*ರುದ್ರಣ್ಣವರ್ ಆತ್ಮಹತ್ಯೆಯಲ್ಲ, ಕೊಲೆ ಎಂದ ಅನಾಮಧೇಯ ಪತ್ರ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಡಿಎ (ದ್ವಿತೀಯ ದರ್ಜೆ ಸಹಾಯಕ) ರುದ್ರೇಶ್ ಯಡವಣ್ಣವರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಇದು ಆತ್ಮಹತ್ಯೆಯಲ್ಲ ಕೊಲೆ. ಈ ಕೇಸ್ ಮುಚ್ಚಿಹಾಕಬಾರದು ಎಂದು ಉಲ್ಲೇಖಿಸಿರುವ ಅನಾಮಧೇಯ ಪತ್ರವೊಂದು ದೊರೆತಿದೆ.
ಜಿಲ್ಲೆಯ ತಹಸೀಲ್ದಾರ್ ಕಚೇರಿಯಲ್ಲಿ ಎಸ್‌ಡಿಎ ರುದ್ರೇಶ್ ಆತ್ಮಹತ್ಯೆ ಪ್ರಕರಣದ ಆರೋಪಿಗಳಾಗಿರುವ ಎ1 ತಹಸೀಲ್ದಾರ್ ಬಸವರಾಜ ನಾಗರಾಳ, ಎ2 ಅಶೋಕ ಕಬ್ಬಲಿಗೇರ್, ಎ3 ಸೋಮುಗೆ ಜಾಮೀನು ಸಿಕ್ಕಿದೆ. ಇದರ ಬೆನ್ನಲ್ಲೇ ಅನಾಮಧೇಯ ಪತ್ರ ಅಧಿಕಾರಿಗಳ ಕಚೇರಿ ತಲುಪಿದೆ. ರಾಜ್ಯಪಾಲರು, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ ಸೇರಿದಂತೆ ಪ್ರಕರಣದ ತನಿಖಾಧಿಕಾರಿಗಳಿಗೆ ಪೋಸ್ಟ್ ಮೂಲಕ ಅನಾಮಧೇಯ ಪತ್ರ ತಲುಪಿದೆ.
ಪತ್ರದಲ್ಲಿ ಬೆಳಗಾವಿ ತಹಶೀಲ್ದಾರ ಕಚೇರಿಯ ಕ್ಲಾರ್ಕ್ ರುದ್ರಣ್ಣ ಯಡವಣ್ಣವರ ಇವರ ಕೊಲೆಗೆ ತಹಶೀಲ್ದಾರ್ ಜೀಪ್ ಡ್ರೈವರ್ ಯಲ್ಲಪ್ಪ ಬಡಸದ ಇವನೇ ಮೂಲ ಸೂತ್ರಧಾರ. ತಹಶೀಲ್ದಾರ್ ಜೀಪ್ ಚೆಕ್ ಮಾಡಿದರೆ ಎಲ್ಲಾ ಸತ್ಯ ಸಿಗುತ್ತದೆ. ಅದು ಸೂಸೈಡ್ ಎನ್ನುತ್ತಿದ್ದಾರೆ. ಆದರೆ ಅದು ಸೂಸೈಡ್ ಅಲ್ಲ. ಯಲ್ಲಪ್ಪನ ವಿಚಾರಣೆ ಮಾಡಿದರೆ ಕೊಲೆ ರಹಸ್ಯ ಹೊರ ಬರುತ್ತದೆ. ಸತ್ತವನಿಗೆ ನ್ಯಾಯ ಸಿಗಬೇಕು. ಕೇಸ್ ಮುಚ್ಚಿ ಹಾಕಬಾರದು ಎಂದು ಬರೆಯಲಾಗಿದೆ.
ಈ ಅನಾಮಧೇಯ ಪತ್ರದಲ್ಲಿರುವ ಮಾಹಿತಿಯನ್ನು ಕಂಡು ಪೊಲೀಸರು ಶಾಕ್ ಆಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ