
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಗೆ ಕಚೇರಿಗಳನ್ನು ತನ್ನಿ ಎನ್ನುವ ಬೇಡಿಕೆಯ ಮಧ್ಯೆಯೇ ಇಲ್ಲಿಂದ ನಿರಂತರವಾಗಿ ಒಂದೊಂದಾಗಿ ಕಚೇರಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಈ ಸರಣಿಗೆ ಈಗ ಮತ್ತೊಂದು ಸೇರ್ಪಡೆಯಾಗಿದೆ.
ಬೆಳಗಾವಿಯಲ್ಲಿರುವ ಭಾಷಾ ಅಲ್ಪಸಂಖ್ಯಾತರ ಆಯುಕ್ತರ ಕಚೇರಿ (ಸಿಎಲ್ಎಂ)ಯನ್ನು ಚೆನ್ನೈನಲ್ಲಿರುವ ಪ್ರಾದೇಶಿಕ ಕಚೇರಿಯೊಂದಿಗೆ ವಿಲೀನಗೊಳಿಸುವಂತೆ ನವದೆಹಲಿಯ ಅಲ್ಪಸಂಖ್ಯಾತರ ಇಲಾಖೆ ಆದೇಶಿಸಿದೆ.
ಏಪ್ರಿಲ್ 1ರಿಂದಲೇ ಸ್ಥಳಾಂತರ ಜಾರಿಗೊಳಿಸುವಂತೆ ಕಳೆದ ಫೆಬ್ರವರಿಯಲ್ಲೇ ಆದೇಶವಾಗಿದೆ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಇನ್ನೂ ಪ್ರಕ್ರಿಯೆ ನಡೆಯಲಿಲ್ಲ.
ಈ ಕಚೇರಿಯನ್ನು ಯಾವುದೇ ಕಾರಣದಿಂದ ಸ್ಥಳಾಂತರಿಸದಂತೆ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಸಮಿತಿಯ ಕಾರ್ಯದರ್ಶಿ ಕಿರಣ ಜಾಧವ ನೇತೃತ್ವದಲ್ಲಿ ಸೋಮವಾರ ಮನವಿ ಸಲ್ಲಿಸಲಾಗಿದೆ. ಕಿರಣ ಜಾಧವ ಮನವಿಯನ್ನು ಕೇಂದ್ರ ಅಲ್ಪಸಂಖ್ಯೆತರ ಇಲಾಖೆ ಸಚಿವ ಮುಕ್ತಾರ ಅಬ್ಬಾಸ್ ನಖ್ವಿ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಕರ್ನಾಟಕ ಸರಕಾರದ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೇರಿದಂತೆ ಸಂಬಂಧಿಸಿದವರೆಲ್ಲರಿಗೆ ಮನವಿಯನ್ನು ಕಳುಹಿಸಿದ್ದಾರೆ.
ವಿಜಯ ಕದಂ, ನಿತಿನ್ ಸಲಗರ್, ಮಹೇಶ ಕಟಾವಕರ್, ಭಾವು ಮುಸಾಲೆ, ಜಯಂತ ಭಾಲೆಕರ್, ಸತೀಶ್ ಲೋಕಲೆ, ಆದಿತ್ಯ ಜೋಶಿ, ಕೋಮಲ್ ಬುಲಬುಲೆ, ಶೇಷ ಜವಳಕರ್, ಅಮರ್ ಕೋಪರ್ಡೆ ಮೊದಲಾದವರು ಮನವಿ ಸಲ್ಲಿಸುವ ಸಂದರ್ಭದಲ್ಲಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ