ಪ್ರಗತಿವಾಹಿನಿ ಸುದ್ದಿ, ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ ಒಡ್ಡಲಾಗಿದ್ದು ಈ ಸಂಬಂಧ ರಾಜಸ್ಥಾನದ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಧಕದ್ರಂ ಬಿಷ್ಣೋಯ್ ಎಂದು ಗುರುತಿಸಲಾಗಿದೆ. ಈತ ರಾಜಸ್ಥಾನದ ಜೋಧಪುರ ನಿವಾಸಿಯಾಗಿದ್ದಾನೆ. ಮಾರ್ಚ್ 23 ರಂದು ಸಲ್ಮಾನ್ ಖಾನ್ ಅವರ ಕಚೇರಿಗೆ ಮತ್ತೊಂದು ಬೆದರಿಕೆ ಇಮೇಲ್ ಕಳುಹಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಾರಿ ‘ಅದೃಷ್ಟ’ ಎಂಬ ಹೆಸರಿನಲ್ಲಿ ಬೆದರಿಕೆ ಒಡ್ಡಲಾಗಿತ್ತು. ಈ ಸಂಬಂಧ ಸಲ್ಮಾನ್ ನೀಡಿದ ದೂರಿನನ್ವಯ ಮುಂಬೈ ಪೊಲೀಸರು ತನಿಖೆ ನಡೆಸಿದ್ದು ಕೊನೆಗೂ ಆರೋಪಿಯನ್ನು ಪತ್ತೆಹಚ್ಚಲಾಗಿದೆ.
ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರಿಗೂ ಇದೇ ರೀತಿಯಲ್ಲಿ ಬೆದರಿಕೆ ಹಾಕಲಾಗಿತ್ತು. “ಇದು ನಿಮ್ಮ ಸರದಿ, ಸಿದ್ಧರಾಗಿರಿ… ಯಾವಾಗಲಾದರೂ ಜೋಧ್‌ಪುರಕ್ಕೆ ಬನ್ನಿ, ಬಿಷ್ಣೋಯ್ ಗ್ಯಾಂಗ್ ನಿಮ್ಮನ್ನು ನೋಡುತ್ತಿರುತ್ತದೆ” ಎಂದು ಇಮೇಲ್ ಸಂದೇಶದಲ್ಲಿ ಹೇಳಲಾಗಿತ್ತು.
ಈ ಹಿಂದೆ ನಟನಿಗೆ ಇದೇ ರೀತಿಯ ಬೆದರಿಕೆ ಇಮೇಲ್ ಬಂದಿತ್ತು. ಅಲ್ಲದೆ ಅವರ ಫಾರ್ಮ್ ಹೌಸ್ ಒಂದರ ಸಿಬ್ಬಂದಿ ಜತೆ ಸ್ನೇಹ ಬೆಳೆಸಿ ಅವರ ಹತ್ಯೆಗೆ ಸಂಚು ರೂಪಿಸಿದ್ದಾಗಿ ಪ್ರಕರಣ ದಾಖಲಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ