*ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾದ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ದಂಪತಿ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ, ವಿವಿಧ ರೈಲು ಮಾರ್ಗಗಳನ್ನು ಪ್ರಾರಂಭಿಸಲು ಮತ್ತು ಕೆಲವು ನಿಲ್ದಾಣಗಳಲ್ಲಿ ಎಕ್ಸಪ್ರೆಸ್ ರೈಲು ನಿಲುಗಡೆ ಮಾಡಲು ಮನವಿ ಮಾಡಿದರು.
ಬಹುದಿನಗಳಿಂದ ಬಾಕಿ ಉಳಿದಿರುವ ಕರಾಡ- ನಿಪ್ಪಾಣಿ -ಬೆಳಗಾವಿ ರೈಲು ಮಾರ್ಗದ ಕಾಮಗಾರಿಯನ್ನು ಆರಂಭಿಸಿ ಪೂರ್ಣಗೊಳಿಸುವಂತೆ ಚಿಕ್ಕೋಡಿ ಲೋಕಸಭೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಮನವಿ ಮಾಡಿದರು. ಈ ರೈಲು ಮಾರ್ಗ ಪೂರ್ಣಗೊಂಡರೆ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಇದರೊಂದಿಗೆ, ಈ ಕೆಳಗಿನಂತೆ ಇತರ ಮಾರ್ಗಗಳನ್ನು ಪ್ರಾರಂಭಿಸಲು ವಿನಂತಿಸಿದರು.
ಕರಾಡ -ನಿಪ್ಪಾಣಿ-ಬೆಳಗಾವಿ
ಶೇಡಬಾಳ -ಅಥಣಿ -ವಿಜಯಪುರ
ಬೆಳಗಾವಿ -ಕೊಲ್ಲಾಪುರ
ಬೆಳಗಾವಿ -ಕಿತ್ತೂರು -ಧಾರವಾಡ
ಹಾಸನ- ಮಂಗಳೂರು ಮಾರ್ಗ ಆರಂಭಿಸುವಂತೆ ಮನವಿ ಮಾಡಿದರು.
ಇದೇ ಸಮಯದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬರುವ ಕೆಲವು ನಿಲ್ದಾಣಗಳಲ್ಲಿ ಈ ಕೆಳಕಂಡ ಎಕ್ಸ್‌ಪ್ರೆಸ್ ರೈಲುಗಳು ನಿಲುಗಡೆಯಾಗಬೇಕೆಂದು ವಿನಂತಿಸಿದರು.
ಹುಬ್ಬಳ್ಳಿ -ದಾದರ ಎಕ್ಸ್‌ಪ್ರೆಸ್ (ಉಗಾರನಲ್ಲಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ)
ಶರಾವತಿ ಎಕ್ಸ್‌ಪ್ರೆಸ್ ಮತ್ತು ಪುದುಚೇರಿ ಎಕ್ಸ್‌ಪ್ರೆಸ್ (ಶೆಡಬಾಳ ರೈಲು ನಿಲ್ದಾಣನದಲ್ಲಿ ನಿಲುಗಡೆ)
ಅಜ್ಮೀರ್ ಎಕ್ಸ್‌ಪ್ರೆಸ್ ಮತ್ತು ಹರಿಪ್ರಿಯಾ ಎಕ್ಸ್‌ಪ್ರೆಸ್ (ಕುಡಚಿ ಮತ್ತು ರಾಯಬಾಗ ಚಿಕೋಡಿ ರೈಲ್ವೆನಿಲ್ದಾಣಗಳಲ್ಲಿ ನಿಲುಗಡೆ) ಕುರಿತು ಮನವಿ ಸಲ್ಲಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸಚಿವರು, ಶೀಘ್ರದಲ್ಲೇ ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯ ಉಪಾಧ್ಯಕ್ಷರಾದ ಡಾ.ಅಜೀತ ಘೋಪಛಡೆ, ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷರಾದ ಸಂಜಯ ಪಾಟೀಲ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ