
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಟಾರ್ ಆಂಕರ್ ಅನುಶ್ರೀ ನನ್ನ ಮಗಳು ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಪ್ರತ್ಯಕ್ಷನಾಗಿದ್ದು, ಮಗಳು ಕೊನೇಗಾಲದಲ್ಲಿ ನನ್ನನ್ನು ಒಂದು ಬಾರಿ ಬಂದು ನೋಡಲಿ ಎಂದು ಸಂಪತ್ ಕುಮಾರ್ ಎನ್ನುವವರು ಕಣ್ಣೀರಿಟ್ಟಿದ್ದಾರೆ.

ಸಂಪತ್ ಕುಮಾರ್ ಎಂಬ ವ್ಯಕ್ತಿಯೋರ್ವರು ಪಾರ್ಶ್ವವಾಯುವಿನಿಂದ ಬಳಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ತಾನು ಅನುಶ್ರೀ ತಂದೆ, ಆಕೆ ಚಿಕ್ಕಂದಿನಲ್ಲಿರುವಾಗಲೇ ಸಣ್ಣ ವಿಚಾರವಾಗಿ ಕುಟುಂಬದಲ್ಲಿ ಮನಸ್ತಾಪವಾಗಿ ಕುಟುಂಬ ಬೇರ್ಪಟ್ಟಿತ್ತು. ನನಗೆ ಮಗಳನ್ನು ಡ್ಯಾನ್ಸ್ ಕ್ಲಾಸಿಗೆ ಕಳುಹಿಸಲು ಇಷ್ಟವಿರಲಿಲ್ಲ. ಆದರೆ ಅನುಶ್ರೀ ತಾಯಿಗೆ ಮಗಳನ್ನು ಡ್ಯಾನ್ಸ್ ಕ್ಲಾಸಿಗೆ ಕಳುಹಿಸಬೇಕು ಎಂದಿತ್ತು. ಇದೇ ವಿಚಾರ ಜಗಳಕ್ಕೆ ಕಾರಣವಾಗಿತ್ತು. ಮಗಳು ಚೆನ್ನಾಗಿ ಬೆಳೆಯಲಿ ಎಂದು ಇಷ್ಟುದಿನ ಡಿಸ್ಟರ್ಬ್ ಮಾಡಿರಲಿಲ್ಲ. ಆದರೆ ಈಗ ನಾನು ಅನಾರೋಗ್ಯ ಪೀಡಿತನಾಗಿದ್ದು, ಕೊನೆ ಬಾರಿ ಮಗಳು ಹಾಗೂ ಕುಟುಂಬದವರನ್ನು ಒಮ್ಮೆ ನೋಡಬೇಕು ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಮಗ ಅಭಿಜಿತ್ ಕಳೆದ ವರ್ಷ ನನ್ನ ನೋಡಲು ಬಂದಿದ್ದ. ಮಗಳ ಇಮೇಜ್ ಗೆ ಡ್ಯಾಮೇಜ್ ಆಗಬಾರದು ಎಂದು ಇಷ್ಟು ವರ್ಷ ಸುಮ್ಮನಿದ್ದೆ. ಇವರಿಗೋಸ್ಕರ ಇಡೀ ಜೀವನವನ್ನೇ ತ್ಯಾಗ ಮಾಡಿದ್ದೇನೆ. ನಾನು ಅವರಿಂದ ಏನೂ ನಿರೀಕ್ಷೆ ಮಾಡುತ್ತಿಲ್ಲ, ಆದರೆ ನಾನು ಸತ್ತರೆ ಮಣ್ಣಾಕಿ ಹೋಗಲಿ ಎಂದು ಅಲವತ್ತುಕೊಂಡಿದ್ದಾರೆ. ಅಲ್ಲದೇ ತಮ್ಮ ಬಳಿ ಇದ್ದ ಅನುಶ್ರೀ ಹಾಗೂ ಆಕೆಯ ತಾಯಿಯ ಫೋಟೋಗಳನ್ನು ತೋರಿಸಿದ್ದಾರೆ.
ಸದ್ಯ ಸಂಪತ್ ಕುಮಾರ್ ಬೆಂಗಳೂರಿನ ಅಭಯ ವಸಿಷ್ಠ ಆಸ್ಪತ್ರೆಗೆ ದಾಖಲಾಗಿದ್ದು, ಶಿವಲಿಂಗೇಗೌಡ ಎನ್ನುವವರು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇನ್ನು ಆಸ್ಪತ್ರೆ ವೈದ್ಯರು ಕೂಡ ಸಂಪತ್ ಕುಮಾರ್ ಆರೋಗ್ಯ ತೀರಾ ಗಂಭೀರವಾಗಿದ್ದು, ಎದ್ದು ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಅನುಶ್ರೀ ಹಾಗೂ ಆಕೆಯ ಕುಟುಂಬದವರು ಯಾರೂ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.




