಸ್ಥಳಗಳಲ್ಲಿ ಶ್ರೀ ಬಿರೇಶ್ವರ ಸಹಕಾರಿ ಸಂಘದ ಶಾಖೆಗಳನ್ನು ಸ್ಥಾಪಿಸಿ ಬಡ ಜನರಿಗೆ ಆರ್ಥಿಕ ಸೌಲಭ್ಯ ಒದಗಿಸಿರುವ ಕೀರ್ತಿ ಜೊಲ್ಲೆ ದಂಪತಿಗೆ ಸಲ್ಲುತ್ತದೆ. ಸಿಲಿಕಾನ್ ಸಿಟಿಯಲ್ಲಿರುವ ವ್ಯವಸ್ಥೆಗಳನ್ನು ಬೀರೇಶ್ವರ ಸಹಕಾರಿಯ ಶಾಖೆಗಳ ಮೂಲಕ ಗ್ರಾಮೀಣ ಭಾಗದಲ್ಲಿ ಸೇವೆಗೈಯಲು ಮುಂದಾದರು. ಈಗ ಬೀರೇಶ್ವರ ಸಹಕಾರಿಯನ್ನು ಹೆಮ್ಮರವಾಗಿ ಬೆಳೆಸಿದ್ದಾರೆ, ಬೆಳೆಸುತ್ತಿದ್ದಾರೆ. ಈ ಕಾರ್ಖಾನೆಯನ್ನು ಸಹ ಹೆಮ್ಮರವಾಗಿ ಬೆಳೆಸುತ್ತಾರೆ ಎನ್ನುವ ವಿಶ್ವಾಸ ಇದೆ. ರೈತರು ಅವರಿಗೆ ಸಹಕಾರ ಕೊಡಬೇಕು ಎಂದರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ಕಳೆದ ೪೦ ವರ್ಷಗಳಿಂದ ಸಮಾಜಮುಖಿ ಸೇವೆ ಮಾಡುತ್ತಿರುವ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ನಾಡಿನ ಜನರ ಆಶಿರ್ವಾದವೇ ಶ್ರೀರಕ್ಷೆಯಾಗಿದೆ. ಪ್ರತಿಯೊಬ್ಬರಿಗೂ ಸಾಲ ಸೌಲಭ್ಯ ಸಿಗಬೇಕೆಂದು ಸಹಕಾರಿ ರಂಗದ ಮೂಲಕ ಶ್ರೀ ಬೀರೇಶ್ವರ ಸಹಕಾರಿಯನ್ನು ಸ್ಥಾಪಿಸಿ ಇಂದು ಹೆಮ್ಮರವಾಗಿ ಬೆಳೆಸಿದ್ದಾರೆ. ಗಡಿ ಭಾಗದ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿ ಗಡಿ ಭಾಗದ ಜನರ ಹೃದಯ ಗೆದ್ದಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ನಗರದಲ್ಲಿ ರೈತ ಹುತಾತ್ಮ ಸ್ಮಾರಕ ನಿರ್ಮಾಣ ಮಾಡಬೇಕೆಂಬ ಇಲ್ಲಿನ ನಾಗರಿಕರ ಹಾಗೂ ರೈತರ ಬೇಡಿಕೆಯಾಗಿದೆ. ಜೊಲ್ಲೆ ಗ್ರುಪ್, ಹಾಲಶುಗರ್ ಕಾರ್ಖಾನೆ ಮತ್ತು ಶಾಸಕರ ಅನುದಾನದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು. ಜನಸೇವೆಯೊಂದಿಗೆ ನನ್ನ ಸಮಾಜ ಕಾರ್ಯ ಹೀಗೆಯೇ ನಿರಂತರವಾಗಿ ಮುಂದುವರೆಯಲಿದೆ. ನನ್ನ ಜನ್ಮದಿನಕ್ಕೆ ನನಗೆ ಶುಭಾಶಯ ಕೋರಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಚಿಕ್ಕೋಡಿಯ ಸಂಪಾದನ ಚರಮೂರ್ತಿಮಠದ ಸಂಪಾದನ ಸ್ವಾಮೀಜಿ, ಸ್ಥಳೀಯ ವಿರೂಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ, ಖಡಕಲಾಟದ ಕುಮಾರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ, ಹಂಚಿನಾಳ(ಕೆ.ಎಸ್.)ನ ಭಕ್ತಯೋಗಾಶ್ರಮದ ಮಹೇಶಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಕಿತ್ತೂರನ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಖಾನಾಪೂರದ ಮಾಜಿ ಶಾಸಕ ಅರವಿಂದ ಪಾಟೀಲ, ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ ಮಾತನಾಡಿದರು.
ಇದೇ ಸಂದರ್ಭದಲ್ಲಿ ೬೨ ನೆಯ ಜನ್ಮದಿನದ ನಿಮಿತ್ಯ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಹುಟ್ಟು ಹಬ್ಬ ಆಚರಣ ಸಮಿತಿ ಮತ್ತು ವಿವಿಧ ಗಣ್ಯರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಪ್ಪಾಸಾಹೇಬ ಕುಲಗೂಡೆ, ಪಂಚನಗೌಡ ದ್ಯಾಮನಗೌಡರ, ಜ್ಯೋತಿಪ್ರಸಾದ ಜೊಲ್ಲೆ, ಕಾರ್ಖಾನೆಯ ಉಪಾಧ್ಯಕ್ಷ ಪವನ ಪಾಟೀಲ, ನಿರ್ದೇಶಕರಾದ ಅಪ್ಪಾಸಾಹೇಬ ಜೊಲ್ಲೆ, ವಿಶ್ವನಾಥ ಕಮತೆ, ಅವಿನಾಶ ಪಾಟೀಲ, ರಾಮಗೊಂಡಾ ಪಾಟೀಲ, ಸುಕುಮಾರ ಪಾಟೀಲ, ಸಮಿತ ಸಾಸನೆ, ಜಯಕುಮಾರ ಖೋತ, ಪ್ರಕಾಶ ಶಿಂಧೆ, ಜಯವಂತ ಭಾಟಲೆ, ರಮೇಶ ಪಾಟೀಲ, ರಾವಸಾಹೇಬ ಫರಾಳೆ, ಶರದ ಜಂಗಟೆ, ವಿನಾಯಕ ಪಾಟೀಲ, ಸುಹಾಸ ಗೂಗೆ, ಗೀತಾ ಪಾಟೀಲ, ವೈಶಾಲಿ ನಿಕಾಡೆ, ಶ್ರೀಕಾಂತ ಬನ್ನೆ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ ಸೇರಿದಂತೆ ಕಾರ್ಖಾನೆಯ ಎಲ್ಲ ಸಿಬ್ಬಂದಿ, ಕಾರ್ಮಿಕರು, ನಾಗರಿಕರು ಇದ್ದರು. ಬಸವಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ರಮೇಶ ಪಾಟೀಲ ಮತ್ತು ವಿಜಯ ರಾವುತ ಕಾರ್ಯಕ್ರಮ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ