ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭೆಗೆ ನಡೆಯಲಿರುವ ಉಪಚುನಾವಣೆಯ ದಿನಾಂಕ ಸೋಮವಾರ ಅಥವಾ ಮಂಗಳವಾರ ಘೋಷಣೆಯಾಗಲಿದೆ ಎನ್ನುವ ಮಾಹಿತಿ ಬಂದಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ಚುನಾವಣೆ ಸಿದ್ಧತೆಯನ್ನು ಚುರುಕುಗೊಳಿಸಿವೆ. ಜೆಡಿಎಸ್ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದೆ.
ಸಧ್ಯಕ್ಕಿರುವ ಮಾಹಿತಿ ಪ್ರಕಾರ ಬಿಜೆಪಿಯಲ್ಲಿ 30 ಆಕಾಂಕ್ಷಿಗಳ ಹೆಸರು ಸಲ್ಲಿಕೆಯಾಗಿದೆ. ಕಾಂಗ್ರೆಸ್ ನಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಸತೀಶ್ ಜಾರಕಿಹೊಳಿ ಮತ್ತು ಮಾಜಿ ಸಚಿವ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹೆಸರು ಮುಂಚೂಣಿಯಲ್ಲಿದೆ.
ಇಬ್ಬರೂ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಪಕ್ಷದ ಹೈಕಮಾಂಡ್ ಕೂಡ ಇವರಿಬ್ಬರಲ್ಲೇ ಒಬ್ಬರನ್ನು ಅಂತಿಮಗೊಳಿಸಬೇಕೆನ್ನುವ ನಿರ್ಧಾರಕ್ಕೆ ಬಂದಂತಿದೆ. ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವುದನ್ನು ನೋಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು.
ಪ್ರಕಾಶ ಹುಕ್ಕೇರಿ ಹಿಂದೊಮ್ಮೆ, ಸುರೇಶ ಅಂಗಡಿ ಕುಟುಂಬದಿಂದ ಯಾರಾದರೂ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಅವರ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದು ಅವರಿಗೆ ತೊಡಕಾಗಿ ಪರಿಣಮಿಸಿದೆ. ಅವರ ಈ ಹೇಳಿಕೆಗೆ ಸತೀಶ್ ಜಾರಕಿಹೊಳಿ ಆಕ್ರೋಶಗೊಂಡಿದ್ದರು.
ಅನಿಲ ಲಾಡ್ ಕೂಡ ಟಿಕೆಟ್ ಕೊಟ್ಟರೆ ಸ್ಪರ್ಧಿಸಲು ಸಿದ್ದ ಎಂದಿದ್ದಾರೆ. ಇವರೆಲ್ಲರ ಜೊತೆಗೆ ನಿವೃತ್ತ ಅಧಿಕಾರಿ ಜಿ.ಎಸ್.ನಾಯಕ್ ಟಿಕೆಟ್ ಪಡೆಯಲು ತೀವ್ರ ಕಸರತ್ತು ನಡೆಸಿದ್ದಾರೆ. ಅವರು ಈ ಹಿಂದೆ ಸವದತ್ತಿಯಿಂದ ವಿಧಾನಸಭೆಗೆ ಸ್ಪರ್ಧಿಸಲು ಪ್ರಯತ್ನಿಸಿದ್ದರು.ಆದರೆ ಆಗ ಟಿಕೆಟ್ ಸಿಕ್ಕಿರಲಿಲ್ಲ.
ರಾಯಬಾಗ ಮೂಲದವರಾದ ಜಿ.ಎಸ್.ನಾಯಕ್ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕಾಂಗ್ರೆಸ್ ನಿಂದ ಟಿಕೆಟ್ ಕೊಟ್ಟರೆ ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದು, ಹೈಕಮಾಂಡ್ ಮಟ್ಟದಲ್ಲಿ ತೀವ್ರ ಕಸರತ್ತು ನಡೆಸಿದ್ದಾರೆ.
ಈಚೆಗೆ ಸತೀಶ್ ಜಾರಕಿಹೊಳಿ , ಕಾಂಗ್ರೆಸ್ ನಿಂದ ಸಾಮಾನ್ಯ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ನೀಡಲೂಬಹುದು ಎಂದು ಹೇಳಿರುವುದು ಜಿ.ಎಸ್.ನಾಯಕ್ ಅವರನ್ನು ಉದ್ದೇಶಿಸಿ ಹೇಳಿರಬಹುದೇ ಎನ್ನುವ ಚರ್ಚೆಯೂ ನಡೆದಿದೆ.
ಈ ಮಧ್ಯೆ ಪ್ರಗತಿವಾಹಿನಿ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಟಿಕೆಟ್ ಕೇಳಿಲ್ಲ. ನನ್ನ ಮತ್ತು ಪ್ರಕಾಶ ಹುಕ್ಕೇರಿ ಸೇರಿದಂತೆ 3 -4 ಜನರ ಹೆಸರು ಇಲ್ಲಿಂದ ಶಿಫಾರಸ್ಸಾಗಿದೆ. ಹೈಕಮಾಂಡ್ ಮಟ್ಟದಲ್ಲಿ ಇನ್ನೂ ಯಾರಾದರೂ ಪ್ರಯತ್ನ ನಡೆಸಿರಬಹುದು. ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಗೆಲ್ಲಿಸುತ್ತೇವೆ. ಈಗಾಗಲೆ ಸಂಘಟನಾತ್ಮಕ ಕೆಲಸ ನಡೆದಿದೆ. ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಗೆ ಉತ್ತಮ ವಾತಾವರಣವಿದೆ ಎಂದು ತಿಳಿಸಿದರು.
ಪ್ರಕಾಶ ಹುಕ್ಕೇರಿ ಮಾತನಾಡಿ, ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದೇನೆ. ಪಕ್ಷ ಟಿಕೆಟ್ ಕೊಟ್ಟರೆ ಕಣಕ್ಕಿಳಿಯುತ್ತೇನೆ. ನನ್ನ ಪ್ರಯತ್ನ ಮಾಡುತ್ತಿದ್ದೇನೆ ಎಂದಿದ್ದಾರೆ.
ಬೆಳಗಾವಿಯಲ್ಲಿ ಚುನಾವಣೆ ಆಯುಕ್ತರ ಸಭೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ