ಪ್ರಗತಿವಾಹಿನಿ ಸುದ್ದಿ, ಎಂ.ಕೆ.ಹುಬ್ಬಳ್ಳಿ – ತೀವ್ರ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿದ್ದರಿಂದ ಆತನ ಕುಟುಂಬಸ್ಥರು ಸೈಕಲ್ ಮೇಲೆ ಶವ ಸಾಗಿಸಿ ಅಂತ್ಯಸಂಸ್ಕಾರ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿಯಲ್ಲಿ ಘಟನೆ ನಡೆದಿದೆ.
2 ದಿನದಿಂದ ಜ್ವರದಿಂದ ಬಳಲುತ್ತಿದ್ದ 70 ವರ್ಷದ ವ್ಯಕ್ತಿಯನ್ನು ಶನಿವಾರ ಸಂಜೆ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದಿದ್ದರು. ಆದರೆ ಕೊರೋನಾ ಶಂಕೆಯ ಹಿನ್ನೆಲೆಯಲ್ಲಿ ಖಾಸಗಿ ವೈದ್ಯರು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರು.
ಆದರೆ ಶನಿವಾರ ರಾತ್ರಿಯೇ ಆತ ಮೃತಪಟ್ಟಿದ್ದಾನೆ. ಈ ವಿಷಯವನ್ನು ಕುಟುಂಬಸ್ಥರು ಆರೋಗ್ಯ ಇಲಾಖೆಗೆ ತಿಳಿಸಿ, ಅಂಬುಲನ್ಸ್ ಕಳಿಸಲು ಕೋರಿದ್ದರೆನ್ನಲಾಗಿದೆ. ಆದರೆ ಅಂಬುಲನ್ಸ್ ಬಂರಲೇ ಇಲ್ಲ. ಕೊರೋನಾ ಶಂಕೆ ಇರುವ ಹಿನ್ನೆಲೆಯಲ್ಲಿ ಗ್ರಾಮಸ್ಥರೂ ನೆರವಿಗೆ ಬರಲಿಲ್ಲ. ಹಾಗಾಗಿ ಕುಟುಂಬಸ್ಥರು ಶವವನ್ನು ಪ್ಲಾಸ್ಟಿಕ್ ನಲ್ಲಿ ಕಟ್ಟಿ ಸೈಕಲ್ ಮೇಲೆ ಹೇರಿಕೊಂಡು ಹೋಗಿದ್ದಾರೆ. ಸಾಗಿಸುವವರು ಮೈ ತುಂಬ ಪ್ಲ್ಯಾಸ್ಟಿಕ್ ಸುತ್ತಿಕೊಂಡಿದ್ದಾರೆ.
ಸೈಕಲ್ ಮೇಲೆ ಶವ ಸಾಗಿಸುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ.
ಸಚಿವರ ಪ್ರತಿಕ್ರಿಯೆ
ಘಟನೆ ಕುರಿತು ಜಲಸಂಪನ್ಮೂಲ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಕಿತ್ತೂರು ತಾಲ್ಲೂಕಿನ ಎಂಕೆ ಹುಬ್ಬಳ್ಳಿಯಲ್ಲಿ ಮೃತವ್ಯಕ್ತಿಯೊಬ್ಬರ ಶವವನ್ನು ಸೈಕಲ್ ಮೇಲೆ ತೆಗೆದುಕೊಂಡು ಹೋಗಿ ಶವಸಂಸ್ಕಾರ ಮಾಡಿರುವ ವರದಿಯನ್ನು ಗಮನಿಸಿದ್ದೇನೆ. ನಾಗರಿಕ ಸಮಾಜದಲ್ಲಿರುವ ನಾವು ಸದಾ ಹೃದಯವಂತಿಕೆಯಿಂದ ಜೀವಿಸಬೇಕು. ಮೃತರ ಸಂಸ್ಕಾರವನ್ನೂ ಗೌರವಯುತವಾಗಿ ಮಾಡಬೇಕು. ಮಹಾಮಾರಿ ಕೊರೋನಾ ಸೋಂಕಿನಿಂದಾಗಲೀ, ಬೇರೆ ಯಾವುದೇ ರೀತಿಯ ಅನಾರೋಗ್ಯದಿಂದ ಮೃತರಾದ ವ್ಯಕ್ತಿಗಳ ಅಂತ್ಯಕ್ರಿಯೆಗೆ ಅಧಿಕಾರಿಗಳು ಸೂಕ್ತ ಸಹಕಾರ ನೀಡಬೇಕು. ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ; ಮುನ್ನೆಚ್ಚರಿಕೆ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಅಂತ್ಯಕ್ರಿಯೆ ನಡೆಸಲು ಏನಾದರೂ ತೊಂದರೆಗಳು ಆದ ಸಂದರ್ಭದಲ್ಲಿ ಅದಕ್ಕಾಗಿಯೇ ಒಂದು ದೂರವಾಣಿ ಸಂಖ್ಯೆ ರೂಪಿಸಿ ; ಅದಕ್ಕಾಗಿ ಅಧಿಕಾರಿಯೊಬ್ಬರನ್ನು ನಿಯೋಜಿಸಲು ಆದೇಶಿಸಿದ್ದೇನೆ. ಮಂದಿನ ದಿನಗಳಲ್ಲಿ ಈ ರೀತಿಯ ಅಮಾನವೀಯ ಘಟನೆ ನಡೆದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗೆ ಎಚ್ಚರಿಕೆ ನೀಡಿದ್ದೇನೆ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ