ಬಿಜೆಪಿ ಸರಕಾರದಿಂದ ಮತ್ತೊಂದು ಶಾಕ್
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು-
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ವಿಶ್ವಾಸ ಕಳೆದುಕೊಂಡು ಬಿಜೆಪಿ ಸರಕಾರ ಅಧಿಕಾರಕ್ಕೇರಿದೆ. ಸೋಮವಾರ ವಿಶ್ವಾಸಮತವನ್ನೂ ಗೆದ್ದುಕೊಂಡಿದೆ.
ತಾವು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಮುನ್ನವೇ ಘೋಷಿಸಿದ್ದಾರೆ. ಸೋಮವಾರ ವಿಶ್ವಾಸಮತ ಯಾಚನೆ ವೇಳೆಯೂ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ.
ಆದರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಳ್ಳುವ ಸ್ವಲ್ಪ ಮೊದಲು ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರ ಜುಲೈ ತಿಂಗಳಲ್ಲಿ ಮಾಡಿದ್ದ ವರ್ಗಾವಣೆ ಆದೇಶಗಳನ್ನೆಲ್ಲ ತಡೆ ಹಿಡಿಯಲು ಆದೇಶಿಸಿದ್ದರು. ಜೊತೆಗೆ ಜುಲೈ ತಿಂಗಳಲ್ಲಿ ಮಂಜೂರು ಮಾಡಿದ್ದ ಕಾಮಗಾರಿಗಳನ್ನೆಲ್ಲ ತಡೆ ಹಿಡಿಯಲು ನಿರ್ದೇಶನ ನೀಡಿದ್ದರು.
ನಿಯೋಜಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆಯಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ ಅಧೀನ ಅಧಿಕಾರಿಗಳಿಗೆಲ್ಲ ಈ ಸಂಬಂಧ ಸುತ್ತೋಲೆ ರವಾನಿಸಿದ್ದರು.
ಈಗ ಮತ್ತೊಂದು ಆದೇಶ
ಇದೀಗ ರಾಜ್ಯ ಬಿಜೆಪಿ ಸರಕಾರ ಹೊರಡಿಸಿರುವ ಮತ್ತೊಂದು ಆದೇಶ ಹೊರಬಿದ್ದಿದೆ. ಈ ಆದೇಶ ಕೂಡ 26ರಂದೇ ಹೊರಬಿದ್ದಿದೆ. ಸಮ್ಮಿಶ್ರ ಸರಕಾರ ಕಳೆದ 20ರಂದು ರಾಜ್ಯದ 13 ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು.
ಬೆಂಗಳೂರು ವಿಶ್ವವಿದ್ಯಾಲಯಕ್ಕೆ 6, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ 6, ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ 5, ಮೈಸೂರು ವಿಶ್ವವಿದ್ಯಾಲಯಕ್ಕೆ 6, ಮಂಗಳೂರು ವಿಶ್ವವಿದ್ಯಾಲಯಕ್ಕೆ 6, ತುಮಕೂರು ವಿಶ್ವವಿದ್ಯಾಲಯಕ್ಕೆ 6, ದಾವಣಗೆರೆ ವಿಶ್ವವಿದ್ಯಾಲಯಕ್ಕೆ 5, ಕರ್ನಾಟಕ ವಿಶ್ವವಿದ್ಯಾಲಯಕ್ಕೆ 6, ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ 6, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ 3, ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ 6, ವಿಜಯನಗರ ವಿಶ್ವವಿದ್ಯಾಲಯಕ್ಕೆ 5, ಕುವೆಂಪು ವಿಶ್ವವಿದ್ಯಾಲಯಕ್ಕೆ 5 ಜನರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು.
ಇದರಲ್ಲಿ ಬಹುತೇಕ ಸದಸ್ಯರು ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಕಾರ್ಯಕರ್ತರಾಗಿದ್ದರು. ಈ ಸದಸ್ಯರಲ್ಲಿ ಕೆಲವರು ಈಗಾಗಲೆ ಚಟುವಟಿಕೆ ಆರಂಭಿಸಿದ್ದರು. ಕೆಲವೆಡೆ ಒಂದೆರಡು ದಿನದಲ್ಲಿ ಸಿಂಡಿಕೇಟ್ ಮೀಟಿಂಗ್ ಆಯೋಜಿಸಿ ನೂತನ ಸದಸ್ಯರನ್ನು ಆಹ್ವಾನಿಸಲಾಗಿತ್ತು.
ಆದರೆ ಈ ಎಲ್ಲ ನೇಮಕವನ್ನು ಪ್ರಸ್ತುತ ಸರಕಾರ ರದ್ದುಪಡಿಸಿದೆ. ಬಿಜೆಪಿ ಸರಕಾರ ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಕರ್ತರನ್ನೇ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕಮಾಡುವ ಸಾಧ್ಯತೆ ಇದೆ. ಯಾವುದೇ ಸರಕಾರ ಬಂದಾಗ ಹೊಸದಾಗಿ ನೇಮಿಸುವ, ತಮ್ಮ ಪಕ್ಷಕ್ಕೆ ನಿಷ್ಠರಾಗಿರುವವರನ್ನೇ ನೇಮಕ ಮಾಡುವ ಸಂಪ್ರದಾಯ ಬಂದಿರುವುದನ್ನು ಗಮನಿಸಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ