ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪೋಕ್ಸೋ ಕಾಯ್ದೆ ಅಡಿಯಲ್ಲಿ ಬೆಳಗಾವಿಯಲ್ಲಿ ಶಿಕ್ಷೆ ವಿಧಿಸುವ ಸರಣಿ ಮುಂದುವರಿದಿದ್ದು ಶುಕ್ರವಾರ ಮತ್ತೋರ್ವನಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಬಿದ್ದಿದೆ.
ಹಿಡಕಲ್ ಗ್ರಾಮದ ಶ್ರೀಶೈಲ ಬಸವರಾಜ ಬಿಳ್ಳೂರ ಈತನು 2017ರಲ್ಲಿ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ 15 ವರ್ಷ ಬಾಲಕಿಯನ್ನು ಮದುವೆಯಾಗುವುದಾಗಿ ಹೇಳಿ ಒತ್ತಾಯದಿಂದ ಬೆಂಗಳೂರಿಗೆ ಅಪಹರಿಸಿಕೊಂಡು ಹೋಗಿ ಮದುವೆಯಾಗಿ ಬಾಡಿಗೆ ಮನೆ ಮಾಡಿಕೊಂಡು ಪದೇ ಪದೆ ಅತ್ಯಾಚಾರ ಎಸಗಿದ್ದಾನೆ.
ಪ್ರಕರಣವನ್ನು ಬೆಳಗಾವಿಯ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ-01ಕ್ಕೆ ತನಿಖಾಧಿಕಾರಿ ಸತೀಶ ಎಸ್ ಚಿಟಗುಬ್ಬಿ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ನ್ಯಾಯಾಧೀಶರಾದ ಸಿ. ಎಮ. ಪುಷ್ಪಲತಾ ಇವರು ಪ್ರಕರಣವನ್ನು ವಿಚಾರಣೆ ಮಾಡಿ, ಒಟ್ಟು 23 ಸಾಕ್ಷಿಗಳ ವಿಚಾರಣೆ ಮೇಲಿಂದ ಹಾಗೂ 49 ದಾಖಲೆಗಳು ಹಾಗೂ 05 ಮುದ್ದೆಮಾಲಗಳ ಆಧಾರದ ಮೇಲಿಂದ ಆರೋಪಿ ಶ್ರೀಶೈಲ ಬಸವರಾಜ ಬಿಳ್ಳೂರ, ವಯಸ್ಸು: 28 ವರ್ಷ, ಸಾ: ಹಿಡಕಲ್ ಗ್ರಾಮ, ಮಾಳಿ ತೋಟ, ತಾ: ರಾಯಭಾಗ, ಜಿಲ್ಲಾ ಬೆಳಗಾವಿ ಇವನ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ತೀರ್ಪು ನೀಡಿ, ಆರೋಪಿತನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ & ರೂ.15,000/- ರೂಪಾಯಿ ದಂಡ ವಿಧಿಸಿ ಪ್ರಕರಣದ ತೀರ್ಪು ನೀಡಿದರು.
ಪೋಕ್ರೋ ನ್ಯಾಯಾಲಯದಲ್ಲಿ ಪ್ರಕರಣ ಆದೇಶ ಆಗಿದ್ದು, ನೊಂದ ಬಾಲಕಿಯ ತಾಯಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಒಂದು ಲಕ್ಷ ರೂ. ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಸರಕಾರದ ಪರವಾಗಿ ಆರ್.ಜಿ.ದೇವರಡ್ಡಿ, ಸರ್ಕಾರಿ ಅಭಿಯೋಜಕರು, 3ನೇ ಅಧಿಕ ಜಿಲ್ಲಾ ಮತ್ತು ಸತ್ರ (ಎಸ್.ಸಿ.ಎಸ್.ಟಿ) ನ್ಯಾಯಾಲಯ, ಬೆಳಗಾವಿ ಮತ್ತು ಎಲ್. ವಿ ಪಾಟೀಲ, ವಿಶೇಷ ಸರ್ಕಾರಿ ಅಭಿಯೋಜಕರು, ಬೆಳಗಾವಿ ಇವರು ಹಾಜರಾಗಿ ಪ್ರಕರಣವನ್ನು ನಡೆಸಿ ಹಾಗೂ ವಾದ ಮಂಡಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ